ಚಾಮರಾಜನಗರ: ಜಿಲ್ಲೆಯಲ್ಲಿ ವನ್ಯಜೀವಿಗಳ ದಾಳಿ ಮಿತಿಮೀರಿದ್ದು, ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಹುಲಿ ದಾಳಿಗೆ (Tiger Attack) ರೈತರೊಬ್ಬರು ಅತ್ಯಂತ ದಾರುಣವಾಗಿ ಬಲಿಯಾಗಿದ್ದಾರೆ. ರೈತನನ್ನು ಕೊಂದ ಹುಲಿಯು ಆತನ ಮೃತದೇಹದ ಭಾಗವನ್ನು ತಿಂದು ಹಾಕಿರುವುದು ಇಡೀ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬಡಗಲಪುರ ಗ್ರಾಮದ ನಿವಾಸಿ ಬಸವಣ್ಣ (65) ಮೃತಪಟ್ಟ ದುರ್ದೈವಿ ರೈತ ಎಂದು ತಿಳಿದು ಬಂದಿದೆ.
ಬಸವಣ್ಣ ತಮ್ಮ ಜಮೀನಿನಲ್ಲಿ ಹಸುಗಳಿಗೆ ಹುಲ್ಲು ಕೊಯ್ಯಲು ತೆರಳಿದ್ದ ಸಂದರ್ಭದಲ್ಲಿ ಪೊದೆಯಲ್ಲಿ ಅಡಗಿದ್ದ ಹುಲಿ ಏಕಾಏಕಿ ದಾಳಿ ನಡೆಸಿದೆ. ಹುಲಿಯ ಹಿಡಿತದಿಂದ ಬಿಡಿಸಿಕೊಳ್ಳಲಾದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹುಲಿ ಬಸವಣ್ಣ ಅವರ ದೇಹವನ್ನು ಜಮೀನಿನಿಂದ ಕೆಲ ದೂರ ಎಳೆದೊಯ್ದು, ದೇಹದ ಕಾಲು ಭಾಗವನ್ನು ತಿಂದು ಹಾಕಿದೆ. ಸಂಜೆ ಕಳೆದರೂ ಬಸವಣ್ಣ ಮನೆಗೆ ಬಾರದಿದ್ದಾಗ ಹುಡುಕಾಡಿದ ಕುಟುಂಬಸ್ಥರಿಗೆ ಈ ಭೀಕರ ದೃಶ್ಯ ಕಂಡುಬಂದಿದೆ. ಸದ್ಯ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಗಣೇಶ ಚತುರ್ಥಿ ದಿನದಂದೇ ಆನೆ ದಾಳಿ ನಡೆಸಿ ರೈತನನ್ನು ಬಲಿ ಪಡೆದ ಘಟನೆ ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ. ಕೋಟೆಕೆರೆ ಗ್ರಾಮದ ಜನ್ನೂರನಾಯಕ(68) ಮೃತ ವೃದ್ಧ. ಇವರು ಸೋಮವಾರ ಹಸುಗಳನ್ನು ಜಮೀನಿನಲ್ಲಿ ಕಟ್ಟುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ತುಳಿದು ಬಿಸಾಡಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಿತರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವನ್ಯಜೀವಿ ವಲಯ ವ್ಯಾಪ್ತಿಗೆ ಕೋಟೆಕೆರೆ ಗ್ರಾಮ ಒಳಪಡಲಿದೆ.
Viral Video: ಕರಡಿ ದಾಳಿಗೆ ಅಪ್ಪ-ಮಗ ಬಲಿ : ಅರಣ್ಯಾಧಿಕಾರಿ ಮೇಲೆ ಕರಡಿ ದಾಳಿಯ ವಿಡಿಯೋ ವೈರಲ್
ಆನೆ ದಾಳಿಗೊಳಗಾಗಿ ರೈತ ಮೃತಪಟ್ಟ ಘಟನೆ ಖಂಡಿಸಿ ಓಂಕಾರ್ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಮಾರ್ಚ್ ತಿಂಗಳಿನಿಂದಲೂ ಕಾಡಾನೆ ಉಪಟಳ ಕೊಡುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ವಹಿಸಿಲ್ಲ. ಸಾಕಷ್ಟು ಬೆಳೆ ಕೂಡ ನಾಶ ಮಾಡಿರುವ ಬಗ್ಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಓಂಕಾರ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ರೈತರು ಕಿಡಿಕಾರಿದ್ದಾರೆ.