ಚಿಂತಾಮಣಿ: ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ವಿವಿಧ ಸಹಕಾರ ಸಂಘಗಳ ಹೆಸರಿನಲ್ಲಿ ನಡೆದಿದೆ ಎನ್ನಲಾದ ಸುಮಾರು 11 ಕೋಟಿ ರೂಪಾಯಿಗಳ ಬೃಹತ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ದಾಳಿಯ ವೇಳೆ ಅಧಿಕಾರಿಗಳು ಹಗರಣಕ್ಕೆ ಸಂಬಂಧಿಸಿದ ವಿವಿಧ ಕಡತಗಳನ್ನು ಪರಿಶೀಲಿಸಿ,ಹಲವು ಮಹತ್ತರ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಿಂದೆ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಸಾಲಮನ್ನಾ ಯೋಜನೆಯನ್ನು ಜಾರಿಗೆ ತಂದಿದ್ದರು.
ಈ ಯೋಜನೆಯನ್ನೇ ನೆಪವಾಗಿಟ್ಟುಕೊಂಡು ಚಿಂತಾಮಣಿ ತಾಲೂಕಿನ ಯನಮಲಪಾಡಿ, ಬೊಮ್ಮನಹಳ್ಳಿ, ಅಂಕಲ ಮೊಡುಗು, ನಂದಿಗಾನಹಳ್ಳಿ, ವೈಜಕೂರು,ಹುಲುಗುಮ್ಮನಹಳ್ಳಿ ಹಾಗೂ ಕುರುಬೂರು ವಿಎಸ್‌ಎಸ್‌ಎನ್ ಸೊಸೈಟಿಗಳಲ್ಲಿ ಸುಮಾರು 11 ಕೋಟಿ ರೂ. ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ತಳಗವಾರ ಪ್ರತಾಪ್ ಕುಮಾರ್ ಅವರು 2025ರಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಿಯಮಾವಳಿಗಳ ಪ್ರಕಾರ 2 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಹಗರಣದ ತನಿಖೆ ಸಿಐಡಿಗೆ ಒಳಪಡುವ ಹಿನ್ನೆಲೆಯಲ್ಲಿ ಪ್ರತಾಪ್ ಕುಮಾರ್ ಅವರು ಸಿಐಡಿಗೂ ದೂರು ಸಲ್ಲಿಸಿದ್ದರು.
ದೂರಿನ ಬೆನ್ನಲ್ಲೇ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಡಿವೈಎಸ್ಪಿ ಹಾಗೂ ಸಿಬ್ಬಂದಿ ಚಿಂತಾಮಣಿ ಡಿಸಿಸಿ ಬ್ಯಾಂಕ್‌ಗೆ ಆಗಮಿಸಿ,ದೂರುದಾರ ಪ್ರತಾಪ್ ಕುಮಾರ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಮಹಜರು ಪ್ರಕ್ರಿಯೆ ನಡೆಸಿದರು.ತದನಂತರ ಆರೋಪ ಕೇಳಿಬಂದಿರುವ ವಿವಿಧ ವಿಎಸ್‌ಎಸ್‌ಎನ್ ಸೊಸೈಟಿಗಳ ಕಾರ್ಯದರ್ಶಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ತಳಗವಾರ ಪ್ರತಾಪ್ ಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ ಅವರ ಅವಧಿಯಲ್ಲಿ ಸಾಲಮನ್ನಾ ಆದ ಯೋಜನೆಯಲ್ಲಿ ಕೇವಲ ಶೇ.20 ರಿಂದ 25 ರಷ್ಟು ಮಾತ್ರ ಅಸಲಿ ರೈತರಿದ್ದಾರೆ ಉಳಿದಂತೆ ನಕಲಿ ರೈತರ ಪಟ್ಟಿ ಸಿದ್ಧಪಡಿಸಿ ಸರ್ಕಾರದಿಂದ ಸಾಲಮನ್ನಾ ಹಣವನ್ನು ಕ್ಲೈಮ್ ಮಾಡಿಕೊಳ್ಳಲಾಗಿದೆ. ಈ ಹಣವನ್ನು ನಿಯಮ ಬಾಹಿರವಾಗಿ ಗ್ರಾಮೀಣ ಭಾಗದ ವಿವಿಧ ವಿಎಸ್‌ಎಸ್‌ಎನ್ ಸಂಘಗಳ ಮೂಲಕ ನೇರವಾಗಿ ನಗದಾಗಿ ಹಿಂಪಡೆಯ ಲಾಗಿದೆ, ಇದು ಆರ್‌ಬಿಐ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಮುಂದುವರಿದು ಮಾತನಾಡಿದ ಅವರು, "ಸದ್ಯ 11 ಕೋಟಿ ರೂ. ಮೊತ್ತಕ್ಕೆ ತನಿಖೆ ನಡೆಯುತ್ತಿದೆ ಯಾದರೂ, ಇಡೀ ತಾಲೂಕಿನಲ್ಲಿ ತನಿಖೆ ವಿಸ್ತರಿಸಿದರೆ ನಕಲಿ ಮಹಿಳಾ ಸಹಕಾರ ಸಂಘಗಳು ಹಾಗೂ ಬೇನಾಮಿ ಸೊಸೈಟಿಗಳ ಹೆಸರಿನಲ್ಲಿ 100 ಕೋಟಿಗೂ ಅಧಿಕ ಅವ್ಯವಹಾರ ನಡೆದಿರುವುದು ಬೆಳಕಿಗೆ ಬರಲಿದೆ.
ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿ,ನಿರ್ವಹಣಾಧಿಕಾರಿಗಳು, ಮ್ಯಾನೇಜರ್ ಹಾಗೂ ಸಿಬ್ಬಂದಿ ಈ ಇಡೀ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.ರೈತರ ಹಾಗೂ ಬಡವರ ಹಣ ಲೂಟಿ ಮಾಡಿದವರಿಗೆ ಕಾನೂನು ರೀತಿ ಕಠಿಣ ಶಿಕ್ಷೆಯಾಗಬೇಕು,ಈ ತನಿಖೆಯಿಂದ ನ್ಯಾಯ ಸಿಗುವ ವಿಶ್ವಾಸವಿದೆ" ಎಂದರು