ಶಿಡ್ಲಘಟ್ಟ: ಕನ್ನಡ ಭಾಷೆಯ ಉಳಿವು ಹಾಗೂ ಬೆಳವಣಿಗೆಗಾಗಿ ಪ್ರತಿಯೊಬ್ಬರೂ ಕೈಜೋಡಿಸ ಬೇಕಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೊಡಿ ರಂಗಪ್ಪ ಹೇಳಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡದ ಬೆಳವಣಿಗೆಗೆ ಶ್ರಮಿಸಿದ ಮಹಾನ್ ನಾಯಕರನ್ನು ಸ್ಮರಿಸಿದ ಅವರು, ನಾಲ್ವಡಿ ಕೃಷ್ಣರಾಜ ವಡೆಯರ್ ಅವರ ಆಡಳಿತದಲ್ಲಿ ಶಿಕ್ಷಣ, ಕೈಗಾರಿಕೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಅಭಿವೃದ್ಧಿ ಕಂಡುಬಂದಿತು ಎಂದು ಹೇಳಿದರು.
ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ ನೀರಾವರಿ, ವಿದ್ಯುತ್ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಅನೇಕ ಮಹತ್ವದ ಯೋಜನೆಗಳು ಜಾರಿಗೆ ಬಂದವು ಎಂದರು. ರಾಷ್ಟ್ರ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆಗಳನ್ನೂ ನೆನಪಿಸಿ ದರು.
ಇದನ್ನೂ ಓದಿ: Shidlaghatta News: ಶ್ರೀರಾಮ ಶೋಭಾಯಾತ್ರೆಗೆ ಭರ್ಜರಿ ಸಿದ್ಧತೆ: ಜೂನ್ 7ರಂದು ಆಯೋಜನೆ
ಕಸಾಪ ತಾಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಮಾತನಾಡಿ, ಸ್ವಾತಂತ್ರ್ಯಾನಂತರ ಮೈಸೂರು ಆಡಳಿತವನ್ನು ಬಲಪಡಿಸಲು ರಾಜರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಕಾರ್ಯ ನಿರ್ವಹಿಸಿದ ಪರಿಣಾಮವಾಗಿ ನೀರಾವರಿ ಸೌಲಭ್ಯಗಳು, ಅಣೆಕಟ್ಟುಗಳು ಹಾಗೂ ಸಾಮಾಜಿಕ-ಧಾರ್ಮಿಕ ಸಂಸ್ಥೆಗಳು ಸ್ಥಾಪನೆಯಾದವು ಎಂದು ಹೇಳಿದರು.
ಇಂದಿನ ಪೀಳಿಗೆಯಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಅಭಿಪ್ರಾಯಪಟ್ಟ ಅವರು, ಸರ್ಕಾರಿ ಶಾಲೆಗಳ ಮೂಲಕ ಕನ್ನಡ ಭಾಷೆ ಉಳಿದುಕೊಂಡಿರುವುದು ಗಮನಾರ್ಹವಾದರೂ, ಇದರ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕನ್ನಡದ ಮಹತ್ವ ಸಾರುವ ಭಾಷಣಗಳು ಹಾಗೂ ಕವಿತೆಗಳ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಿ. ಮುರಳಿ ಆನಂದ್, ಡಾ. ಸತ್ಯನಾರಾಯಣ ರಾವ್, ಉಪನ್ಯಾಸಕರಾದ ಡಾ. ಶಪಿ ಅಹಮದ್, ಆದಿನಾರಾಯಣ, ಸುಮಿತ್ರ, ಕಸಾಪ ಪ್ರಧಾನ ಕಾರ್ಯದರ್ಶಿ ಅಮೃತ್ ಕುಮಾರ್, ರೂಪಸಿ ರಮೇಶ್, ವಿ. ಕೃಷ್ಣ, ಶ್ಯಾಮ ಸುಂದರ್, ಶಿಕ್ಷಕ ದೇವರಾಜು, ಎಂ. ಕೆಂಪಣ್ಣ, ಸಂದರನ್, ಕೊಶಾಧ್ಯಕ್ಷ ಎಂ. ದೇವರಾಜು, ಎಸ್.ವಿ. ನಾಗರಾಜ್ ರಾವ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.