ಬೆಂಗಳೂರು: ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಶಾಸಕರು ಮತ ಚಲಾಯಿ ಸುವ ನಿಯಮಾವಳಿಗಳಲ್ಲಿರುವ ದ್ವಂದ್ವ ನೀತಿಯನ್ನು ಪ್ರಶ್ನಿಸಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದಾರೆ.
ಒಂದೇ ದಿನ ಎರಡು ಚುನಾವಣೆಗಳು ನಡೆದರೆ ಶಾಸಕರು ಎರಡು ಬೇರೆ ಬೇರೆ ರೀತಿಯ ನಿಯಮ ಪಾಲಿಸಬೇಕಾದ ಗೊಂದಲದ ಬಗ್ಗೆ ಅವರು ಪತ್ರದಲ್ಲಿ ಸ್ಪಷ್ಟೀಕರಣ ಕೋರಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಹಿನ್ನೆಲೆಯಲ್ಲಿ, ಶಾಸಕರು (ಮತದಾರರ ನೆಲೆಯಲ್ಲಿ) ವರ್ತಿಸಬೇಕಾದ ನಿಯಮಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ಸುರೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಈ ನಿಯಮಾವಳಿ ಗಳ ಹಿಂದಿರುವ ಅಸಲಿ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: S Suresh Kumar: ವೋಟ್ ಚೋರಿ ಕಲ್ಪನೆಯ ಜನಕ ಯಾರು?: ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಪ್ರಶ್ನೆ
ಇತ್ತೀಚೆಗೆ ನಮ್ಮ ರಾಜ್ಯದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಹಾಗೂ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಚುನಾವಣೆಗಳು ನಡೆದಿದ್ದವು. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಎರಡೂ ಚುನಾವಣೆ ಗಳಿಗೂ ವಿಧಾನ ಸಭಾ ಸದಸ್ಯರೇ ಮತದಾರರಾಗಿದ್ದಾರೆ.
ಆದರೆ, ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ಮತ ಚಲಾಯಿಸುವಾಗ ತಾವು ಗುರುತು ಮಾಡಿದ ಮತಪತ್ರವನ್ನು ಅಲ್ಲಿ ಕುಳಿತಿರುವ ತಮ್ಮ ಪಕ್ಷದ ಏಜೆಂಟರಿಗೆ ಕಡ್ಡಾಯವಾಗಿ ತೋರಿಸಿ ಹಾಕ ಬೇಕಿರುತ್ತದೆ. ಆದರೆ, ಅದೇ ವಿಧಾನ ಪರಿಷತ್ ಚುನಾವಣೆಯಲ್ಲಿ ಇದೇ ಶಾಸಕರಿಗೆ ಗೌಪ್ಯ ಮತದಾನದ ಸೌಲಭ್ಯವನ್ನು ನೀಡಲಾಗಿರುತ್ತದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಉಲ್ಲೇ ಖಿಸಿದ್ದಾರೆ.
ಅಡ್ಡ ಮತದಾರನ್ನು ಕಂಡುಹಿಡಿಯಲು ಸಾಧ್ಯವೇ ?: ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನವಾಗಿದೆ ಎಂದು ಬಿಜೆಪಿ ಒಪ್ಪಿಕೊಂಡಿರುವ ನಡುವೆಯೇ ಈ ರೀತಿ ಮಾಡಿದವರಾರು ಎನ್ನುವ ವಾಸ್ತವಿಕತೆ ತಿಳಿಯಲು ಸಿ.ಟಿ.ರವಿ ನೇತೃತ್ವದ ಮೂವರ ಸತ್ಯಶೋಧನಾ ಸಮಿತಿ ರಚಿಸಿದೆ. ಹೀಗಿದ್ದರೂ ಯಾರು ಅಡ್ಡ ಮತದಾನ ಮಾಡಿದ್ದಾರೆ ಎನ್ನುವುದು ಕಂಡುಹಿಡಿಯುವುದು ಕಷ್ಟಕರ ಸಮಿತಿ ಸತ್ಯಾಸತ್ಯತೆಯ ವರದಿ ನೀಡಿದರೂ, ಅದರಲ್ಲಿ ನಿಜವೆಷ್ಟಿರುತ್ತದೆ ಎಂದು ಹೇಳಲಾಗದು.
ನಿಯಮಾವಳಿಗಳ ಉದ್ದೇಶವೇನು?
ಒಂದೊಮ್ಮೆ ರಾಜ್ಯಸಭೆಯ ಚುನಾವಣೆಗಳು ಅವಿರೋಧವಾಗಿ ಆಯ್ಕೆಯಾಗದೇ ಹೋಗಿದ್ದರೆ, ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಎರಡೂ ಚುನಾವಣೆಗಳು ಒಂದೇ ದಿನ ನಡೆಯುತ್ತಿದ್ದವು. ಅಂತಹ ಸಂದರ್ಭದಲ್ಲಿ ಅದೇ ವಿಧಾನಸಭಾ ಸದಸ್ಯರು ರಾಜ್ಯಸಭೆಗೆ ಮತ ಹಾಕುವಾಗ ತಮ್ಮ ಏಜೆಂಟರಿಗೆ ಬ್ಯಾಲೆಟ್ ಪೇಪರ್ ತೋರಿಸಬೇಕಾಗುತ್ತದೆ ಮತ್ತು ಅದೇ ದಿನ ವಿಧಾನ ಪರಿಷತ್ತಿಗೆ ಮತ ಚಲಾಯಿಸುವಾಗ ಗೌಪ್ಯತೆ ಕಾಪಾಡಿಕೊಳ್ಳಬೇಕಾಗುತ್ತದೆ. ಒಂದೇ ದಿನ, ಒಂದೇ ಮತದಾರರಾಗಿ ವರ್ತಿಸುವಾಗ ಶಾಸಕರಿಗೆ ಈ ದ್ವಂದ್ವ ನೀತಿ ಏಕೆ? ಈ ರೀತಿಯ ವಿಭಿನ್ನ ನಿಯಮಾವಳಿಗಳ ಹಿಂದೆ ಇರುವ ಉದ್ದೇಶವಾದರೂ ಏನು? ಎಂದು ಸುರೇಶ್ ಕುಮಾರ್ ಪತ್ರದ ಮೂಲಕ ಚುನಾವಣಾ ಆಯೋಗವನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ, ಸಾರ್ವಜನಿಕವಾಗಿ ಮತ್ತು ರಾಜಕೀಯ ವಲಯ ದಲ್ಲಿ ಉದ್ಭವಿಸಿರುವ ಈ ಗೊಂದಲಕ್ಕೆ ಶೀಘ್ರವೇ ಸ್ಪಷ್ಟೀಕರಣ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.