ಅಪರಾಧ ತಡೆಗಟ್ಟುವಿಕೆಯಲ್ಲಿ ಜಿಲ್ಲಾ ಪೊಲೀಸರು ಪರಿಣಾಮಕಾರಿ ಕೆಲಸ ಮಾಡಿದ್ದಾ ರೆಂದು ಶ್ಲಾಘನೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಿರುವ ಈ 20 ದಿನದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ ಸಂಬಂಧ 58,352 ಪ್ರಕರಣ ದಾಖಲು ಮಾಡಲಾಗಿದ್ದು 2,58,03,400 ದಂಡ ವಸೂಲಿ ಮಾಡಲಾಗಿದೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ತಿಳಿಸಿದರು.
ನಗರ ಹೊರವಲಯ ಅಣಕನೂರು ಸಮೀಪದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಆವರಣದಲ್ಲಿ 2025ನೇ ಸಾಲಿನಲ್ಲಿ ನಡೆದಿರುವ ಎಲ್ಲಾ ಕಳವು ಮಾಲುಗಳನ್ನು ಮಾಲಿಕರಿ ವಿತರಿಸುವ ಸಂಬಂಧ ಏರ್ಪಡಿಸಿದ್ದ ಕಳವು ಮಾಲು ಪ್ರದರ್ಶನ ಹಾಗೂ ಮಾಲೀಕರಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಅಪರಾಧ ತಡೆಗಟ್ಟುವಿಕೆಯ ಬಿರುಸಿನ ಕಾರ್ಯಾಚರಣೆಗಳ ನಡುವೆ ಜನರಲ್ಲಿ ಅರಿವು ಮೂಡಿಸುವ ಪರಿಣಾಮಕಾರಿ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಜಾಗೃತಿ ಜತೆಗೆ ತ್ವರಿಯ ಕಾರ್ಯಾ ಚರಣೆಯಿಂದಾಗಿ ಕಳೆದ ಸಾಲಿಗಿಂತಲೂ ಈ ಭಾರಿ ಹೆಚ್ಚಿನ ಪ್ರಕರಣ ದಾಖಲಾಗುವಿಕೆ, ಆರೋಪಿ ಗಳ ಬಂಧನ, ಅಪಾರ ಪ್ರಮಾಣದ ಮಾಲು ವಶದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿದೆ. ಇದರಲ್ಲಿ ಸಿಬ್ಬಂದಿ ಚುರುಕಿನ ಕಾರ್ಯ ನಿರ್ವಹಣೆ ಮಹತ್ತರವಾದುದು ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಪರಾಧ ಪ್ರಕರಣಗಳ ನಿಯಂತ್ರಣ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಜನತೆ ಪೊಲೀಸ್ ಇಲಾಖೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Chikkaballapur News: ನೂರಾರು ಭಕ್ತರ ಸಮ್ಮುಖದಲ್ಲಿ: ವಾಪಸಂದ್ರದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಕಲ್ಯಾಣ ಮಹೋತ್ಸವ
ಹೊಸ ಠಾಣೆಗೆ ಪ್ರಸ್ತಾವನೆ
ಬಾಗೇಪಲ್ಲಿ ಹಾಗೂ ಚಿಂತಾಮಣಿಯಲ್ಲಿ ನೂತನ ಸಂಚಾರಿ ಠಾಣೆಯ ಕಾರ್ಯಾರಂಭಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯು ಪ್ರಸ್ತಾವನೆ ಸಲ್ಲಿಸಿದೆ. ಇನ್ನು ಆಂಧ್ರದ ಗಡಿ ಭಾಗದಲ್ಲಿರುವ ಜಿಲ್ಲೆಯ ತಾಲೂಕುಗಳಲ್ಲಿ ಅಪರಾಧ, ಅಪಘಾತ ಪ್ರಕರಣಗಳು ಹೆಚ್ಚಿಗೆ ವರದಿ ಯಾಗುತ್ತಿವೆ. ಈ ನಿಟ್ಟಿನಲ್ಲಿ ಮತ್ತಷ್ಟು ನಿಗಾ ವಹಿಸುವ ನಿಟ್ಟಿನಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಗಮನ ಸೆಳೆಯಲಾಗುತ್ತಿದೆ.
ಹೊಸ ವರ್ಷಾಚರಣೆ ಹೆಚ್ಚಿನ ನಿಗಾ
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಹೆಚ್ಚಿನ ನಿಗಾ ವಹಿಸುವ ನಿಟ್ಟಿನಲ್ಲಿ ಜನಸಂದಣಿಯ ಸ್ಥಳಗಳಲ್ಲಿ ಸಿಬ್ಬಂದಿ ನಿಯೋಜನೆ, ಬೀಟ್ ವ್ಯವಸ್ಥೆ ಚುರುಕು ಸೇರಿದಂತೆ ಬಿಗಿ ಕ್ರಮ ಕೈಗೊಳ್ಳ ಲಾಗಿದೆ. ಈಗಾಗಲೇ ನಂದಿ ಬೆಟ್ಟ, ಸ್ಕಂದಗಿರಿ, ಆವಲಬೆಟ್ಟ, ಕೈವಾರ ಬೆಟ್ಟ ಸೇರಿದಂತೆ ಹಲವೆಡೆ ಹೊಸ ವರ್ಷಾಚರಣೆಗಾಗಿ ಟ್ರಕ್ಕಿಂಗ್ ಹೋಗುವುದನ್ನು ನಿಷೇಧಿಸಲಾಗಿದೆ.
ಗಡಿಪಾರು ರೌಡಿಗಳು
ಜಿಲ್ಲೆಯಲ್ಲಿ 2025ನೇ ಸಾಲಿನಲ್ಲಿ ನಿರಂತರವಾಗಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ 10 ರೌಡಿಗಳನ್ನು ನಿಯಮಾನುಸಾರ ಗಡಿಪಾರು ಮಾಡಲಾಗಿದೆ.
ಜಿಲ್ಲೆಯಲ್ಲಿ 738 ರೌಡಿಗಳನ್ನು ಗುರುತಿಸಿದ್ದು 691 ಭದ್ರತಾ ಪ್ರಕರಣಗಳನ್ನು ದಾಖಲಿಸಲಾಗಿದೆ. 677 ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಕಳೆದ 2024ನೇ ಸಾಲಿನಲ್ಲಿ 809 ರೌಡಿಗಳಿದ್ದು ಭದ್ರತಾ ಪ್ರಕರಣಗಳನ್ನು ದಾಖಲಿಸಿ, 417 ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. 6 ರೌಡಿ ಗಳನ್ನು ಗಡಿಪಾರು ಮಾಡಲಾಗಿತ್ತು.
ದಂಡ ವಸೂಲಿ
ವಾಹನ ಚಾಲಕರು ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 58,352 ಪ್ರಕರಣಗಳನ್ನು ದಾಖಲಿಸಿದ್ದು 2,58,03,400 ದಂಡ ವಸೂಲಿ ಮಾಡಲಾಗಿದೆ. ಸೈಬರ್ ಅಪರಾಧ ಸಂಬಂಧಿಸಿದಂತೆ 152 ಪ್ರಕರಣ ದಾಖಲಿಸಿದ್ದು 16 ಕೋಟಿ ರೂ ವಂಚನೆಯಾಗಿದೆ. ಇದರಲ್ಲಿ 7 ಕೋಟಿ ರೂ ಹಣ ವನ್ನು ತಡೆ ಹಿಡಿದು, ಸಂಬಂಧಪಟ್ಟ ಮಾಲೀಕರಿಗೆ 2.5 ಕೋಟಿ ರೂ ಹಿಂತಿರುಗಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ಡಿವೈಎಸ್ಪಿ ಶಿವಕುಮಾರ್, ಪಿ.ಮುರಳೀಧರ್ ಮತ್ತಿತರರು ಇದ್ದರು.