ಕಲಬುರಗಿ: ಸರಕಾರಿ ಖುಲ್ಲಾ ಜಾಗದ ಮ್ಯುಟೇಷನ್ ಮಾಡಿಕೊಡಲು 18 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಅದರಲ್ಲಿ 12 ಸಾವಿರ ರು.ಗಳನ್ನು ಫೋನ್‌ಪೇ ಮೂಲಕ ಸ್ವೀಕರಿಸಿದ ಆರೋಪದ ಮೇರೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯೊಬ್ಬರನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು(Karnataka Lokayukta Police) ಬಂಧಿಸಿದ್ದಾರೆ.
ಜೇವರ್ಗಿ ತಾಲ್ಲೂಕಿನ ಬಿರಾಳ ಗ್ರಾಮ ಪಂಚಾಯಿತಿಯ ಪಿಡಿಒ ಮೈಬೂಬ್ ಪಟೇಲ್ ಬಂಧಿತ ಆರೋಪಿ. ಮಲ್ಲಾ(ಬಿ) ಗ್ರಾಮದ ಸರಕಾರಿ ಖುಲ್ಲಾ ಜಾಗದಲ್ಲಿನ 60×40 ಅಡಿ ಜಾಗದ ಪೈಕಿ 20×30 ಅಡಿ ಜಾಗವನ್ನು ಗ್ರಾಮದ ಮರೆಪ್ಪ ತಳವಾರ ಅವರ ಹೆಸರಿಗೆ ಮ್ಯುಟೇಷನ್ ಮಾಡಿಕೊಡಲು ಪಿಡಿಒ 18 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Lokayukta Raid: ಲಂಚ ಸ್ವೀಕರಿಸುತ್ತಿದ್ದ ಸಿಎಂ ಪದಕ ವಿಜೇತ ಅಧಿಕಾರಿ ಲೋಕಾಯುಕ್ತ ಬಲೆಗೆ
ಈ ಕುರಿತು ದೂರುದಾರ ಶಿವರೆಡ್ಡಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಪಿಡಿಒ 12 ಸಾವಿರ ವನ್ನು ಫೋನ್‌ಪೇ ಮೂಲಕ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಬಲೆಗೆ ಬೀಳಿಸಿದ್ದಾರೆ.
ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಲೋಕಾಯುಕ್ತ ತನಿಖಾಧಿಕಾರಿ ಪೊಲೀಸ್ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ಮುರಗುಂಡಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ತನಿಖೆ ಪೂರ್ಣಗೊಂಡ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.