ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

School Timings: ಜಾತಿ ಸಮೀಕ್ಷೆ ಅವಧಿ ವಿಸ್ತರಣೆ: ಶಾಲಾ ಸಮಯದಲ್ಲಿ ಬದಲಾವಣೆ

ಗ್ರೇಟರ್‌ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜಾತಿ ಗಣತಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಶಾಲಾ ಸಮಯದಲ್ಲಿ ಬದಲಾವಣೆ ತರಲಾಗಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ಟೋಬರ್‌ 8ರಿಂದ 12ರವರೆಗೆ ಶಾಲಾ ತರಗತಿಗಳನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಸಲಾಗುತ್ತದೆ.

ಶಾಲಾ ಸಮಯದಲ್ಲಿ ಬದಲಾವಣೆ

ಸಾಂದರ್ಭಿಕ ಚಿತ್ರ -

Ramesh B Ramesh B Oct 6, 2025 11:25 PM

ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿ ಗಣತಿ (Caste Census) ಮುಗಿಯದ ಹಿನ್ನೆಲೆಯಲ್ಲಿ ಅದರ ಅವಧಿಯನ್ನು ವಿಸ್ತರಿಸಲಾಗಿದೆ. ಹೀಗಾಗಿ ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯ (School Timings) ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಸೋಮವಾರ (ಅಕ್ಟೋಬರ್‌ 6) ಆದೇಶ ಹೊರಡಿಸಿದೆ. ಈ ಹಿಂದೆ ಜಾತಿ ಗಣತಿಯನ್ನು ಸೆಪ್ಟೆಂಬರ್‌ 22ರಂದು ಆರಂಭಿಸಿ ಅಕ್ಟೋಬರ್‌ 7ರಂದು ಪೂರ್ಣಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಅಂದುಕೊಂಡಂತೆ ಸಮೀಕ್ಷೆ ಮುಗಿಯದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಸಮೀಕ್ಷೆ ಇನ್ನು ಬಾಕಿ ಉಳಿದ ಹಿನ್ನೆಲೆಯಲ್ಲಿ ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದೆಡೆ ಅಕ್ಟೋಬರ್‌ 12ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಹೀಗಾಗಿ ಅಕ್ಟೋಬರ್ 8ರಿಂದ ಶಾಲಾ ಸಮಯವನ್ನು ಪರಿಷ್ಕರಿಸಲಾಗಿದೆ.

ಜಾತಿ ಗಣತಿ ಬಗ್ಗೆ ಬಿಜೆಪಿ ನಾಯಕ ಬಿ.ವೈ, ವಿಜಯೇಂದ್ರ ಹೇಳಿದ್ದಿಷ್ಟು:



ಶಾಲೆಗಳ ಹೊಸ ಸಮಯ

ಬೆಂಗಳೂರು ಹೊರತುಪಡಿಸಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ಟೋಬರ್‌ 8ರಿಂದ 12ರವರೆಗೆ ಶಾಲಾ ತರಗತಿಗಳನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಸಲಾಗುತ್ತದೆ. ನಂತರದ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾಗಬೇಕು. ರಜಾ ದಿನಗಳಲ್ಲಿಯೂ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.

ಗ್ರೇಟರ್‌ ಬೆಂಗಳೂರಿನಲ್ಲಿ ಹೇಗೆ?

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಅಕ್ಟೋಬರ್‌ 8ರಂದು ಸಮೀಕ್ಷೆ ಆರಂಭವಾಗಿ ಅಕ್ಟೋಬರ್‌ 24ರಂದು ಮುಗಿಸಬೇಕಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿನ ಸರ್ಕಾರಿ ಮತ್ತು ಶಾಲಾ ಅನುದಾನಿತ ಶಾಲೆಗಳಲ್ಲಿ ಅಕ್ಟೋಬರ್‌ 8ರಿಂದ ಅಕ್ಟೋಬರ್‌ 24ರವರೆಗೆ ತರಗತಿಗಳನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿರ್ವಹಿಸಿ ನಂತರದ ಅವಧಿಯಲ್ಲಿ ಶಿಕ್ಷಕರು ಸಮೀಕ್ಷೆ ಕಾರ್ಯಕ್ಕೆ ತೆರಳಬೇಕು ಎಂದು ಸೂಚಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Caste Census: ವೈಯಕ್ತಿಕ ಮಾಹಿತಿ ಕೇಳಲು ಹೋಗಬೇಡಿ: ಸಮೀಕ್ಷೆ ಮಾಡೋರಿಗೆ ಡಿಕೆಶಿ ಸಲಹೆ

ಸಮೀಕ್ಷೆ ಸಮರ್ಥಿಸಿದ ಸಿಎಂ

ಬೆಂಗಳೂರು: ʼʼಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಂಕಿ-ಅಂಶಗಳು ಅವಶ್ಯಕ. ಯಾವ ಜಾತಿಯ ಜನರಲ್ಲಿ ಅನಕ್ಷರತೆ, ಬಡತನ, ಜಮೀನು ಇತ್ಯಾದಿಗಳಿಲ್ಲ ಎಂಬುದರ ಮಾಹಿತಿ ಅಗತ್ಯʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ತಿಳಿಸಿದ್ದರು. ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವೂ ಜಾತಿಗಣತಿಗೆ ಮುಂದಾಗಿದೆ

ಜಾತಿ ಸಮೀಕ್ಷೆಯಿಂದ ಸಮಾಜದ ಉದ್ಧಾರ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ʼʼಇದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ತಿಳಿಸಿದಂತೆ ಅಸಮಾನತೆ ಹೋಗಲಾಡಿಸಲು ದುರ್ಬಲರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಸಮಾಜದಲ್ಲಿ ಅಸಮಾನತೆ ನಿರಂತರವಾಗಿರಬೇಕು ಎಂಬುದು ಬಿಜೆಪಿಯವರ ಬಯಕೆ. ನಿರ್ದಿಷ್ಠವಾದ ಜಾತಿಯೊಂದು ಉತ್ತುಂಗದಲ್ಲಿರಬೇಕೆಂದು ಬಿಜೆಪಿ ಬಯಸುತ್ತದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಾಗೂ ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ, ಕೇಂದ್ರ ಸರ್ಕಾರವೂ ಜಾತಿಗಣಿತಿ ನಡೆಸಲು ಮುಂದಾಗಿದೆʼʼ ಎಂದು ಸಿದ್ದರಾಮಯ್ಯ ವಿವರಿಸಿದ್ದರು. ಮೊದಲಿನಿಂದಲೂ ಬಿಜೆಪಿ ಜಾತಿ ಸಮೀಕ್ಷೆಯನ್ನು ವಿರೋಧಿಸುತ್ತಲೇ ಬಂದಿದೆ.