ಗುಡಿಬಂಡೆ: ಪಟ್ಟಣದ ನ್ಯೂ ವಿಷನ್ ಆಂಗ್ಲ ಶಾಲೆಯಲ್ಲಿ ಗುಡಿಬಂಡೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿ(Kannada Sahitya Parishad)ನ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಅರ್ಥ ಪೂರ್ಣವಾಗಿ ನೆರವೇರಿತು.
ಈ ವೇಳೆ ಬಿಇಒ ಕೃಷ್ಣಕುಮಾರಿ ಮಾತನಾಡಿ, ಕನ್ನಡಿಗರ ವಿಶಾಲ ಮನೋಭಾವದ ನಡುವೆಯೂ ನಮ್ಮ ಭಾಷೆಯ ಅಸ್ಮಿತೆಯನ್ನು ಮರೆಯಬಾರದು. ಇಂದಿನ ದಿನಗಳಲ್ಲಿ ಪರಭಾಷೆಗಳನ್ನು ಕಲಿ ಯುವುದು ಅನಿವಾರ್ಯವಿರಬಹುದು, ಆದರೆ ಮಾತೃಭಾಷೆಯನ್ನು ಮರೆಯುವುದು ಸರಿಯಲ್ಲ. ಕನ್ನಡದಲ್ಲಿರುವ ಆಪ್ತತೆ ಬೇರೆಲ್ಲೂ ಸಿಗದು. 'ಮಮ್ಮಿ-ಡ್ಯಾಡಿ' ಸಂಸ್ಕೃತಿಯ ವ್ಯಾಮೋಹ ಬಿಟ್ಟು ಅಪ್ಪ-ಅಮ್ಮ ಎಂದು ಕರೆಯುವ ಮೂಲಕ ಸಂಸ್ಕೃತಿಯನ್ನು ಉಳಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ಮಾತನಾಡಿ, 1915ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಯಿಂದ ಸ್ಥಾಪನೆಯಾದ ಈ ಪರಿಷತ್ತು, ಇಂದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ 112 ವರ್ಷ ಪೂರೈಸಿರುವುದು ಹೆಮ್ಮೆಯ ವಿಷಯ ಎಂದರು.
ಇದನ್ನೂ ಓದಿ: Gudibande News: ಅರ್ಹ ಕಾರ್ಮಿಕರಿಗೆ ಸೌಲಭ್ಯಗಳು ದೊರೆಯಲಿ: ಹೆಚ್.ಪಿ.ರಾಮನಾಥ್
ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸ.ನ. ನಾಗೇಂದ್ರ ಅವರು ತಾಲ್ಲೂಕು ಪರಿಷತ್ತು ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ನಯಾಜ್ ಅಹ್ಮದ್, ಕಸಾಪ ತಾಲೂಕು ಅಧ್ಯಕ್ಷ ಬಿ.ಮಂಜುನಾಥ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಶ್ರೇಷ್ಠ, ದ್ವಿತೀಯ ಸ್ಥಾನ ಸನ್ನತಿ ಹಾಗೂ ತೃತಿಯ ಸ್ಥಾನ ಪಡೆದ ಪಲ್ಲವಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನಾಗಮಣಿ, ಕನ್ನಡ ಸಾಹಿತ್ಯ ಪರಿಷತ್ತಿನ 7ನೇ ಸಮ್ಮೇಳನಾಧ್ಯಕ್ಷ ಬಿ. ಅಮೀರ್ ಜಾನ್, ನ್ಯೂ ವಿಷನ್ ಶಾಲೆಯ ಮುಖ್ಯ ಶಿಕ್ಷಕಿ ಡಿ.ಎಲ್. ಪರಿಮಳ, ಕಸಾಪ ಗೌರವ ಕಾರ್ಯದರ್ಶಿ ಶ್ರೀರಾಮಪ್ಪ, ಸಹ ಕಾರ್ಯದರ್ಶಿ ಗುಂಪುಮರದ ಆನಂದ್, ಕಾರ್ಯಕಾರಿ ಸಮಿತಿಯ ಜೀವಿಕ ನಾರಾಯಣಸ್ವಾಮಿ, ಕಡೇಹಳ್ಳಿ ಕದಿರಪ್ಪ, ಆರ್. ರಾಜಪ್ಪ, ಜಿ.ವಿ. ಗಂಗಪ್ಪ, ರಾಮಾಂಜಿನೆಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.