ವನ್ಯಜೀವಿ ಓಡಾಟವಿರುವ ಚಾರಣಪಥಗಳಲ್ಲಿ ಸಂಚಾರ ನಿಷೇಧ; ಪ್ರವಾಸಿಗರಿಗೆ ಭಾರಿ ನಿರಾಸೆ
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ವಿಭಾಗದಲ್ಲಿ ಚಿರತೆ ದಾಳಿಗೆ ಬಾಲಕ ಬಲಿಯಾದ ಹಿನ್ನೆಲೆಯಲ್ಲಿ ವನ್ಯಜೀವಿಗಳ ಓಡಾಟವಿರುವ ಎಲ್ಲ ಚಾರಣಪಥಗಳಲ್ಲಿನ ಸಂಚಾರ ಬಂದ್ ಮಾಡಿ ಆದೇಶ ಹೊರಡಿಲಾಗಿದೆ. ಸಚಿವ ಈಶ್ವರ ಖಂಡ್ರೆ ಅವರ ಸೂಚನೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಈಶ್ವರ್ ಖಂಡ್ರೆ ಮತ್ತು ಸರ್ಕಾರದ ಅಧಿಸೂಚನೆ -
ಬೆಂಗಳೂರು, ಮೇ 13: ಚಾರಣಪ್ರಿಯರಿಗೆ ರಾಜ್ಯ ಸರ್ಕಾರ್ ಶಾಕ್ ನೀಡಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ (MM Hills) ವನ್ಯಜೀವಿ ವಿಭಾಗದಲ್ಲಿ ಚಿರತೆ ದಾಳಿಗೆ ಬಾಲಕ ಬಲಿಯಾದ ಹಿನ್ನೆಲೆಯಲ್ಲಿ ವನ್ಯಜೀವಿಗಳ ಓಡಾಟವಿರುವ ಎಲ್ಲ ಚಾರಣಪಥಗಳಲ್ಲಿನ ಸಂಚಾರ ಬಂದ್ ಮಾಡಿ ಆದೇಶ ಹೊರಡಿಲಾಗಿದೆ. ಸಚಿವ ಈಶ್ವರ ಖಂಡ್ರೆ (Eshwara Khandre) ಅವರ ಸೂಚನೆ ಮೇರೆಗೆ ಹುಲಿ, ಆನೆ, ಚಿರತೆ ಸಂಘರ್ಷ ಇರುವ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ರಜೆಯಲ್ಲಿ ಟ್ರೆಕ್ಕಿಂಗ್ ಹೋಗಬೇಕೆಂದುಕೊಂಡವರಿಗೆ ಇದರಿಂದ ನಿರಾಸೆಯಾಗಿದ್ದು, ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ʼʼಸಚಿವರ ಸೂಚನೆಯಂತೆ, ಸಾರ್ವಜನಿಕರು ಮತ್ತು ಚಾರಣಿಗರ ಸುರಕ್ಷತೆಯನ್ನು ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ಚಾರಣ ಮತ್ತು ಸಂಚಾರ ಪಥಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಆದೇಶದವರೆಗೆ ಚಿರತೆ, ಹುಲಿ, ಆನೆ, ಕರಡಿ ಸೇರಿ ವನ್ಯಜೀವಿಗಳು ಸಂಚರಿಸುವ ಕಡೆಗಳಲ್ಲಿನ ಪ್ರವೇಶ ತಾತ್ಕಾಲಿಕ ನಿಷೇಧಸಲಾಗಿದೆ.
ಆದೇಶದಲ್ಲಿ ಸರ್ಕಾರ ಹೇಳಿದ್ದೇನು?
ʼʼಮೇ 10ರಂದು ನಾಗಮಲೆ ಅರಣ್ಯ ಪ್ರದೇಶ, ಎಂ.ಎಂ. ಹಿಲ್ಸ್ ವನ್ಯಜೀವಿ ವಿಭಾಗದಲ್ಲಿ ಚಿರತೆ ದಾಳಿಯಿಂದ 10 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ವನ್ಯಪ್ರಾಣಿಗಳು ಸಂಚರಿಸುವ ಸಂಚಾರ ಪಥಗಳಲ್ಲಿ ಸಾರ್ವಜನಿಕರ ಹಾಗೂ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಚಿರತೆ, ಹುಲಿ, ಆನೆ, ಕರಡಿ ಹಾಗೂ ಇತರ ವನ್ಯಪ್ರಾಣಿಗಳು ಸಂಚರಿಸುವ ಹಾಗೂ ಮಾನವ-ವನ್ಯಜೀವಿ ಸಂಘರ್ಷ ಸಂಭವವಿರುವ ಎಲ್ಲ ಸಂಚಾರ ಪಥಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಈ ಸುತ್ತೋಲೆ ತಕ್ಷಣದಿಂದ ಜಾರಿಗೆ ಬಂದು ಮುಂದಿನ ಆದೇಶದವರೆಗೆ ಅನ್ವಯವಾಗಲಿದೆʼʼ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಮಲೆ ಮಹದೇಶ್ಚರ ಬೆಟ್ಟದಲ್ಲಿ ಬಾಲಕ ಬಲಿ ಪಡೆದಿದ್ದ ಚಿರತೆ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದೆ. ಮೈಸೂರಿನಿಂದ ಚಿರತೆ ಕಾರ್ಯಪಡೆ ತಂಡ ಆಗಮಿಸಿದ್ದು, ಈಗಾಗಲೇ ಚಿರತೆ ಸೆರೆಹಿಡಿಯಲು 4 ಬೋನ್ ಅಳವಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ 70ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಕೊಂಡಿದಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಪೋಷಕರ ಕಣ್ಣೆದುರೇ ಬಾಲಕನನ್ನು ಎಳೆದೊಯ್ದು ಕೊಂದ ಚಿರತೆ!
ಪೋಷಕರ ಕಣ್ಣೆದುರೇ ಬಾಲಕನನ್ನು ಎಳೆದೊಯ್ದ ಚಿರತೆ
ಚಾಮರಾಜನಗರ: ನಾಗಮಲೆಗೆ ಪಾದಯಾತ್ರೆ ಹೋಗುತ್ತಿದ್ದ ಬೆಂಗಳೂರು ಮೂಲದ ಬಾಲಕನನ್ನು ಪೋಷಕರ ಕಣ್ಣೆದುರೇ ಚಿರತೆಯು ಎಳೆದೊಯ್ದು, ಕೊಂದಿರುವ ಘೋರ ಘಟನೆ ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಬಳಿ ನಡೆದಿದೆ. ಮೃತ ಬಾಲಕನನ್ನು ಬೆಂಗಳೂರಿನ ಲಗ್ಗೆರೆ ನಿವಾಸಿ ಹರ್ಷಿತ್ ಎಂದು ಗುರುತಿಸಲಾಗಿದೆ.
ಕುಟುಂಬದ 10 ಮಂದಿ ಸದಸ್ಯರೊಂದಿಗೆ ಹರ್ಷಿತ್ ನಾಗಮಲೆ ಹಾದಿಯಲ್ಲಿ ತೆರಳುತ್ತಿದ್ದಾಗ, ಇಂಡಿಗನತ್ತ ಸಮೀಪ ಚಿರತೆ ದಾಳಿ ಮಾಡಿತ್ತು. ಕುಟುಂಬಸ್ಥರ ಕಣ್ಣೆದುರೇ ಬಾಲಕನನ್ನು ಚಿರತೆ ಎಳೆದೊಯ್ದಿತ್ತು. ಅರಣ್ಯದೊಳಗೆ ಬಾಲಕನ ಶವ ಪತ್ತೆಯಾಗಿದೆ.
ಬಾಲಕನ ಪೋಷಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದು, ʼʼನಾವು ನಾಗಮಲೆಗೆ ದೇವರ ದರ್ಶನಕ್ಕೆ ಹೋಗುತ್ತಿದ್ದೆವು. ವನ್ಯ ಪ್ರಾಣಿಗಳು ಇರುವ ಬಗ್ಗೆ ನಮಗೆ ಯಾರೂ ಕೂಡ ಮಾಹಿತಿ ಕೊಟ್ಟಿಲ್ಲʼʼ ಎಂದು ಹೇಳಿದ್ದರು.