ಬೆಂಗಳೂರು: ಜನನಿಬಿಡ ವಸತಿ ಪ್ರದೇಶಕ್ಕೆ ಕಾಡಾನೆಯೊಂದು ನುಗ್ಗಿ ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ವೃದ್ಧರೊಬ್ಬರನ್ನು (Wild elephant attack Bengaluru) ದಾರುಣವಾಗಿ ತುಳಿದು ಸಾಯಿಸಿರುವ ಭೀಕರ ಘಟನೆ ಇಂದು ಮುಂಜಾನೆ ನಡೆದಿದೆ. ಮೈಸೂರು ರಸ್ತೆಯ ಕೆಂಗೇರಿ ಸಮೀಪವಿರುವ ಆರ್.ಆರ್. ವೈದ್ಯಕೀಯ ಕಾಲೇಜಿನ (Rajarajeswari Medical College) ಹಿಂಭಾಗದ ಅಂಚೆಪಾಳ್ಯದಲ್ಲಿ ದುರ್ಘಟನೆ ಸಂಭವಿಸಿದ್ದು, ಅಂಚೆಪಾಳ್ಯ ನಿವಾಸಿ ನಾಗರಾಜ್ (60) ಆನೆ ದಾಳಿಗೆ ಬಲಿಯಾದ ದುರ್ದೈವಿ.
ನಾಗರಾಜ್ ಅವರು ಎಂದಿನಂತೆ ಇಂದು ಮುಂಜಾನೆ 5 ಗಂಟೆಯ ಸುಮಾರಿಗೆ ವಾಯುವಿಹಾರಕ್ಕೆ (ವಾಕಿಂಗ್) ತೆರಳಿದ್ದರು. ಈ ವೇಳೆ ಏಕಾಏಕಿ ಕಾಲೇಜಿನ ಹಿಂಭಾಗದ ಗಿಡಗಂಟಿಗಳ ಮಧ್ಯದಿಂದ ಪ್ರತ್ಯಕ್ಷವಾದ ಕಾಡಾನೆ, ನಾಗರಾಜ್ ಅವರ ಮೇಲೆ ದಾಳಿ ಮಾಡಿದೆ. ನಾಗರಾಜ್ ಅವರ ಕಿರುಚಾಟ ಕೇಳಿ ಸ್ಥಳೀಯರು ಓಡಿ ಬರುವಷ್ಟರಲ್ಲಿ ಆನೆ ಅಲ್ಲಿಂದ ಓಡಿ ಹೋಗಿದೆ ಎನ್ನಲಾಗಿದೆ. ಆನೆ ದಾಳಿಯ ರಭಸಕ್ಕೆ ಸುತ್ತಮುತ್ತಲಿನ ಎರಡು ಮನೆಗಳ ಕಾಂಪೌಂಡ್ ಗೋಡೆಗಳಿಗೆ ಹಾನಿಯಾಗಿವೆ.
ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಗರಾಜ್ ಅವರನ್ನು ತಕ್ಷಣವೇ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತ ನಾಗರಾಜ್ ಮಗಳು ಶೋಭಾ ಅವರು ತಂದೆ ಜೊತೆ ವಾಕಿಂಗ್ಗೆ ಹೋಗಿದ್ದು, ಈ ವೇಳೆ ಆನೆ ನೋಡುತ್ತಿದ್ದಂತೆ ಅವರು ಅಲ್ಲಿಂದ ಓಡಿಹೋಗಿದ್ದಾರೆ.
ಮನೆಗೆ ನುಗ್ಗಲು ಯತ್ನಿಸಿದ ಚಿರತೆಯನ್ನು ದಿಟ್ಟವಾಗಿ ಎದುರಿಸಿದ ಶ್ವಾನ; ರೋಚಕ ಹಣಾಹಣಿಯಲ್ಲಿ ಕೊನೆಗೆ ಗೆದ್ದಿದ್ದು ಯಾರು?
ಕಳೆದ ವಾರ ಬನಶಂಕರಿ ಮತ್ತು ಬ್ಯಾಡರಹಳ್ಳಿ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಬನಶಂಕರಿ ಆರನೇ ಹಂತದ ಜನವಸತಿ ಪ್ರದೇಶದಲ್ಲಿ ಚಿರತೆಯೊಂದು ರಾಜಾರೋಷವಾಗಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕೇಶವ್ ಎಂಬುವವರ ಮನೆಯ ಮುಂಭಾಗದಲ್ಲಿ ರಾತ್ರಿ ವೇಳೆ ಚಿರತೆ ಸಂಚರಿಸಿದೆ. ಮನೆಯ ನಾಯಿ ಜೋರಾಗಿ ಬೊಗಳಿದಾಗ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ. ಮಾರನೇ ದಿನ ಹೆಜ್ಜೆ ಗುರುತುಗಳನ್ನು ಕಂಡು ಸಿಸಿಟಿವಿ ಪರಿಶೀಲಿಸಿದಾಗ ಸುಮಾರು ಎರಡು ವರ್ಷದ ಪ್ರಾಯದ ಚಿರತೆ ಇರುವುದು ಖಚಿತವಾಗಿತ್ತು. ಇದಕ್ಕೂ ಮುನ್ನ ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಹಾಗೂ ನೈಸ್ ರಸ್ತೆ ಸುತ್ತಮುತ್ತಲಿನ ಭಾರತ್ ನಗರದಲ್ಲಿ ಚಿರತೆ ಹಲವು ಬಾರಿ ಕಾಣಿಸಿಕೊಂಡಿತ್ತು.