ಚಾಮರಾಜನಗರ: ಹನೂರು ತಾಲೂಕಿನ (Hanoor Shootout Case) ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ ಪ್ರಕರಣದ ತನಿಖೆಯನ್ನು ಸಿಐಡಿಗೆ (CID) ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಸಲೀಂ ಅವರು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಆದೇಶಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಯ ಫೈರಿಂಗ್‌ಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಚಾಮರಾಜನಗರದ ರಾಮಪುರಂ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದರೆ, ಹನೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಮತ್ತೊಂದು ಪ್ರಕರಣ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶಾಗ್ಯ ಸಮೀಪದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಆಗಸ್ಟ್ 14 ರಂದು ನಡೆಸಿದ್ದ ಗುಂಡಿನ ದಾಳಿಯಲ್ಲಿ ಹನೂರು ತಾಲೂಕಿನ ತೋಮಿಯರ್ಪಾಳ್ಯದ ನಿವಾಸಿಗಳಾದ ಕುಮಾರ್, ಆಂಥೋಣಿಸ್ವಾಮಿ ಹಾಗೂ ಪೀಟರ್ ಎಂಬುವವರು ಮೃತಪಟ್ಟಿದ್ದರು. ಇದೀಗ ಮರಣೋತ್ತರ ಪರೀಕ್ಷೆಯ ವರದಿ ಹೊರ ಬಿದ್ದಿದೆ. ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿತ್ತು.
ಮೃತರ ಬಟ್ಟೆ ಮತ್ತು ಚರ್ಮದ ಮೇಲೆ ಗನ್‌ಪೌಡರ್ ಕಲೆಗಳು, ಹೊಗೆಯ ಕಪ್ಪು ಕಲೆಗಳು ಹಾಗೂ ಸುಟ್ಟ ಗಾಯಗಳು ಪತ್ತೆಯಾಗಿವೆ. ಇದು ಅತ್ಯಂತ ಸಮೀಪದಿಂದ ಗುಂಡು ಹಾರಿಸಿರುವುದನ್ನು ಸ್ಪಷ್ಟಪಡಿಸಿದೆ. ಎಡ ಎದೆ ಭಾಗಕ್ಕೆ ತಗುಲಿದ ಗುಂಡಿನ ತೀವ್ರತೆಗೆ 2, 3 ಮತ್ತು 4ನೇ ಪಕ್ಕೆಲುಬುಗಳು ಮುರಿದುಹೋಗಿದ್ದು, ಎಡ ಶ್ವಾಸಕೋಶ ಹಾಗೂ ಹೃದಯ ಸಂಪೂರ್ಣ ಛಿದ್ರಗೊಂಡಿದೆ.ಎದೆಯ ಭಾಗದ ಕುಳಿಯಲ್ಲಿ ಸುಮಾರು 600 ಮಿ.ಲೀ. ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ.
ಹನೂರು ಪ್ರಕರಣ: ಅರಣ್ಯ ಅಧಿಕಾರಿಗಳ ತನಿಖೆಯಲ್ಲಿ ಸಾಬೀತು: ಸತ್ತಿದ್ದು ʼಕಳ್ಳʼ ಬೇಟೆಗಾರರು ?
ತೊಡೆಗೆ ಹೊಡೆದ ಶಾಟ್‌ಗನ್‌ನ ಸೀಸದ ಸಣ್ಣ ಗುಂಡುಗಳು ದೇಹದ ಒಳಹೊಕ್ಕು ಯಕೃತ್ತು ಮತ್ತು ಹೊಟ್ಟೆಯ ಒಳಪದರವನ್ನು ತೂರಿಹೋಗಿವೆ. ಅತಿಯಾದ ರಕ್ತಸ್ರಾವ ಮತ್ತು ಆಘಾತದಿಂದ ಸಾವು ಸಂಭವಿಸಿದೆ ಎಂದು ವರದಿ ದೃಢಪಡಿಸಿದೆ.