ಚಿಂತಾಮಣಿ: ತಾಲೂಕಿನ ಸಾರ್ವಜನಿಕರು ಹಾಗೂ ದಲಿತ ಸಂಘಟನೆಗಳು ಹಲವು ದಶಕಗಳಿಂದ ಕಂಡಿದ್ದ ಕನಸು ಇದೀಗ ನನಸಾಗುವ ಕ್ಷಣ ಸಮೀಪಿಸಿದೆ. ನಗರದ ಹೃದಯಭಾಗದಲ್ಲಿ ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಹಾಗೂ ವಿನೂತನ ಮಾದರಿ ಯ ಡಾ. ಬಿ.ಆರ್. ಅಂಬೇಡ್ಕರ್ ಭವನ ಆ.22ರಂದು ಲೋಕಾರ್ಪಣೆಗೊಳ್ಳಲಿದ್ದು, ಸಂವಿಧಾನ ಶಿಲ್ಪಿಯ ವಿಚಾರಧಾರೆ, ಶಿಕ್ಷಣ ಹಾಗೂ ವೈಚಾರಿಕ ಚಿಂತನೆಗಳನ್ನು ಜನರಿಗೆ ತಲುಪಿಸುವ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ.
ಶಾಸಕ ಹಾಗೂ ಮಾಜಿ ಸಚಿವ ಡಾ.ಎಂ.ಸಿ.ಸುಧಾಕರ್(Dr M C Sudhakar) ಅವರ ನೇತೃತ್ವದಲ್ಲಿ ಸಾಕಾರಗೊಂಡಿರುವ ಭವನವು ರಾಜ್ಯದಲ್ಲೇ ಪ್ರಥಮ ಬಾರಿಗೆ ಪೇಪರ್‌ಲೆಸ್ ಸಭಾಂಗಣದ ಸೌಲಭ್ಯ ಹೊಂದಿರುವ ಭವನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನೂ ಓದಿ: Chikkaballapur News: ಆಯುಷ್ ಆಸ್ಪತ್ರೆ ಕಾಮಗಾರಿ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ
ವೈಚಾರಿಕ ಕೇಂದ್ರವಾಗಿ ರೂಪುಗೊಳ್ಳಲಿದೆ
ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಹೋರಾಟ ಮತ್ತು ವೈಚಾರಿಕ ಚಿಂತನೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಆಧುನಿಕ ಡಿಜಿಟಲ್ ಕೇಂದ್ರವನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ ವಿಶೇಷ ಕಂಪ್ಯೂಟರ್ ವ್ಯವಸ್ಥೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳ ಮೂಲಕ ಅಂಬೇಡ್ಕರ್ ಅವರ ಕುರಿತು ಜ್ಞಾನ ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಭವನದ ಒಳಾಂಗಣದಲ್ಲಿ ಭಗವಾನ್ ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವ್ಯ ಬಿಳಿ ಶಿಲೆಯ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ವಿಶಾಲ ಊಟದ ಸಭಾಂಗಣ, ಆಧುನಿಕ ಎಲ್‌ಇಡಿ ಪರದೆಗಳು, ಗ್ರಂಥಾಲಯ ಹಾಗೂ ವಾಹನ ನಿಲುಗಡೆಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ.
ಗಣ್ಯರ ಉಪಸ್ಥಿತಿ
ಆ.22ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್(DCM Dr G Parameshwar), ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್(Byrati Suresh), ಸಚಿವರಾದ ಈಶ್ವರ್ ಖಂಡ್ರೆ(Eshwar Khandre), ಕೆ.ಎಚ್. ಮುನಿಯಪ್ಪ(K H Muniyappa) ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ತಾಲೂಕು ಆಡಳಿತ ಹಾಗೂ ತಹಸೀಲ್ದಾರ್ ಸುದರ್ಶನ್ ಯಾದವ್ ಅವರ ನೇತೃತ್ವದಲ್ಲಿ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.
ಸಮಾರಂಭಗಳಿಗೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಿಗೆ ಸಂವಿಧಾನ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ವಿಚಾರಗಳನ್ನು ಪರಿಚಯಿಸುವ ವೈಚಾರಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಅಂಬೇಡ್ಕರ್ ಭವನ ರೂಪುಗೊಳ್ಳಲಿದೆ ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ.