ಬೆಂಗಳೂರು: ಮೆಟ್ರೋ ಟಿಕೆಟ್ ದರ ಏರಿಕೆ ನಿರ್ಣಯಕ್ಕೆ ವಿಪಕ್ಷಗಳು ಸೇರಿ ಪ್ರಯಾಣಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇನ್ನು ಈ ಬಗ್ಗೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರ ಸೂಚನೆ ಮೇರೆಗೆ ದರ ಏರಿಕೆಗೆ ತಾತ್ಕಾಲಿಕ ತಡೆ ಬಿದ್ದಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದರು. ಆದರೆ, ಇದೀಗ ಬಿಎಂಆರ್‌ಸಿಎಲ್ ಮಾತ್ರ ನಾಳೆಯಿಂದಲೇ (ಫೆ.9) ದರ ಏರಿಕೆ ಆಗುವುದು ಖಚಿತ ಎಂದು ತಿಳಿಸಿದೆ.
ಸೋಮವಾರದಿಂದ ಪರಿಷ್ಕೃತ ಟಿಕೆಟ್ ದರ ಜಾರಿಯಾಗುವುದಾಗಿ ಬಿಎಂಆರ್‌ಸಿಎಲ್ ಇತ್ತೀಚೆಗೆ ಸ್ಪಷ್ಟಪಡಿಸಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಎಂಆರ್‌ಸಿಎಲ್ ಎಂಡಿ ರವಿಶಂಕರ್ ಅವರು, ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ಅಧಿಸೂಚನೆ ಬಾರದ ಕಾರಣ ಮೆಟ್ರೋ ಟಿಕೆಟ್ ದರ ಏರಿಕೆಗೆ ಸದ್ಯ ತಡೆಯಿಲ್ಲ. ಆದಾಗ್ಯೂ, ಒಂದು ವೇಳೆ, ತುರ್ತಾಗಿ ದರ ಏರಿಕೆ ನಿಲ್ಲಿಸುವಂತೆ ಆದೇಶ ಬಂದರೆ ಮಾತ್ರ ಈ ನಿರ್ಧಾರಕ್ಕೆ ಬ್ರೇಕ್ ಬೀಳಲಿದೆ ಎಂದು ತಿಳಿಸಿದ್ದಾರೆ.
ಮೆಟ್ರೋ ದರ ಏರಿಕೆಗೆ ತಡೆ ನೀಡಲಾಗಿದೆ ಎಂದಿದ್ದ ತೇಜಸ್ವಿ ಸೂರ್ಯ
ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರ ತಡೆ ನೀಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಶನಿವಾರ ತಿಳಿಸಿದ್ದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಸುದೀರ್ಘವಾಗಿ ಫೋನ್ ಮೂಲಕ ಚರ್ಚಿಸಿ, ಸೋಮವಾರದಿಂದ ಜಾರಿಗೆ ಬರಲಿರುವ ರಾಜ್ಯ ಸರ್ಕಾರದ ಬೆಂಗಳೂರು ಮೆಟ್ರೋ ದರದ ಅನ್ಯಾಯದ ಹೆಚ್ಚಳದ ವಿರುದ್ಧ ತಕ್ಷಣದ ಹಸ್ತಕ್ಷೇಪಕ್ಕೆ ಮನವಿ ಮಾಡಿದ್ದೇನೆ.
ಬೆಂಗಳೂರು, ಈಗಾಗಲೇ ಭಾರತದಲ್ಲೇ ಅತ್ಯಂತ ದುಬಾರಿ ಮೆಟ್ರೋ ದರವನ್ನು ಹೊಂದಿದೆ ಎಂದು ನಾನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಮತ್ತೊಂದು ದರ ಏರಿಕೆಯು ಲಕ್ಷಾಂತರ ನಾಗರಿಕರಿಗೆ ಸಾರ್ವಜನಿಕ ಸಾರಿಗೆಯನ್ನು ಎಟುಕದಂತೆ ಮಾಡುತ್ತದೆ. ಮೆಟ್ರೋದ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂದು ವಿವರಿಸಲಾಗಿದೆ.
ಪ್ರಸ್ತಾವಿತ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಅವರು ಸೂಚಿಸಿದ್ದು ,ಇದು ಸೋಮವಾರದಿಂದ ಜಾರಿಗೆ ಬರುವುದಿಲ್ಲ. ದರ ನಿಗದಿ ಸಮಿತಿಯಲ್ಲಿನ ಲೋಪದೋಷಗಳ ಬಗ್ಗೆ ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದ್ದು, ರಾಜ್ಯ ಸರ್ಕಾರ ವಿನಂತಿಸಿದರೆ ಹೊಸ ಸಮಿತಿಯನ್ನು ರಚಿಸುವ ಬಗ್ಗೆ ಪರಿಗಣಿಸಬಹುದು ಎಂದು ತಿಳಿಸಿದ್ದರು. ಆದರೆ, ಇದೀಗ ಕೇಂದ್ರದಿಂದ ಯಾವುದೇ ಲಿಖಿತ ಅಧಿಸೂಚನೆ ಬಾರದ ಹೊರತು ದರ ಏರಿಕೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಮೆಟ್ರೋ ದರ ಎಷ್ಟು ಏರಿಕೆಯಾಗಲಿದೆ?
ಮೆಟ್ರೋ ದರ ಏರಿಕೆಯಲ್ಲಿ ಶೇಕಡಾ 5 ರಷ್ಟು ದರ ಹೆಚ್ಚಳವಾಗಬಹುದು. ಕನಿಷ್ಠ 1 ರೂಪಾಯಿಂದ 5 ರೂಪಾಯಿವರೆಗೂ ಬದಲಾವಣೆಯಾಗಬಹುದು. ಅಂದರೆ ಸದ್ಯ ಕನಿಷ್ಠ ಮೆಟ್ರೋ ದರ 10 ರೂಪಾಯಿ ಇದ್ದು, 11 ರೂಪಾಯಿಗೆ ಏರಿಕೆಯಾಗಬಹುದು. ಅಲ್ಲದೆ, ಮೆಟ್ರೋ ಗರಿಷ್ಠ ಟಿಕೆಟ್ ದರ 90 ರೂಪಾಯಿ ಇದ್ದು, ದರ ಏರಿಕೆಯ ಬಳಿಕ 95 ರೂಪಾಯಿ ಆಗಬಹುದು ಎಂದು ತಿಳಿದುಬಂದಿದೆ.
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಬಿಎಂಆರ್‌ಸಿಎಲ್ ಅಸ್ತು, ಬೆಂಗಳೂರಿಗರಿಗೆ ಇನ್ನೊಂದು ಬರೆ
ಇನ್ನು, ವೈಟ್‌ಫೀಲ್ಡ್ - ಚಲ್ಲಘಟ್ಟವರೆಗಿನ ನೇರಳೆ ಮಾರ್ಗ ಮತ್ತು ರೇಷ್ಮೆ ಸಂಸ್ಥೆ - ಮಾದಾವರವರೆಗಿನ ಹಸಿರು ಮಾರ್ಗದಲ್ಲಿ ಪ್ರಸ್ತುತ ದರ 90 ರೂ. ಇದ್ದು, ದರ ಏರಿಕೆಯಿಂದ ಶೇ.5ರಷ್ಟು ಹೆಚ್ಚಳವಾದರೆ 95 ರೂ.ಆಗಲಿದೆ. ಅಲ್ಲದೆ, ಆರ್.ವಿ. ರಸ್ತೆ - ಬೊಮ್ಮಸಂದ್ರವರೆಗಿನ ಹಳದಿ ಮಾರ್ಗದಲ್ಲಿ ಪ್ರಸ್ತುತ 60 ರೂ. ದರ ಇದ್ದು, ದರ ಏರಿಕೆ ಬಳಿಕ 63 ರೂ. ಆಗಲಿದೆ.