ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste census: ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ; ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಅಂತಿಮ ನಿರ್ಧಾರ

Caste census: ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2024ರ ಫೆಬ್ರವರಿ 29ರಂದು ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ಜಾತಿ ಗಣತಿಯ ಅಂತಿಮ ವರದಿ ಸಲ್ಲಿಕೆ ಮಾಡಿತ್ತು. ಈ ವರದಿಯು ಸಂಪುಟ ಸಭೆಯಲ್ಲಿ ಶುಕ್ರವಾರ ಮಂಡನೆ ಆಗಿದೆ. ಆದರೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.

ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ

Profile Prabhakara R Apr 11, 2025 3:27 PM

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 (ಜಾತಿ ಗಣತಿ) ವರದಿ ಅನುಷ್ಠಾನ (Caste census) ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ಸಚಿವ ಸಂಪುಟ ಸಭೆ ನಡೆದಿದೆ. ಸಭೆಯಲ್ಲಿ ಜಾತಿ ಗಣತಿ ವರದಿಯ ಜಾರಿಯ ಸಾಧ್ಯಾಸಾಧ್ಯತೆ ಬಗ್ಗೆ ಸುದೀರ್ಘ ಚರ್ಚೆ ನಡಸಲಾಗಿದ್ದು, ಅಂತಿಮವಾಗಿ ಮುಂದಿನ ಸಂಪುಟ ಸಭೆಯಲ್ಲಿ (Cabinet Meeting) ತೀರ್ಮಾನ ಕೈಗೊಳ್ಳುವುದೆಂದು ನಿರ್ಧರಿಸಲಾಯಿತು. ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಲಕೋಟೆ ತೆರೆಯಲಾಗಿದ್ದು, ಸಚಿವರ ಕೈಗೆ ಜಾತಿ ಗಣತಿ ದತ್ತಾಂಶ ನೀಡಿದ ಬಳಿಕ ಆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು.

ಸಭೆಯಲ್ಲಿ ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಆಲಿಸಿದ ಸಿದ್ದರಾಮಯ್ಯ, ಏ.17ಕ್ಕೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಜಾತಿ ಗಣತಿ ವರದಿಯನ್ನು 2024ರ ಫೆಬ್ರವರಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದಾದ ನಂತರ ಜಾತಿ ಗಣತಿ ವರದಿ ಸೋರಿಕೆಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಎಚ್.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರ ಏಪ್ರಿಲ್ 11 ರಿಂದ ಮೇ 30 ರವರೆಗೆ ಸಮೀಕ್ಷೆ ನಡೆಸಿತ್ತು. ಜಾತಿ ವಿವರವೂ ಒಳಗೊಂಡಂತೆ 54 ಮಾನದಂಡಗಳ ಅಧಾರದಲ್ಲಿ ಸಮೀಕ್ಷೆ ಮಾಡಿತ್ತು. ಕಾಂತರಾಜ ಆಯೋಗ ಅವಧಿ ಮುಕ್ತಾಯದಿಂದ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಹೀಗಾಗಿ ಕಾಂತರಾಜ್ ಸಮೀಕ್ಷೆಯ ದತ್ತಾಂಶ ಬಳಸಿಕೊಂಡು ಅಂತಿಮ ವರದಿ ಸಲ್ಲಿಕೆ ಮಾಡುವಂತೆ ಕೆ. ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗಕ್ಕೆ 2023ರಲ್ಲಿ ಸರ್ಕಾರ ಪತ್ರ ಬರೆದಿತ್ತು. ಅದರಂತೆ 2015ರ ಸಮೀಕ್ಷೆಯ ಆಧಾರದ ಮೇಲೆ 2024ರ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆಯಾಗಿತ್ತು.

ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ 2024ರ ಫೆಬ್ರವರಿ 29ರಂದು ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆ ಮಾಡಿತ್ತು. ಇಂದು ಈ ವರದಿಯು ಸಂಪುಟ ಸಭೆಯಲ್ಲಿ ಮಂಡನೆ ಆಗಿದೆ. ಆದರೆ ಯಾವುದೇ ನಿರ್ಧಾರವನ್ನು ಸಭೆ ತೆಗೆದುಕೊಂಡಿಲ್ಲ.

ಈ ಸುದ್ದಿಯನ್ನೂ ಓದಿ | BJP's Jan Akrosh Yatra: ಬೆದರು ಬೊಂಬೆ ರೀತಿ ಜಾತಿ ಗಣತಿ ಬಳಕೆ; ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಕಿಡಿ