ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಂದಿರಾ ಕ್ಯಾಂಟೀನ್‌ ಅಡುಗೆ ಕೋಣೆಗೂ ವ್ಯಾಪಿಸಿದ ಇರಾನ್‌ ಯುದ್ಧ ತಾಪ: ವೆರೈಟಿ ಮೆನುಗೆ ಕತ್ತರಿ; ಮೊಸರನ್ನವೇ ಗತಿ

LPG Crisis: ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಎಲ್‌ಪಿಜಿ ಅಭಾವವು ಇದೀಗ ರಾಜ್ಯಕ್ಕೂ ತಟ್ಟಿದೆ. ಕೆಲವು ಹೋಟೆಲ್‌ಗಳು ಬಂದ್‌ ಆಗುವ ಭೀತಿ ಎದುರಿಸುತ್ತಿದ್ದರೆ, ಇನ್ನು ಕೆಲವು ಕಡೆ ವೆರೈಟಿ ಮೆನುಗೆ ಕತ್ತರಿ ಹಾಕಿ ಕೆಲವೇ ಕೆಲವು ಐಟಂಗಳನ್ನಷ್ಟೇ ನೀಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್‌, ಶಾಲೆಗಳ ಮಧ್ಯಾಹ್ನ ಬಿಸಿಯೂಟ ಬಂದ್‌ ಆಗುವ ಆತಂಕ ಎದುರಿಸುತ್ತಿವೆ.

ಇಂದಿರಾ ಕ್ಯಾಂಟೀನ್‌, ಬಿಸಿಯೂಟಕ್ಕೂ ತಟ್ಟಿದ ಸಿಲಿಂಡರ್‌ ಕೊರತೆಯ ಎಫೆಕ್ಟ್‌

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Mar 11, 2026 8:58 PM

ಬೆಂಗಳೂರು/ಧಾರವಾಡ, ಮಾ. 11: ಕಳೆದ ತಿಂಗಳಾಂತ್ಯಕ್ಕೆ ಆರಂಭವಾದ ಇರಾನ್ ಮತ್ತು ಇಸ್ರೇಲ್ (Iran-Israel War) ನಡುವಿನ ಸಂಘರ್ಷದ 12 ದಿನ ಕಳೆದರೂ ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ. ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಎಲ್‌ಪಿಜಿ (LPG Crisis) ಅಭಾವವು ಇದೀಗ ರಾಜ್ಯಕ್ಕೂ ತಟ್ಟಿದೆ. ಕೆಲವು ಹೋಟೆಲ್‌ಗಳು ಬಂದ್‌ ಆಗುವ ಭೀತಿ ಎದುರಿಸುತ್ತಿದ್ದರೆ, ಇನ್ನು ಕೆಲವು ಕಡೆ ವೆರೈಟಿ ಮೆನುಗೆ ಕತ್ತರಿ ಹಾಕಿ ಕೆಲವೇ ಕೆಲವು ಐಟಂಗಳನ್ನಷ್ಟೇ ನೀಡಲಾಗುತ್ತಿದೆ. ಹೋಟೆಲ್‌ ಜತೆ ಬಡವರ ಬಂಧು ಎನಿಸಿಕೊಂಡಿರುವ ಇಂದಿರಾ ಕ್ಯಾಂಟೀನ್‌ (Indira Canteens) ಕೂಡ ಸಂಕಷ್ಟ ಎದುರಿಸುತ್ತಿದೆ.

ಬೆಂಗಳೂರಿನಲ್ಲಿ ಕೆಲವು ಇಂದಿರಾ ಕ್ಯಾಂಟೀನ್‌ ಬಂದ್‌ ಆಗಿವೆ ಎನ್ನಲಾಗಿದೆ. ಜತೆಗೆ ಧಾರವಾಡದ ಇಂದಿರಾ ಕ್ಯಾಂಟೀನ್​ನಲ್ಲಿ ಗ್ರಾಹಕರು ಚಪಾತಿ, ರೊಟ್ಟಿ ಬಿಟ್ಟು ಕೇವಲ ಮೊಸರನ್ನಕ್ಕೆ ತೃಪ್ತಿ ಪಡುವಂತಾಗಿದೆ.

ಬುಧವಾರದ ಮೆನು ಪ್ರಕಾರ ಅನ್ನ-ಸಾಂಬಾರ್​, ರೊಟ್ಟಿ ನೀಡಬೇಕಾಗಿತ್ತು. ಆದರೆ ಮಧ್ಯಾಹ್ನ ಮೊಸರನ್ನ ಮಾತ್ರ ನೀಡಲಾಗಿದೆ. ಈಗಾಗಲೇ ಇದ್ದಂತಹ ನಾಲ್ಕು ಸಿಲಿಂಡರ್ ಖಾಲಿಯಾಗಿದ್ದು, ಹೊಸ ಸಿಲಿಂಡರ್​​ ಸಿಗದೇ ಹೋದರೆ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ ಎನ್ನಲಾಗಿದೆ.

ಕೂಡಲೇ ಕ್ರಮ ಕೈಗೊಳ್ಳಿ

ಇಂದಿರಾ ಕ್ಯಾಂಟೀನ್‌ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದರೂ, ನಿರ್ವಹಣೆ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದೆ. ಕಡಿಮೆ ಬೆಲೆಗೆ ಪೌಷ್ಟಿಕಾಂಶಯುಕ್ತ ಆಹಾರ ಒದಿಸುವ ಮೂಲಕ ಇದು ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳ ಪಾಲಿಗೆ ಸಂಜೀವಿನಿ ಎನಿಸಿಕೊಂಡಿದೆ. ʼʼಸಮಯಕ್ಕೆ ಸರಿಯಾಗಿ ಸಿಲಿಂಡರ್ ಪೂರೈಕೆಯಾಗದಿದ್ದರೆ, ಕ್ಯಾಂಟೀನ್ ನಂಬಿಕೊಂಡಿರುವ ನೂರಾರು ಜನರಿಗೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಲಿಂಡರ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕುʼʼ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗ್ಯಾಸ್‌ ಸಿಲಿಂಡರ್‌ ಅಲಭ್ಯ, ಬನಶಂಕರಿ ದೇವಾಲಯದಲ್ಲಿ ಅನ್ನ ಪ್ರಸಾದ ಬಂದ್‌

ಬಿಸಿಯೂಟದ ಮೇಲೂ ಪರಿಣಾಮ

ಗ್ಯಾಸ್‌‍ ಸಿಲಿಂಡರ್‌ಗಳ ಅಲಭ್ಯತೆ ಮಕ್ಕಳ ಬಿಸಿಯೂಟ ಯೋಜನೆಯ ಮೇಲೂ ಪರಿಣಾಮ ಬೀರಿದೆ. ಊಟ ತಯಾರಿಸಲು ಅಗತ್ಯವಿರುವ ಗ್ಯಾಸ್‌‍ ಸಿಲಿಂಡರ್‌ ಕೊರತೆ ಎದುರಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಊಟ ಪೂರೈಕೆ ಮಾಡುವಲ್ಲಿ ತೊಂದರೆ ಉಂಟಾಗುವ ಆತಂಕ ವ್ಯಕ್ತವಾಗಿದೆ. ಮಕ್ಕಳಿಗೆ ಆಹಾರ ತಯಾರಿಸಲು ತಿಂಗಳಿಗೆ ಹಲವು ಸಿಲಿಂಡರ್‌ಗಳು ಬೇಕಾಗುತ್ತವೆ. ಆದರೆ ಕೊರತೆಯಿಂದ ಕಡಿಮೆ ಸಂಖ್ಯೆಯಲ್ಲಿ ಸಿಲಿಂಡರ್​​ ಪೂರೈಕೆಯಾಗುತ್ತಿರುವುದು ಅಡುಗೆ ಸಿಬ್ಬಂದಿಯನ್ನು ಆತಂಕಕ್ಕೆ ತಳ್ಳಿದೆ. ರಾಜ್ಯದ ಎಲ್ಲ ಕಡೆ ಇದೇ ರೀತಿಯ ಚಿತ್ರಣ ಕಂಡು ಬರುತ್ತಿದೆ.

ಅನ್ನ ಪ್ರಸಾದಕ್ಕೆ ತಾತ್ಕಾಲಿಕ ಬ್ರೇಕ್‌

ವಾಣಿಜ್ಯ ಸಿಲಿಂಡರ್‌ ಕೊರತೆಯ ಎಫೆಕ್ಟ್‌ ದೇವಸ್ಥಾನಗಳ ಅನ್ನ ಪ್ರಸಾದದ ಮೇಲೂ ಕಂಡುಬರುತ್ತಿದೆ. ಬೆಂಗಳೂರು ನಗರದ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ವಾಣಿಜ್ಯ ಸಿಲಿಂಡರ್‌ಗಳ ತೀವ್ರ ಕೊರತೆ ಎದುರಾಗಿದೆ. ಇದರ ನೇರ ಪರಿಣಾಮವಾಗಿ, ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಪವಿತ್ರ ಅನ್ನದಾಸೋಹಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ಇನ್ನೂ ಹಲವು ದೇವಸ್ಥಾನಗಳ ಪ್ರಸಾದ ತಯಾರಿಕೆಯ ಮೇಲೂ ಇದು ಪರಿಣಾಮ ಬೀರಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.