Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ
Bidar ATM Robbery: ಭದ್ರತೆಯಲ್ಲಿ ಏನೆಲ್ಲಾ ಲೋಪವಾಗಿದೆ ಎಂಬ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬೀದರ್: ಎಟಿಎಂ ದರೋಡೆ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ (Bidar ATM Robbery), ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾಗಿರುವುದು ಅತ್ಯಂತ ದುಃಖಕರ ವಿಷಯ. ಈ ಘಟನೆ ಸಂಬಂಧ ತಕ್ಷಣವೇ ಗೃಹ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ, ಆರೋಪಿಗಳನ್ನು ಶೀಘ್ರ ಬಂಧಿಸಲು ಮತ್ತು ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಭದ್ರತೆಯಲ್ಲಿ ಏನೆಲ್ಲಾ ಲೋಪವಾಗಿದೆ ಎಂಬ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಮೃತರ ಅವರ ಕುಟುಂಬಕ್ಕೆ ಅಗತ್ಯ ಸಹಾಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸತ್ತು ಹೊಗಿದೆ: ಮಾಜಿ ಸಚಿವ ಖೂಬಾ ಆಕ್ರೋಶ
ಹಾಡಹಗಲೇ ಕೊಲೆ, ದರೋಡೆ ನಡೆಯುತ್ತಿದೆ ಎಂದರೆ ಬೀದರ್ ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸತ್ತು ಹೊಗಿದೆ ಎಂದೆನಿಸುತ್ತಿದೆ. ಕೆಲವೇ ದಿನಗಳ ಹಿಂದೆ ಸಚಿನ್ ಪಾಂಚಾಳ್ ಆತ್ಮಹತ್ಯೆಯಾಯಿತು. ಈಗ ಅಮಾಯಕ ಸಿಬ್ಬಂದಿಯ ಜೀವ, ಕಾರಣವಿಲ್ಲದೆ ಹೊಗಿದೆ. ಈ ತರಹದ ಘಟನೆಗಳು ನಡೆಯುತ್ತಿದ್ದರೆ ಜಿಲ್ಲೆಯಲ್ಲಿ ಸಾಮಾನ್ಯ ಜನರು ನಿರಾತಂಕವಾಗಿ ಬದುಕಲು ಸಾಧ್ಯವಿಲ್ಲ. ಇದು ಉಸ್ತುವಾರಿ ಸಚಿವರ ಸಂಪೂರ್ಣ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ್ ಖಂಡ್ರೆ ಇದರ ಹೊಣೆಹೊತ್ತು ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
ಎಟಿಎಂಗೆ ಹಣ ತುಂಬುವಾಗ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸೆಕ್ಯೂರಿಟಿ ಸಿಬ್ಬಂದಿ ಗಿರಿ ವೆಂಕಟೇಶ್ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾಜಿ ಸಚಿವ ಮಾತನಾಡಿದ್ದಾರೆ.
ಈ ರಾಜ್ಯ ಸರ್ಕಾರಕ್ಕೆ, ಜಿಲ್ಲಾ ಉಸ್ತುವಾರಿ ಮಂತ್ರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲದೆ ಇರುವುದು, ದೇಶ ದ್ರೋಹದ ಘಟನೆಗಳಿಗೆ, ಸಮಾಜಘಾತುಕ ಶಕ್ತಿಗಳಿಗೆ ಇವರು ನೀಡುತ್ತಿರುವ ಕುಮ್ಮಕ್ಕು ಇಂತಹ ಘಟನೆಗಳಿಗೆ ಪ್ರೇರಣೆ ನೀಡುತ್ತಿವೆ ಎಂದರು.
ಆಡಳಿತ ವ್ಯವಸ್ಥೆಯ ಮಧ್ಯದಲ್ಲಿ ಅಧಿಕಾರಿಗಳಿಗೆ ಅವರ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು. ಆದರೆ ಇಲ್ಲಿ ಉಸ್ತುವಾರಿ ಮಂತ್ರಿ ಎಲ್ಲಾ ನಾನೇ ಮಾಡಬೇಕು, ನನ್ನ ಕೈಯಲ್ಲಿ ಎಲ್ಲವು ಇರಬೇಕು ಎಂದುಕೊಂಡು ಆಡಳಿತದಲ್ಲಿ ಅತಿಯಾದ ಹಸ್ತಕ್ಷೇಪ ಮಾಡಿದ್ದಕ್ಕೆ ಅಧಿಕಾರಿಗಳಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಇಂತಹ ಘಟನೆಗಳು ಜರುಗುತ್ತಿವೆ. ಮಂತ್ರಿ ಈಶ್ವರ ಖಂಡ್ರೆ ಸ್ವಲ್ಪ ಅಧಿಕಾರಿಗಳಿಗೆ ಅವರ ಕೆಲಸ ಮಾಡಲು ಬಿಡಬೇಕು ಎಂದರು.
ಘಟನಾ ಸ್ಥಳದ ಅಕ್ಕಪಕ್ಕದಲ್ಲೆ ಡಿ.ಸಿ.ಆಫೀಸ್, ಕೋರ್ಟ್, ತಹಸೀಲ್ದಾರ್ ಆಫೀಸ್ ಇವೆ. ಪೋಲೀಸರು ಯಾವಾಗಲೂ ಇರುವ ಸ್ಥಳವಾಗಿದೆ, ಇಂತಹ ಸ್ಥಳದಲ್ಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದರೆ ಇದು ಜಿಲ್ಲೆಯ ಪೋಲೀಸ್ ವ್ಯವಸ್ಥೆಯ ವೈಫಲ್ಯವಾಗಿದೆ. ಇವಾಗ ಪೋಲೀಸರು ಕಳ್ಳನನ್ನು ಹಿಡಿಯಬಹುದು, ಆದರೆ ಅಮಾಯಕ ಸಿಬ್ಬಂದಿಯ ಜೀವ ಮತ್ತೆ ಕೊಡಲು ಯಾರಿಂದಲೂ ಸಾಧ್ಯವಿಲ್ಲಾ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ | Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ