Animal Cruelty: ಸಾಕಲೆಂದು ಬಂದವಳು, ನೆಲಕ್ಕೆ ಬಡಿದು ನಾಯಿಮರಿಯನ್ನು ಕೊಂದಳು! ಮಹಿಳೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ
viral video: ಕೆಲವರ ಕ್ರೌರ್ಯಕ್ಕೆ ಕಾರಣ ಊಹಿಸಲೂ ಸಾಧ್ಯವಿಲ್ಲ ಎಂಬುದು ಈ ಘಟನೆಯಿಂದ ರುಜುವಾತು ಆಗಿದೆ. ಆ ಮನೆ ಮಾಲೀಕರು ತಾವು ಇಲ್ಲದಾಗ ತಮ್ಮ ನಾಯಿ ಮರಿಯನ್ನು ನೋಡಿಕೊಳ್ಳಲಿ ಎಂದು ಒಬ್ಬಾಕೆ ಮಹಿಳೆಯನ್ನು ನೇಮಿಸಿಕೊಂಡಿದ್ದಾರೆ. ಆದರೆ ಸಾಕಲೆಂದು ಬಂದವಳೇ ಆ ನಾಯಿ ಮರಿಗೆ ಯಮಸ್ವರೂಪಿಯಾಗಿದ್ದಾಳೆ. ಅದೂ ಆಕೆ ನಾಯಿ ಮರಿ ಮೇಲೆ ತೋರಿದ್ದು ಅಂತಿಂಥಾ ಕ್ರೌರ್ಯವಲ್ಲ. ಲಿಫ್ಟ್ ಒಳಗೆ ನಾಯಿಮರಿಯನ್ನು ಅದರ ಕೊರಳಿಗೆ ಕಟ್ಟಿದ ಬೆಲ್ಟ್‌ನಿಂದಲೇ ಎತ್ತಿ ಬಟ್ಟೆ ಕುಕ್ಕಿದಂತೆ ಕುಕ್ಕಿ ಕೊಂದುಹಾಕಿದ್ದಾಳೆ. ನಂತರ ನಾಯಿ ಮರೆ ಹೇಗೆ ಸತ್ತಿತು ಎಂದು ತನಗೆ ಗೊತ್ತೇ ಇಲ್ಲ ಎಂದು ನಾಟಕ ಆಡಿದ್ದಾಳೆ.
-
ಹರೀಶ್ ಕೇರ
Nov 3, 2025 6:23 PM
ಬೆಂಗಳೂರು, ನ.03: ಬೆಂಗಳೂರು (Bengaluru) ನಗರದಲ್ಲಿ ಮಹಿಳೆಯೊಬ್ಬಳು ಪುಟ್ಟ ನಾಯಿ ಮರಿ (puppy) ಮೇಲೆ ಕ್ರೌರ್ಯ ಮೆರೆದು ಅದನ್ನು ಕೊಂದುಹಾಕಿದ (Animal cruelty) ಬರ್ಬರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ (viral video) ಆಗಿದೆ. ಲಿಫ್ಟ್ನಲ್ಲಿ ಎರಡು ನಾಯಿ ಮರಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಕೆಲಸದ ಮಹಿಳೆ ಒಂದು ನಾಯಿ ಮರಿಯನ್ನು ಲಿಫ್ಟ್‌ನಲ್ಲೇ ಬಡಿದು ಬಡಿದು (killing) ಸಾಯಿಸಿದ್ದಾಳೆ. ಈ ಭೀಕರ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಅಕ್ಟೋಬರ್ 31ರಂದು ಬಾಗಲೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ರಾಶಿ ಎಂಬಾಕೆ ತಾನು ಸಾಕಿದ ನಾಯಿಗಳನ್ನು ನೋಡಿಕೊಳ್ಳಲೆಂದು ಕೆಲಸದ ಮಹಿಳೆಯನ್ನು ನೇಮಕ ಮಾಡಿದ್ದರು. ಆದರೆ ಈ ಮನೆಕೆಲಸದಾಕೆ ಕ್ರೂರವಾಗಿ ಪುಟ್ಟ ನಾಯಿ ಮರಿಯನ್ನೇ ಕೊಂದಿದ್ದಾಳೆ. ಮುದ್ದಾಗಿದ್ದ ಎರಡು ಪಪ್ಪಿಗಳನ್ನು ಕರೆದುಕೊಂಡು ಮನೆಯಿಂದ ಹೊರಗೆ ಬಂದ ಮಹಿಳೆ ನೇರವಾಗಿ ಲಿಫ್ಟ್ ಏರಿದ್ದಾಳೆ. ಬಳಿಕ ಎರಡರಲ್ಲಿ ಒಂದು ನಾಯಿ ಮರಿಯನ್ನು ಜೋರಾಗಿ ಎತ್ತಿ ಎಸೆದು ಕೊಂದಿದ್ದಾಳೆ.
ಕೆಲಸಕ್ಕೆಂದು ಸೇರಿದ ಪುಷ್ಪಲತಾ ಎಂಬ ಮಹಿಳೆ ಈ ಕೃತ್ಯವೆಸಗಿದ್ದಾಳೆ. ಮುದ್ದಾದ ಗೂಫಿ ಎಂಬ ಶ್ವಾನವನ್ನು ಕೊಂದ ಈ ಮಹಿಳೆ, ಬಳಿಕ ಇದರಿಂದ ನೊಂದವಳಂತೆ ನಾಟಕವಾಡಿದ್ದಾಳೆ. ನಾಯಿಮರಿ ಯಾಕೆ ಸತ್ತಿತು ಎಂದು ಗೊತ್ತಾಗಿಲ್ಲ, ಇದ್ದಕ್ಕಿದ್ದಂತೆ ಬಿದ್ದು ಸತ್ತುಹೋಗಿದೆ ಎಂದು ಪ್ರಲಾಪಿಸಿದ್ದಾಳೆ. ಆದರೆ ಮಾಲಿಕರು ಸಂಶಯದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆಸಿ ನೋಡಿದಾಗ ಆಕೆಯ ಕಳ್ಳಾಟ ಬಯಲಾಗಿದೆ.
ಇದನ್ನೂ ಓದಿ: Pushkar Fair: 21 ಕೋಟಿ ರೂ. ಮೌಲ್ಯದ ಕೋಣ ಹಠಾತ್ ಸಾವು; ವಿಮೆ ಹಣಕ್ಕಾಗಿ ಮೂಕ ಪ್ರಾಣಿಯ ಕೊಲೆ?
ನಾಯಿ ಸಾಕಲೆಂದೇ ಈಕೆಯನ್ನು ನೇಮಿಸಿ ಸಂಬಳ ಕೊಡುತ್ತಿದ್ದ ಮಾಲೀಕರು, ಮನೆಗೆಲಸದವಳು ಮಾಡಿದ ಈ ಕೆಲಸ ನೋಡಿ ಶಾಕ್ ಆಗಿದ್ದಾರೆ. ಆ ಮೂಕ ಜೀವಿ ಈ ಮಹಿಳೆಗೆ ಏನು ಮಾಡಿತ್ತು, ಯಾಕಾಗಿ ಅದಕ್ಕೆ ಈ ಶಿಕ್ಷೆ ಎಂದು ಛೀಮಾರಿ ಹಾಕಿದ್ದಾರೆ. ಇದೀಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗ್ತಿದೆ. ಈ ಸಂಬಂಧ ಮಹಿಳೆಯ ಮೇಲೆ ದೂರು ನೀಡಲಾಗಿದೆ. ಮಹಿಳೆ ಮಾನಸಿಕ ಅಸ್ವಸ್ಥಳಿರಬಹುದು ಎಂದು ಭಾವಿಸಲಾಗಿದೆ.
ಕಚೇರಿ ಲೈಟ್ ಸ್ವಿಚ್ ಆಫ್ ಮಾಡಿದ್ದಕ್ಕೆ ಸಹೋದ್ಯೋಗಿಯ ಕೊಲೆ
ಬೆಂಗಳೂರು: ಕಚೇರಿಯಲ್ಲಿ ಲೈಟ್ ಸ್ವಿಚ್ ಆಫ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದ್ಯೋಗಿಗಳ ಜಗಳ ನಡೆದು ಅದು ಕೊಲೆಯಲ್ಲಿ (Murder Case) ಅಂತ್ಯಗೊಂಡಿದೆ. ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಿತ್ರದುರ್ಗ ಮೂಲದ 40 ವರ್ಷದ ಭೀಮೇಶ್ ಬಾಬು ಕೊಲೆಯಾದ ವ್ಯಕ್ತಿ. ಆಂಧ್ರಪ್ರದೇಶದ ವಿಜಯವಾಡದ ನಿವಾಸಿ 24ರ ಹರೆಯದ ಸೋಮಾಲ ವಂಶಿ ಕೊಲೆ ಮಾಡಿದ ಯುವಕ. ಇಬ್ಬರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಲೈಟ್ ಆಫ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ ಎಂದು ವರದಿಯಾಗಿದೆ.
ಶನಿವಾರ ಬೆಳಗಿನ ಜಾವ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. . ಈ ಇಬ್ಬರು ಯುವಕರು ಡಾಟಾ ಡಿಜಿಟಲ್ ಬ್ಯಾಂಕ್ ಎಂಬ ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಡಾಟಾ ಡಿಜಿಟಲ್ ಬ್ಯಾಂಕ್ ಸಂಸ್ಥೆಯು ದಿನನಿತ್ಯದ ಚಿತ್ರೀಕರಣದ ವೀಡಿಯೊಗಳನ್ನು ಸಂಗ್ರಹಿಸುವ ಕೆಲಸ ಮಾಡುತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲೈಟ್ ಆಫ್ ಮಾಡುವ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಮಾತಿನ ಚಕಮಕಿಯಿಂದ ಕೋಪಗೊಂಡ ಸೋಮಾಲ ವಂಶಿ ಅಲ್ಲೇ ಇದ್ದ ಡಂಬಲ್ಸ್‌ನಿಂದ ಭೀಮೇಶ್ ಅವರ ಹಣೆಗೆ ಹೊಡೆದಿದ್ದಾನೆ.
ಪರಿಣಾಮ ಭೀಮೇಶ್ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಕೊಲೆ ಮಾಡಿದ ನಂತರ ಆರೋಪಿ ಸೋಮಾಲ ವಂಶಿ ಸೀದಾ ಬಂದು ಗೋವಿಂದರಾಜ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಆತನ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಂತರ ಆತನನ್ನು ಪೊಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Tejpal Singh: ರಾಷ್ಟ್ರ ಮಟ್ಟದ ಯುವ ಕಬಡ್ಡಿ ಆಟಗಾರನನ್ನು ಗುಂಡಿಕ್ಕಿ ಹತ್ಯೆ