ಗಿಗ್ ಕಾರ್ಮಿಕರಿಗೆ ಗುಡ್ ನ್ಯೂಸ್; ಸಾಮಾಜಿಕ ಭದ್ರತೆ ವಿಧೇಯಕ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲು ಕ್ಯಾಬಿನೆಟ್ ಒಪ್ಪಿಗೆ
Gig Workers: ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ - 2024 ಅನ್ನು ಅನುಮೋದಿಸಿ ಸುಗ್ರೀವಾಜ್ಞೆ ಹೊರಡಿಸಲು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ನಿರ್ಧರಿಸಿದೆ.


ಬೆಂಗಳೂರು: ಇ-ಕಾಮರ್ಸ್ ಹಾಗೂ ಫುಡ್ ಡೆಲಿವರಿ ಕಂಪನಿಗಳ ಡೆಲಿವರಿ ಬಾಯ್ಸ್‌ಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ - 2024 (Karnataka Platform based Gig Workers (Social Security and Welfare ) Bill - 2024) ಅನ್ನು ಅನುಮೋದಿಸಿ ಸುಗ್ರೀವಾಜ್ಞೆ ಹೊರಡಿಸಲು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ನಿರ್ಧರಿಸಿದೆ. ಈ ಮೂಲಕ ಡೆಲಿವರಿ ಬಾಯ್ಸ್‌ಗೆ (ಗಿಗ್ ಕಾರ್ಮಿಕರು) ಸಾಮಾಜಿಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಇಟ್ಟಿದೆ.
ರಾಜ್ಯದಲ್ಲಿ ಗಿಗ್ ಕಾರ್ಮಿಕರ ಸಂಖ್ಯೆ ಸುಮಾರು 2.30 ಲಕ್ಷದಷ್ಟಿದೆ. ಆದರೆ ಇವರಿಗೆ ಅಪಘಾತ ಪರಿಹಾರ ಸೇರಿ ಯಾವುದೇ ಸರ್ಕಾರಿ ಸೌಲಭ್ಯಗಳು ಇಲ್ಲ. ಅಪಘಾತ ಅಥವಾ ಮರಣ ಸಮಯದಲ್ಲಿ ಅವರನ್ನು ಅವಲಂಬಿಸಿದವರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ.
ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ( ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ ಜಾರಿಗೆ ತರುವ ಮೂಲಕ ಅಪಘಾತ ಪರಿಹಾರ, ನೈಸರ್ಗಿಕ ಮರಣ ಪರಿಹಾರ, ಅಂತ್ಯ ಸಂಸ್ಕಾರ ವೆಚ್ಚ, ವಿವಾಹ ಭತ್ಯೆ, ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ, ಭವಿಷ್ಯ ನಿಧಿ, ವಸತಿ ಸೌಲಭ್ಯ ಈ ರೀತಿಯಲ್ಲಿ ಹಂತ ಹಂತವಾಗಿ ಒದಗಿಸಲು ನಿರ್ಧಾರ ಮಾಡಲಾಗಿದೆ.
“ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿದೇಯಕ - 2024 (Karnataka Platform based Gig Workers (Social Security and Welfare ) Bill - 2024) ಅನ್ನು ಅನುಮೋದಿಸಿ ಸುಗ್ರೀವಾಜ್ಞೆ ಹೊರಡಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು… pic.twitter.com/Q0vh43PzR1
— DIPR Karnataka (@KarnatakaVarthe) April 11, 2025
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
- ಈ ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘದವರು ಮಾಡಿದ್ದ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸಿರುವ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್‌ದಾಸ್ ಅವರ ಆಯೋಗವು ಸಲ್ಲಿಸಿರುವ ವರದಿಯ ಆಧಾರದ ಮೇಲೆ ಎಸ್‌ಐಟಿ ರಚನೆಗೆ ನಿರ್ಧಾರ.
- 38 ತಾಲೂಕು ಆಸ್ಪತ್ರೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶಂಕಿತ ಕ್ಷಯರೋಗಿಗಳು ಭೇಟಿ ನೀಡುವ 121 ಸಮುದಾಯ ಆರೋಗ್ಯ ಕೇಂದ್ರಗಳಿಗೆ 14.24 ಕೋಟಿ ರೂ. ವೆಚ್ಚದಲ್ಲಿ 159 True NAAT ಯಂತ್ರಗಳ ಖರೀದಿಗೆ ನಿರ್ಧಾರ.
- ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪರಿಸರ ಸ್ನೇಹಿಯಾಗಿಸಲು ವಿಶ್ವಬ್ಯಾಂಕ್ ನಿಂದ 3,000 ಕೋಟಿ ರೂ. ಸಾಲ ಪಡೆದು ವಿವಿಧ ಸಾರಿಗೆ ನಿಗಮಗಳಿಗೆ ಒಟ್ಟು 4,000 ಬಸ್‌ಗಳನ್ನು ಖರೀದಿಸಲು ಕರ್ನಾಟಕ ಎಲೆಕ್ಟ್ರಿಕ್ ಬಸ್ ಪ್ರೋಗ್ರಾಂ ಅಡಿಯಲ್ಲಿ ಸಲ್ಲಿಸಿರುವ ಪ್ರಸ್ತಾವನೆಗೆ ಘಟನೋತ್ತರ ಅನುಮೋದನೆ.
ಈ ಸುದ್ದಿಯನ್ನೂ ಓದಿ | Caste census: ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ; ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ನಿರ್ಧಾರ