ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ ಹಿಂದೂ ಧರ್ಮಕ್ಕೆ ವಾಪಸ್: ಪಿಂಪ್ರಿ-ಚಿಂಚವಾಡದಲ್ಲಿ 'ಶುದ್ಧೀಕರಣ'
ಹಿಂದೂ ಧರ್ಮ ತೊರೆದು ಉದ್ಯಮಿ ಆತಿಫ್ ತಾಸೆಯೊಂದಿಗೆ ವಿವಾಹವಾಗಿದ್ದ 2019ರ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ ಇದೀಗ ಮತ್ತೆ ಹಿಂದೂ ಧರ್ಮಕ್ಕೆ ಮರಳಿರುವುದಾಗಿ ಹೇಳಿದ್ದಾರೆ. ತಮ್ಮ ಹೆಸರನ್ನು ಆದ್ಯಾ ಸರ್ವೆ ಎಂದು ಬದಲಿಸಿಕೊಂಡಿದ್ದು, ವೈಯಕ್ತಿಕ ಜೀವನದಲ್ಲಿ ನಡೆದ ಕೆಲ ಅಹಿತಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸಯಾಲಿ ಸುರ್ವೆ (ಸಂಗ್ರಹ ಚಿತ್ರ) -
ನವದೆಹಲಿ, ಮಾ. 11: 2019ರ 'ಮಿಸ್ ಇಂಡಿಯಾ ಅರ್ಥ್' (Mrs India Earth) ವಿಜೇತೆ ಸಯಾಲಿ ಸುರ್ವೆ (Sayali Surve) ಪತಿಯಿಂದ ಅನುಭವಿಸಿದ ಕಿರುಕುಳದ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಪುಣೆಯ ಪಿಂಪ್ರಿ-ಚಿಂಚವಾಡದಲ್ಲಿ (Pimpri-Chinchwad) ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ 'ಶುದ್ಧೀಕರಣ (purification)' ಪ್ರಕ್ರಿಯೆಯನ್ನು ಪೂರೈಸಿದ ಅವರು, ಈಗ ತಮ್ಮ ಹೆಸರನ್ನು ಆದ್ಯಾ ಸುರ್ವೆ (Aadya Surve) ಎಂದು ಬದಲಾಯಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಮುಂಬೈ ಮೂಲದ ಸಯಾಲಿ ಸುರ್ವೆ 2019ರಲ್ಲಿ ಕುಟುಂಬದ ವಿರೋಧದ ನಡುವೆಯೂ ಮೀರಾ-ಭಯಂದರ್ ಮೂಲದ ಉದ್ಯಮಿ ಆತಿಫ್ ತಾಸೆಯನ್ನು ವಿವಾಹವಾಗಿದ್ದರು. ವಿವಾಹದ ನಂತರ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು 'ಅತೇಜಾ ತಾಸೆ' ಎಂದು ಬದಲಾಯಿಸಿಕೊಂಡಿದ್ದರು. ಆದರೆ ಈ ವೈವಾಹಿಕ ಜೀವನವು ಸುಖಕರವಾಗಿರಲಿಲ್ಲ ಎಂದು ಅವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಸಯಾಲಿ ಸುರ್ವೆ ಅವರ ಘರ್ ವಾಪ್ಸಿ:
Miss India Earth 2019 finalist Sayali Surve married Mohammad Atif against her parents’ wishes in Pune.
— Team Hindu United (@TeamHinduUnited) March 9, 2026
Later she was tortured and forced to accept Islam.
After authorities failed to act, she sought help from Hindu organizations and returned to her roots through Ghar Wapsi. pic.twitter.com/NDLlfSetSl
ಕಿರುಕುಳದ ಆರೋಪಗಳು
"ಆತಿಫ್ ತಾಸೆ ಅವರನ್ನು ಮದುವೆಯಾಗಿದ್ದು ನನ್ನ ಜೀವನದ ಅತಿದೊಡ್ಡ ತಪ್ಪು" ಎಂದು ಹೇಳಿರುವ ಆದ್ಯಾ, ಮದುವೆಯಾದ ಕೆಲವೇ ದಿನಗಳಲ್ಲಿ ಕಿರುಕುಳ ಆರಂಭವಾಯಿತು ಎಂದು ಆರೋಪಿಸಿದ್ದಾರೆ. ತನ್ನನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು ಮತ್ತು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮರಳಿ ಮಾತೃಧರ್ಮಕ್ಕೆ
ಹಲವು ತಿಂಗಳುಗಳ ಕಾಲ ಕಿರುಕುಳ ಸಹಿಸಿಕೊಂಡ ನಂತರ, ಅವರು ಹಿಂದುತ್ವ ಸಂಘಟನೆಗಳನ್ನು ಸಂಪರ್ಕಿಸಿದರು. ಅವರ ಬೆಂಬಲ ಮತ್ತು ಮಾರ್ಗದರ್ಶನದೊಂದಿಗೆ ಹಿಂದೂ ಧರ್ಮಕ್ಕೆ ಮರಳಿ ಬರಲು ನಿರ್ಧರಿಸಿದರು. ಹವನ ಮತ್ತು ಮಂತ್ರಘೋಷಗಳ ಮೂಲಕ ಅವರ ಶುದ್ಧೀಕರಣ ಪ್ರಕ್ರಿಯೆ ನೆರವೇರಿತು.
ಆದ್ಯಾ ಸುರ್ವೆ ಸಂದೇಶವೇನು?
"ಯಾವುದೇ ಹೆಣ್ಣುಮಕ್ಕಳು ಇಂತಹ ಕಿರುಕುಳವನ್ನು ಸಹಿಸಿಕೊಳ್ಳಬೇಡಿ. ರಾವಣರ ಮುಂದೆ ಸೋಲಲು ದೇವರು ನಮಗೆ ಜೀವನ ನೀಡಿಲ್ಲ. ನನಗೆ ನಾಲ್ವರು ಮಕ್ಕಳಿದ್ದಾರೆ, ಅವರ ಭವಿಷ್ಯಕ್ಕಾಗಿ ನಾನು ಹತ್ತು ವರ್ಷಗಳ ಕಾಲ ತಾಳ್ಮೆಯಿಂದಿದ್ದೆ. ಆದರೆ ಮನುಷ್ಯ ಸಹಜವಾಗಿ ನನ್ನ ತಾಳ್ಮೆ ಮೀರಿದಾಗ ಮಕ್ಕಳ ಹಿತದೃಷ್ಟಿಯಿಂದಲೇ ಹೊರಬರಲು ನಿರ್ಧರಿಸಿದೆ" ಎಂದು ಅವರು ಮಹಿಳೆಯರಿಗೆ ಧೈರ್ಯ ತುಂಬಿದ್ದಾರೆ.
ಆದ್ಯಾ ಸುರ್ವೆ ಏವಿಯೇಷನ್‌ನಲ್ಲಿ ಸ್ನಾತಕೋತ್ತರ ಪದವಿ (Master's in Aviation) ಪಡೆದಿದ್ದು, ಪ್ರಸ್ತುತ ಪುಣೆಯಲ್ಲಿ ವಾಸಿಸುತ್ತಿದ್ದಾರೆ.