ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಿಕ್ಕಬಳ್ಳಾಪುರದ ಜ್ಯುವೆಲ್ಲರಿ ಶಾಪ್‌ನಲ್ಲಿ ಕಳ್ಳರ ಕರಾಮತ್ತು; 3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ಆಭರಣ ಕಳವು

Chikkaballapur News: ಚಿಕ್ಕಬಳ್ಳಾಪುರ ನಗರದ ಮುಖ್ಯರಸ್ತೆಯಲ್ಲಿರುವ ಎಯು ಜ್ಯುವೆಲ್ಲರ್ಸ್‌ ಮಳಿಗೆಯ ಷಟರ್‌ನ ಬೀಗ ಮುರಿದು ಒಳಪ್ರವೇಶಿಸಿರುವ ಕಳ್ಳರು, ಪ್ರದರ್ಶನದ ಕಪಾಟಿನಲ್ಲಿಟ್ಟಿದ್ದ 140 ಕೆ.ಜಿ. ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಚಿಕ್ಕಬಳ್ಳಾಪುರದ ಎಯು ಜ್ಯುವೆಲ್ಲರ್ಸ್‌ ಮಳಿಗೆ.

ಚಿಕ್ಕಬಳ್ಳಾಪುರ: ನಗರದ ಬಿ.ಬಿ.ರಸ್ತೆ ಕಾಂತಿ ಸ್ವೀಟ್ಸ್ ಎದುರಿನ ಪ್ರತಿಷ್ಠಿತ ಎ.ಯು ಜ್ಯುವೆಲ್ಲರ್ಸ್‌ (Au Jewellers) ಆಭರಣ ಮಳಿಗೆಯಲ್ಲಿ ಸೋಮವಾರ ತಡರಾತ್ರಿ ಕಳ್ಳರು ಕರಾಮತ್ತು ತೋರಿದ್ದು, ಸುಮಾರು 3 ಕೋಟಿ ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದಾರೆ. ಜಿಲ್ಲಾ ಕೇಂದ್ರದ (Chikkaballapur) ಮುಖ್ಯರಸ್ತೆಯಲ್ಲಿರುವ ಚಿನ್ನದ ಅಂಗಡಿಯ ಷಟರ್‌ನ ಬೀಗ ಮುರಿದು ಒಳಪ್ರವೇಶಿಸಿರುವ ಕಳ್ಳರು, ಪ್ರದರ್ಶನದ ಕಪಾಟಿನಲ್ಲಿಟ್ಟಿದ್ದ 140 ಕೆ.ಜಿ. ಬೆಳ್ಳಿ ಆಭರಣಗಳನ್ನು ದೋಚಿದ್ದು, ಜತೆಗೆ ಸಿಸಿ ಟಿವಿಗಳ ಕನೆಕ್ಷನ್ ಕಟ್ ಮಾಡಿ, ಅದರ ಡಿವಿಆರ್ ಅನ್ನು ಕೂಡ ಹೊತ್ತೊಯ್ದಿದ್ದಾರೆ.

ಎಂದಿನಂತೆ ಮಂಗಳವಾರ ಬೆಳಗ್ಗೆ ಅಂಗಡಿಯ ಬಾಗಿಲು ತೆರೆಯಲು ಮಾಲೀಕ ನಂದಕುಮಾರ್‌ ಬಂದಾಗ, ಬಾಗಿಲು ಒಡೆದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅಂಗಡಿ ಮಾಲೀಕ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಪೊಲೀಸರು ತೆರಳಿ, ಸ್ಥಳಕ್ಕೆ ಬೆರಳುಚ್ಚು ತಜ್ಞರ ತಂಡವನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಸ್ಥಳ ಪರಿಶೀಲನೆ ನಂತರ ಮಾತನಾಡಿ, 140 ಕೆಜಿ ಬೆಳ್ಳಿ ಕಳವಾಗಿದೆ. ಈ ಕುರಿತು ಅಂಗಡಿ ಮಾಲೀಕ ನಂದಕುಮಾರ್ ಈಗಾಗಲೇ ದೂರು ದಾಖಲಿಸಿದ್ದಾರೆ. ಕಳ್ಳರ ಪತ್ತೆಗಾಗಿ 2 ತಂಡ ರಚಿಸಲಾಗಿದೆ. ಕಳ್ಳರು ಸಿಸಿ ಕ್ಯಾಮೆರಾ ವೈರ್‌ಗಳನ್ನು ಕತ್ತರಿಸಿ, ಡಿವಿಆರ್ ಸಹ ತೆಗೆದು ಕೊಂಡು ಹೋಗಿದ್ದಾರೆ. ಲಾಕರ್‌ನಲ್ಲಿ ಇದ್ದ ಚಿನ್ನವನ್ನು ಬಿಟ್ಟು ಗಾಜಿನ ಕಪಾಟಿನಲ್ಲಿ ಜೋಡಿಸಿದ್ದ ಬೆಳ್ಳಿಯನ್ನು ದೋಚಿ ಪರಾರಿಯಾಗಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಕಳ್ಳರು ಅನುಭವಿ ಅಪರಾಧಿಗಳಂತೆ ಕಾಣುತ್ತಾರೆ. ಶೀಘ್ರದಲ್ಲೇ ಕಳ್ಳರನ್ನು ಪತ್ತೆ ಮಾಡಲಾಗುವುದು ಎಂದರು.

ಕಳ್ಳತನದ ಮಾಹಿತಿ ಕಾಡ್ಗಿಚ್ಚಿನಂತೆ ಹಬ್ಬಿದ ಪರಿಣಾಮ ಎಯು ಆಭರಣ ಮಳಿಗೆಯ ಅಕ್ಕಪಕ್ಕ ಜನಜಂಗುಳಿ ನೆರೆದಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ನಗರದಲ್ಲಿ ನಡೆದಿರುವ ಕಳ್ಳತನದ ಕಾರಣವಾಗಿ ಅಭರಣ ಮಳಿಗೆ ಮಾಲೀಕರು ಅತಂಕಗೊಂಡಿದ್ದಾರೆ. ಎಷ್ಟೇ ಭದ್ರತೆ ಮಾಡಿದ್ದರೂ ಖದೀಮರು ಹೀಗೆ ರಾತ್ರೋ ರಾತ್ರಿ ಕರಾಮತ್ತು ತೋರುತ್ತಿರುವುದು ಇವರ ಚಿಂತೆಗೆ ಕಾರಣವಾಗಿದೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಳ್ಳರ ಹೆಡೆಮುರಿ ಕಟ್ಟುವ ಮೂಲಕ ಈತರದ ಘಟನೆಗಳಿಗೆ ಬ್ರೇಕ್ ಹಾಕಬೇಕಿದೆ ಎನ್ನುವುದು ನಾಗರಿಕರ ಅಭಿಪ್ರಾಯಾಗಿದೆ.

ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಬೆಂಗಳೂರು ನಿವಾಸದಲ್ಲಿ ಕಳ್ಳತನ; ವಿಡಿಯೊ ವೈರಲ್‌

ಇನ್ನು ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ಡಿವೈಎಸ್ಪಿ ಎಸ್.ಶಿವಕುಮಾರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಶರಣಪ್ಪ, ಅಮರ್ ಮೊಗಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.