Chamarajanagar News: ಮಲೆ ಮಹದೇಶ್ವರ ದೇಗುಲದ ಹುಂಡಿ ಎಣಿಕೆ: 28 ದಿನಗಳಲ್ಲಿ 1.94 ಕೋಟಿ ರೂ. ಸಂಗ್ರಹ
Chamarajanagar News: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಲೆ ಮಹದೇಶ್ವರ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 1.94 ಕೋಟಿ ರೂ. ಸಂಗ್ರಹವಾಗಿದೆ. ಹಾಗೂ 63 ಗ್ರಾಂ ಚಿನ್ನ, ಅರ್ಧ ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಈ ಕುರಿತ ವಿವರ ಇಲ್ಲಿದೆ.


ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ (Chamarajanagar News) ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಲೆ ಮಹದೇಶ್ವರ ದೇಗುಲದ (Male Mahadeshwara Temple) ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 1.94 ಕೋಟಿ ರೂ. ಸಂಗ್ರಹವಾಗಿದೆ. ಅಂದಹಾಗೆ, ಇಷ್ಟು ಮೊತ್ತ ಸಂಗ್ರಹವಾಗಿದ್ದು, 28 ದಿನಗಳಲ್ಲಿ ಎಂಬುದು ಗಮನಾರ್ಹ. ಹರಕೆ ರೂಪದಲ್ಲಿ ಹಣ, ಚಿನ್ನ, ಬೆಳ್ಳಿಯನ್ನು ಅರ್ಪಿಸಿದ್ದು, 63 ಗ್ರಾಂ ಚಿನ್ನ, ಅರ್ಧ ಕೆಜಿ ಬೆಳ್ಳಿ ಸಂಗ್ರಹವಾಗಿದೆ.
ಹುಂಡಿ ಎಣಿಕೆ ಕಾರ್ಯವು ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರ ನೇತೃತ್ವದಲ್ಲಿ ನಡೆಯಿತು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಜರುಗಲಿರುವ ಮಹಾ ಶಿವರಾತ್ರಿ ಹಾಗೂ ಯುಗಾದಿ ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನಡೆಯಬೇಕು, ಬರುವ ಭಕ್ತರಿಗೆ ಸಮರ್ಪಕವಾದ ಸೌಲಭ್ಯಗಳು ದೊರೆಯಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದರು.
ಜಾತ್ರೆ ಸಂದರ್ಭ ಬೆಟ್ಟಕ್ಕೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಆಗಮಿಸಲಿದ್ದಾರೆ. ಹಾಗಾಗಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ವಾಸ್ತವ್ಯ, ದಾಸೋಹ, ದೇವರ ದರ್ಶನಕ್ಕೆ ಅಗತ್ಯ ಸೌಕರ್ಯ ಗಳನ್ನು ಯಾವುದೇ ತೊಂದರೆಯಿಲ್ಲದೆ ಕಲ್ಪಿಸಬೇಕು. ಎಲ್ಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಾದಯಾತ್ರೆಯಲ್ಲಿ ಸಹ ಸಾಕಷ್ಟು ಮಂದಿ ಕ್ಷೇತ್ರಕ್ಕೆ ಆಗಮಿಸುವುದರಿಂದ ಮಾರ್ಗ ಮಧ್ಯೆ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧ ಇರುವುದರಿಂದ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ವಸ್ತುಗಳನ್ನು, ಇತರೆ ತ್ಯಾಜ್ಯಗಳನ್ನು ಕೊಂಡೊಯ್ಯದಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಶೌಚಾಲಯ, ಸ್ನಾನದ ವ್ಯವಸ್ಥೆಗಳು ಸಮರ್ಪಕವಾಗಿ ಇರಬೇಕು. ಕ್ಷೇತ್ರದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಹೆಚ್ಚುವರಿ ವೈದ್ಯರು, ಸಿಬ್ಬಂದಿ ನಿಯೋಜಿಸಿ ಅಗತ್ಯ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಪಾದಯಾತ್ರಿಗಳು ಬರುವ ಹಿನ್ನೆಲೆಯಲ್ಲಿ ಕೌದಳ್ಳಿ ಆರೋಗ್ಯ ಕೇಂದ್ರದಲ್ಲಿಯೂ ಪೂರ್ಣ ಅವಧಿಯಲ್ಲಿ ವೈದ್ಯಕೀಯ ಸೇವೆ ಲಭ್ಯವಾಗಬೇಕು. ಪಾದಯಾತ್ರೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ನೇರವಾಗಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಜಾತ್ರಾ ಅವಧಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಸ್ಸುಗಳು ಕಾರ್ಯಾಚರಣೆಯಾಗಲಿ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ತಮಿಳುನಾಡು ರಾಜ್ಯದ ಭಾಗಗಳಿಂದಲೂ ಅಲ್ಲಿನ ಸರ್ಕಾರಿ ಬಸ್ಸುಗಳು ಹೆಚ್ಚು ನಿಯೋಜನೆಯಾಗಲಿ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Honnavar News: ನಾಳೆಯಿಂದ ಹೊನ್ನಾವರದ ಗುಣವಂತೆಯಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ
ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಮಾತನಾಡಿ, ಮಹಾಶಿವರಾತ್ರಿ ಜಾತ್ರೆ ಫೆಬ್ರವರಿ 25 ರಿಂದ ಆರಂಭವಾಗಲಿದ್ದು ಮಾರ್ಚ್ 1 ರವರೆಗೆ ನಡೆಯಲಿದೆ. ಯುಗಾದಿ ಜಾತ್ರಾ ಮಹೋತ್ಸವ ಮಾರ್ಚ್ 27 ರಿಂದ 30 ರವರೆಗೆ ಜರುಗಲಿದೆ. ಜಾತ್ರಾ ಅವಧಿಯಲ್ಲಿ ಭಕ್ತಾಧಿಗಳಿಗೆ ವಿಶೇಷ ದಾಸೋಹ ಇರಲಿದ್ದು, ಬೆಳಿಗ್ಗೆ 7 ರಿಂದ ಮಧ್ಯರಾತ್ರಿ 12 ಗಂಟೆಯವರೆಗೂ ನಿರಂತರವಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.