Bidar KDP Meeting: ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಬಿಜೆಪಿ ಶಾಸಕ- ಕಾಂಗ್ರೆಸ್ ಎಂಎಲ್‌ಸಿ; ಸಚಿವ ಖಂಡ್ರೆ ಎದುರೇ ಫೈಟಿಂಗ್!
ಬಿಜೆಪಿ ಶಾಸಕ ಸಿದ್ದು ಪಾಟೀಲ್ ಅವರು ಹುಮ್ನಾಬಾದ್ನಲ್ಲಿ ಅರಣ್ಯ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆಗೆ ಹೇಳಿದ್ದಾರೆ. ಇದರಿಂದ ಕೆರಳಿದ ಭೀಮರಾವ್ ಪಾಟೀಲ್ ಅದನ್ನು ಕೇಳಲು ನೀನ್ಯಾರು? ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಸಭೆಯಲ್ಲಿ ಜಗಳ ನಡೆದಿದೆ.
ಬೀದರ್ ಕೆಡಿಪಿ ಸಭೆಯಲ್ಲಿ ಶಾಸಕ ಸಿದ್ದು ಪಾಟೀಲ್ ಮತ್ತು ಎಂಎಲ್‌ಸಿ ಭೀಮರಾವ್ ಪಾಟೀಲ್ ನಡುವೆ ಜಗಳ ನಡೆಯಿತು. -
ಬೀದರ್, ಜ.5: ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ (Bidar KDP Meeting) ಹುಮ್ನಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಕಾಂಗ್ರೆಸ್ ಎಂಎಲ್‌ಸಿ ಭೀಮರಾವ್ ಪಾಟೀಲ್ ಪರಸ್ಪರ ಕೈ ಕೈ ಮಿಲಾಯಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡಿರುವ ಘಟನೆ ನಡೆದಿದೆ.
ಸಭೆ ನಡೆಯುತ್ತಿರುವ ವೇಳೆ ಮಾತನಾಡಿದ ಬಿಜೆಪಿ ಶಾಸಕ ಸಿದ್ದು ಪಾಟೀಲ್, ಹುಮ್ನಾಬಾದ್ನಲ್ಲಿ ಅರಣ್ಯ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆಗೆ ಹೇಳಿದ್ದಾರೆ. ಇದರಿಂದ ಕೆರಳಿದ ಭೀಮರಾವ್ ಪಾಟೀಲ್ ಅದನ್ನು ಕೇಳಲು ನೀನ್ಯಾರು? ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ. ಬಳಿಕ ಇಬ್ಬರು ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಭೆಯಲ್ಲಿ ಪರಿಸ್ಥಿತಿ ಕೈಮೀರುತ್ತಿರುವುದನ್ನು ಮನಗಂಡ ಸಚಿವ ಈಶ್ವರ್ ಖಂಡ್ರೆ ಅವರು, ಗಲಾಟೆಯನ್ನು ತಣ್ಣಗಾಗಿಸಲು ಯತ್ನಿಸಿದರು. ಆದರೆ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೆಡಿಪಿ ಸಭೆಯನ್ನು ಮುಂದೂಡಲಾಗಿದೆ ಎಂದು ಸಚಿವರು ಘೋಷಿಸಿದರು.
ಇನ್ನು ಶಾಸಕ-ಎಂಎಲ್‌ಸಿ ನಡುವೆ ಜಗಳ ನಡೆದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹುಮ್ನಾಬಾದ್ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಆದೇಶಿಸಿದ್ದಾರೆ.
ಶಿಷ್ಟಾಚಾರ ಉಲ್ಲಂಘನೆ ಆರೋಪ; ಕೇಂದ್ರ ಸಚಿವ ಸೋಮಣ್ಣ ಜತೆ ಶಿವರಾಜ್ ತಂಗಡಗಿ ವಾಗ್ವಾದ

ಕೊಪ್ಪಳ: ಜಿಲ್ಲೆಯ ಹಿಟ್ನಾಳದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲಾನ್ಯಾಸದ ವೇಳೆ ಹೈಡ್ರಾಮಾ ನಡೆದಿದೆ. ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಸಂಸದರು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಫೋಟೊ, ಹೆಸರು ನಮೂದಿಸಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಎದುರೇ ಕೈ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ವೇದಿಕೆ ಮೇಲಕ್ಕೆ ಕುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸಚಿವ ವಿ.ಸೋಮಣ್ಣ ಕಾರಿನ ಮುಂಭಾಗ ಕುಳಿತು ಆಕ್ರೋಶ ಹೊರಹಾಕಿದರು.
ಸಚಿವ ಸೋಮಣ್ಣ ಪೂಜೆ ನೆರವೇರಿಸಿ ಶಂಕುಸ್ಥಾಪನೆ ಮಾಡಲು ಮುಂದಾದಾಗ, ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಕೂಡ ಪ್ರೋಟೋಕಾಲ್ ವಿಚಾರವನ್ನು ಎತ್ತಿ ಆಕ್ಷೇಪ ವ್ಯಕ್ತಪಡಿಸಿದರು. ವೇದಿಕೆ ಬಳಿ ಸಚಿವ ಸೋಮಣ್ಣ, ಇಂತಹ ಕಾರ್ಯಕ್ರಮಗಳಲ್ಲಿ ಪಟಾಲಂ ತೆಗೆದುಕೊಂಡು ಗಲಾಟೆ ಮಾಡಬೇಡಿ ಎಂದು ಹೇಳಿದ್ದರಿಂದ ಶಿವರಾಜ್ ತಂಗಡಗಿ ಮತ್ತಷ್ಟು ಕೆರಳಿದರು. ಪರಿಣಾಮ ವೇದಿಕೆಯ ಬಳಿಯೇ ಕೇಂದ್ರ ಮತ್ತು ರಾಜ್ಯ ಸಚಿವರ ನಡುವೆ ತೀವ್ರ ವಾಗ್ವಾದ ನಡೆಯಿತು.
ಕರ್ನಾಟಕದ ದೀರ್ಘಾವಧಿ ಸಿಎಂ ದಾಖಲೆ; ಜನರ ಆಶೀರ್ವಾದವೇ ಕಾರಣ ಎಂದ ಸಿದ್ದರಾಮಯ್ಯ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಸೋಮಣ್ಣ, ಕಾಮಗಾರಿಯ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರದ್ದು. ಕಾರ್ಯಕ್ರಮದ ಸಂಬಂಧ ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ಶಿಲಾನ್ಯಾಸ ಕಲ್ಲಿನಲ್ಲಿ ಸ್ಥಳೀಯ ಸಂಸದರು, ಶಾಸಕರ ಹೆಸರು ಇದೆ. ಆದರೆ, ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.