ಗೌರಿಬಿದನೂರು: ಸಹಕಾರ ಕ್ಷೇತ್ರವನ್ನು ಬಲಪಡಿಸುವ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶದಿಂದ ಕಸಬಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ (ಕಸಬಾ ಸೊಸೈಟಿ) ಡಿಸಿಸಿ ಬ್ಯಾಂಕ್ ವತಿಯಿಂದ 10 ಕೋಟಿ ರೂ. ಸಾಲ ಸೌಲಭ್ಯ ಒದಗಿಸ ಲಾಗುವುದು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎನ್.ವೆಂಕಟರಾಮರೆಡ್ಡಿ ತಿಳಿಸಿದರು.
ಕಸಬಾ ಸೊಸೈಟಿಯ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸೊಸೈಟಿ ತನ್ನ ವ್ಯಾಪ್ತಿಯ ರೈತರು ಹಾಗೂ ಸದಸ್ಯರಿಗೆ ಆರ್ಥಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವ ಮೂಲಕ ಸ್ವಾವಲಂಬಿಯಾಗಿ ಬೆಳೆಯಬೇಕು. ಸೊಸೈಟಿಯ ಕಟ್ಟಡ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಡಿಸಿಸಿ ಬ್ಯಾಂಕ್ ಸಹಕಾರ ನೀಡಲಿದೆ. ಕಾದಲವೇಣಿ ಸೊಸೈಟಿ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದ್ದು, ನಗರ ಹಾಗೂ ಗ್ರಾಮೀಣ ಭಾಗದ ಸದಸ್ಯರಿಗೆ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದರು.
ಇದನ್ನೂ ಓದಿ: Gauribidanur News: ರೈತರ ಸಮಸ್ಯೆಗಳಿಗೆ ಅಧಿಕಾರಿಗಳ ಸ್ಪಂದನೆ ಇಲ್ಲ: ರೈತ ಸಂಘಟನೆಗಳ ಆರೋಪ
ಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ವಿ.ಹನುಮೇಗೌಡ ಮಾತನಾಡಿ, ರೈತರು ಮತ್ತು ಸದಸ್ಯರ ಹಿತದೃಷ್ಟಿ ಯಿಂದ ಸೊಸೈಟಿಯನ್ನು ಬಲಪಡಿಸಲು ಸಹಕಾರ ನೀಡಲಾಗುವುದು. ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ನಬಾರ್ಡ್(NABARD) ಮೂಲಕ ಒಂದು ಕೋಟಿ ರೂಪಾಯಿ ಅನುದಾನ ದೊರಕಿಸುವ ಪ್ರಯತ್ನ ಮಾಡಲಾಗುವುದು. ಸೊಸೈಟಿ ಮೂಲಕ ರೈತ ಬಜಾರ್ ಆರಂಭಿಸಿ ರೈತರಿಗೆ ಅಗತ್ಯ ಕೃಷಿ ಪರಿಕರ ಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವ ಉದ್ದೇಶವಿದೆ ಎಂದರು.
ಸೊಸೈಟಿ ಅಧ್ಯಕ್ಷ ಎಂ.ನರಸಿಂಹಮೂರ್ತಿ ಮಾತನಾಡಿ, ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ರೈತರ ಅಭಿವೃದ್ಧಿಗೆ ಸಹಕಾರ ನೀಡಲಾಗುತ್ತಿದೆ. ರೈತರಿಗೆ ಸುಲಭವಾಗಿ ಸಾಲ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸೊಸೈಟಿ ಕಟ್ಟಡದ ಮೇಲ್ಭಾಗದಲ್ಲಿ ಕುಸುಮ್ ಯೋಜನೆಯಡಿ ಸೌರ ವಿದ್ಯುತ್ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದರಿಂದ ವಿದ್ಯುತ್ ವೆಚ್ಚ ಕಡಿಮೆಯಾಗುವುದರ ಜೊತೆಗೆ ಸೊಸೈಟಿಗೆ ಆದಾಯದ ಮೂಲವೂ ಸೃಷ್ಟಿಯಾಗಲಿದೆ. ಸಾರ್ವಜನಿಕರಿಗೆ ಸ್ಥಳೀಯವಾಗಿಯೇ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಶೀಘ್ರದಲ್ಲೇ ಸೇವಾ ಸಿಂಧು ಕೇಂದ್ರ ಆರಂಭಿಸಲಾಗುವುದು. ಇದರಿಂದ ಗ್ರಾಮೀಣರು ವಿವಿಧ ಸರ್ಕಾರಿ ಸೇವೆ ಹಾಗೂ ದಾಖಲೆಗಳಿಗಾಗಿ ದೂರದ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಸತೀಶ್ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಕೆ.ವಿ.ಶ್ರೀನಿವಾಸಗೌಡ, ನಿರ್ದೇಶಕರಾದ ಜೆ.ಎಲ್.ಅಶ್ವತ್ ನಾರಾಯಣ್, ಸಿ.ವಿ.ಲಕ್ಷ್ಮೀಪತಿ, ಸಿ.ಗಂಗಾಧರಪ್ಪ, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ಕೆ.ಎಸ್.ಚಂದ್ರಶೇಖರ್, ಮೇಲ್ವಿಚಾರಕಿ ಆರ್.ಎನ್.ಮಂಗಳ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.