ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ (Chennamma) ಅವರ ನಿಧನದ ಸುದ್ದಿ ಕೇಳಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಕಣ್ಣೀರಿಟ್ಟಿದ್ದಾರೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತುರ್ತು ಪೆರೋಲ್ ಕೋರಿ ಜೈಲಾಧಿಕಾರಿಗಳಿಗೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. ತುರ್ತು ಸಂದರ್ಭಗಳಲ್ಲಿ ಪೆರೋಲ್ ನೀಡಲು ಕಾನೂನಿನಲ್ಲಿ ಅವಕಾಶ ಇದೆ. ಈ ಬಗ್ಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಗೃಹದ ಮುಖ್ಯ ಅಧೀಕ್ಷಕರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ತುರ್ತು ಸಂದರ್ಭದಲ್ಲಿ ಸಜಾ ಬಂಧಿ ಬಂಧಿಗಳಿಗೆ 15 ದಿನ ಪರೋಲ್ ನೀಡಲು ಅವಕಾಶವಿದೆ. ಅರ್ಜಿ ಸಲ್ಲಿಸಿದ ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಸೆಕ್ಷನ್‌ಗಳ ಆರೋಪ ಇರುವುದರಿಂದ ಕಾನೂನು ತಜ್ಞರ ಸಲಹೆ ಪಡೆದು ಪೆರೋಲ್ ನೀಡಲಾಗುತ್ತದೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಚೆನ್ನಮ್ಮರ ಪ್ರೀತಿಯ ಮೊಮ್ಮಗನಾಗಿದ್ದರೂ ಆಕೆಯ ಕೊನೆ ಕಾಲದಲ್ಲಿ ಕನಿಷ್ಠ ಅವರ ಮುಖವನ್ನು ನೋಡಲೂ ಸಾಧ್ಯವಾಗದ ಕಾರಣ ಪ್ರಜ್ವಲ್ ಭಾವುಕರಾಗಿದ್ದಾರೆ. ಅಜ್ಜಿಯನ್ನು ನೆನೆದು ಪ್ರಜ್ವಲ್ ಬಿಕ್ಕಿ ಬಿಕ್ಕಿ ಅತ್ತಿದ್ದು, ರಾತ್ರಿಯಿಡೀ ನಿದ್ದೆ ಮಾಡದೆ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.
ಉಸಿರಾಟದ ಸಮಸ್ಯೆಯಿಂದಾಗಿ ಕಳೆದ 3 ದಿನಗಳ ಹಿಂದೆ ಹೆಚ್‌ಎಎಲ್‌ನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಚೆನ್ನಮ್ಮ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಪತ್ನಿ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ದೇವೇಗೌಡರು ಕಣ್ಣೀರು ಹಾಕಿದ್ದಾರೆ. ನಾಲ್ಕೈದು ಗಂಟೆ ಅವರ ಬಳಿಯೇ ಕೂತಿದ್ದರು. ಪತ್ನಿಯ ಹಣೆಗೆ ಕುಂಕುಮ ಇಟ್ಟು, ಹೂ ಮುಡಿಸಿ ಮುಖವನ್ನೇ ನೋಡುತ್ತಾ ಭಾವುಕರಾದರು.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಸಮೀಪದ ಕ್ಯಾತನಹಳ್ಳಿ ಬಳಿ ಇರುವ ದೇವೇಗೌಡರ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಚೆನ್ನಮ್ಮನವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನದ ವೇಳೆಗೆ ನಡೆಯಲಿದೆ. ಶಾಮಿಯಾನ ಹಾಗೂ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನಿಂದ 4 ಸಾವಿರ ಕುರ್ಚಿಗಳನ್ನು ತರಿಸಿ ಸ್ಥಳದಲ್ಲಿ ಹಾಕಲು ವ್ಯವಸ್ಥೆ ನಡೆಯುತ್ತಿದೆ. ಅಂತ್ಯಕ್ರಿಯೆಯಲ್ಲಿ ರಾಜ್ಯದ ವಿವಿಧ ಭಾಗದ ಜನಪ್ರತಿನಿಧಿಗಳು ಭಾಗಿ ಸಾಧ್ಯತೆ ಹಿನ್ನೆಲೆ ಅಗತ್ಯ ತಯಾರಿ ನಡೆಸಲಾಗುತ್ತಿದೆ.