ಬೆಂಗಳೂರು: ಬೆಂಗಳೂರಿನ ಆರ್ ವಿ ವಿಶ್ವವಿದ್ಯಾನಿಲಯದಲ್ಲಿ ನಡೆದ 2005ನೇ ಸಾಲಿನ, ನಾಲ್ಕನೆ ಆವೃತ್ತಿಯ ಟೀನ್ ಇಂಡೀ ಫಿಲ್ಮ್ ಅವಾರ್ಡ್ಸ್ (ಟಿಐಎಫ್ಎ) ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. 13-25 ವಯೋಮಾನದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಿ ಮೂಡಿಬಂದ ಕಾರ್ಯಕ್ರಮವು, ಹೊಸತನದ ಪ್ರಯೋಗಗಳಿಗೆ ವೇದಿಕೆ ಸಾಕ್ಷಿಯಾಯಿತು.
5 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸಿನಿಮಾ ತಯಾರಿಕೆಯ ವಿವಿಧ ವಿಷಯ ಗಳನ್ನು ಚರ್ಚಿಸಲಾಯಿತು. ಈ ವೇಳೆ ವಿದ್ಯಾರ್ಥಿಗಳು ಕಥೆ ನಿರೂಪಣೆ, ಪ್ರದರ್ಶನ, ಮಾಸ್ಟರ್ ಕ್ಲಾಸ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಆರಂಭದಲ್ಲಿ ಚಲನಚಿತ್ರೋತ್ಸವವು ಈಶಾನ್ಯ ಭಾರತದ ಚಲನಚಿತ್ರಗಳ ಪ್ರದರ್ಶನದೊಂದಿಗೆ ಆರಂಭ ವಾಯಿತು. ಆ ಬಳಿಕ ನಾನಾ ಭಾಗದ ಸಂಸ್ಕೃತಿ ಅನಾವರಣಕ್ಕೆ ಸಾಕ್ಷಿಯಾಯಿತು.
ಕೇವಲ ಭಾರತ ಮಾತ್ರವಲ್ಲ ವಿದೇಶಗಳಿಂದಲೂ ಈ ಚಲನಚಿತ್ರೋತ್ಸವಕ್ಕೆ ಗಣ್ಯರು ಆಗಮಿಸಿದ್ದರು. ರಾಜ್ಯ ರಾಜಧಾನಿಯಲ್ಲಿ ಈಗಾಗಲೇ ಆಯೋಜನೆಗೊಳ್ಳುವ ಬಿಐಎಸ್ಎ ಸ್ಇಎಸ್ ಮತ್ತು ಬಿಐಎಸ್ಎಫ್ಎಫ್ ಚಲನಚಿತ್ರೋತ್ಸವದ ಬಳಿಕ ಇದು ಮೂರನೇ ಅತಿದೊಡ್ಡ ಚಲನಚಿತ್ರೋತ್ಸವವಾಗಿ ರೂಪುಗೊಂಡಿದೆ.
ಈ ಆವೃತ್ತಿಯಲ್ಲಿ ಹೆಚ್ಚಿನ ಉದ್ಯಮಗಳು ತೊಡಗಿಸಿಕೊಂಡಿದ್ದವು. ನಿರ್ಮಾಪಕರು, ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಪಟ್ಟವರು, ಹಿರಿಯ ಪತ್ರಕರ್ತರು, ಡಿಜಿಟಲ್ ಕ್ರಿಯೆಟರ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಮಾರ್ಗದರ್ಶನ ನೀಡಲು ಆಗಮಿಸಿದ್ದರು. ಹೊಸ ಪ್ರತಿಭೆಗಳು ಹಾಗೂ ಅವರಿಗೆ ವೃತ್ತಿಪರ ಮಾರ್ಗದರ್ಶನ ನೀಡಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಇನ್ನು ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಪ್ರಮುಖರು, ಸಾಧಕ ಉದ್ಯಮಿಗಳು ಉಪಸ್ಥಿತರಿದ್ದರು.
ಇನ್ನು ಭವಿಷ್ಯದ ಸಿನಿಮಾ ನಿರ್ದೇಶಕರನ್ನು ಗುರುತಿಸುವ ಈ ಚಲನಚಿತ್ರೋತ್ಸವದಲ್ಲಿ ವಿಜೇತರಾದವರಿಗೆ ಭಾರತದ ಅತಿದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬೆಂಬಲ ವಾಗಿ ನಿಲ್ಲಲಿದೆ. ಅವರ ಚಲನಚಿತ್ರಗಳನ್ನು ತಜ್ಞರ ಮಾರ್ಗದರ್ಶನದಲ್ಲಿ ಅದನ್ನು ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ.
ಇದೇ ವೇಳೆ ಆಯೋಜಕರು ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದು, ಬೆಂಗಳೂರು ಮತ್ತು ಈಶಾನ್ಯದ ಯುವ ಪ್ರತಿಭೆಗಳ ಸಹಯೋಗಕ್ಕಾಗಿ ಭವಿಷ್ಯದಲ್ಲಿ ಗುವಾಹಟಿಯಲ್ಲಿ ಟಿಐಎಫ್ಎ ರೋಡ್ ಶೋ ಆಯೋಜಿಸುವುದಾಗಿ ಘೋಷಿಸಿದರು.
ಇನ್ನು ಈ ವೇಳೆ ಆರ್ ವಿ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಆಂಡ್ ಕ್ರಿಯೇಟಿವ್ ಆರ್ಟ್ಸ್ ನ ಡೀನ್ ಪ್ರೊ. (ಡಾ.). ಪಿಯೂಷ್ ರಾಯ್ ಮಾತನಾಡಿ, ‘ಟಿಐಎಫ್ಎ ರಾಷ್ಟ್ರೀಯ ಪ್ರತಿಭೆಗಳನ್ನು ಅನಾವರಣಗೊಳಿಸುವ ಕಾರ್ಯ ಮಾಡುತ್ತದೆ. ಪ್ರತಿ ಆವೃತ್ತಿ ಯು ಸಿನಿಮಾವನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಬಯಸುವ ಯುವ ಚಲನಚಿತ್ರ ನಿರ್ದೇಶಕರ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ’ ಎಂದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ, ತೀರ್ಪುಗಾರರಾಗಿದ್ದ ಚಲನಚಿತ್ರ ನಿರ್ದೇಶಕ ಅಮಿತ್ ಬೆಹ್ಲ್ ಅವರು ಮಾತನಾಡಿ, ‘ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳು ತಮ್ಮ ಪರಿಕಲ್ಪನೆಗಳನ್ನು ಚಿತ್ರಗಳ ಮೂಲಕ ತೋರಿಸುವುದು ನಿಜಕ್ಕೂ ರೋಮಾಂಚನಕಾರಿ ವಿಚಾರ. ಎಲ್ಲಾ ಚಿತ್ರಗಳಲ್ಲೂ ತಂತ್ರಜ್ಞಾನ ಲೋಪ ಇರಲಿಲ್ಲ. ಅದು ಇಷ್ಟವಾಯಿತು.
ವಿದ್ಯಾರ್ಥಿಗಳ ಚಿಂತನೆ ಪರಿಶುದ್ಧವಾಗಿತ್ತು. ಇಲ್ಲಿರುವ ವಿದ್ಯಾರ್ಥಿಗಳು ಅದೃಷ್ಟವಂತರು. ಕನ್ನಡ, ಹಿಂದಿ ಮತ್ತು ತಮಿಳು ಚಲನಚಿತ್ರೋದ್ಯಮಗಳು ಹತ್ತಿರದಲ್ಲಿವೆ. ಹಾಗಾಗಿ ಇಲ್ಲಿಂದ ಸಾಧ್ಯವಾದಷ್ಟು ಕಲಿಯಿರಿ. ಟಿಐಎಫ್ಎ ಬೆಳೆದು ಮುಂದೆ ಇನ್ನು ಅತಿದೊಡ್ಡ ಉತ್ಸವ ವಾಗಲಿದೆ’ ಎಂದು ಹೇಳಿದರು.