ಚಿಕ್ಕಬಳ್ಳಾಪುರ: ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಹಾಗೂ ಶಾಸ್ತ್ರೀಯ ಕಲೆಯ ವೈಭವವನ್ನು ಅನಾವರಣಗೊಳಿಸಿದ ಯುವ ಪ್ರತಿಭೆ ಕೃತಿಕಾ ನೂತನಪತಿ ಅವರ ಭರತನಾಟ್ಯ ರಂಗಪ್ರವೇಶ ಸಮಾರಂಭ ನಗರದ ಕನ್ನಡ ಭವನದಲ್ಲಿ ಅದ್ಧೂರಿಯಾಗಿ ನಡೆಯಿತು.
ಕಲಾಭಿಮಾನಿಗಳು, ಗಣ್ಯರು ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು. ಕಾರ್ಯಕ್ರಮವು ಗಣೇಶ ಸ್ತುತಿಯಿಂದ ಆರಂಭವಾಗಿ ಸರಸ್ವತಿ ಕೌತುವಂ, ಲಕ್ಷ್ಮಿ ವಂದನ, ವರ್ಣಂ, ಭೋ ಶಂಭೋ, ತಿರೋ ತಿರೋ ಜವರಾಲ, ಗರುಡಗಮನ ತವ, ತಿಲ್ಲಾನ ಹಾಗೂ ಮಂಗಳಂ ಸೇರಿದಂತೆ ವಿವಿಧ ಭರತನಾಟ್ಯ ನೃತ್ಯ ಸಂಯೋಜನೆಗಳ ಮೂಲಕ ಭಕ್ತಿ, ಭಾವ ಮತ್ತು ನೃತ್ಯ ವೈಭವವನ್ನು ಅನಾವರಣಗೊಳಿಸಿತು. ಪ್ರತಿಯೊಂದು ಪ್ರದರ್ಶನವೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.
ಗುರು ವಿದೂಷಿ ಲಕ್ಷ್ಮಿ ವಾದಿವ್ ಅವರ ಮಾರ್ಗದರ್ಶನದಲ್ಲಿ ಕೃತಿಕಾ ತಮ್ಮ ಪ್ರತಿಭೆಯನ್ನು ಅದ್ಭುತವಾಗಿ ಪ್ರದರ್ಶಿಸಿದರು.
ಪಕ್ಕವಾದ್ಯದಲ್ಲಿ ನಟುವಾಂಗಂ – ಲಕ್ಷ್ಮಿ ವಾದವ್, ಗಾಯನ – ಸಂಗೀತ್ ಎಂ.ಟಿ., ಮೃದಂಗ – ಶ್ರವಣ್ ಸಸಿಧರನ್ ಹಾಗೂ ಕೊಳಲು – ಶ್ರೀಹರಿ ಕೊಟ್ಟಕಲ್ ಅವರ ಸಂಗೀತ ಸಹಕಾರ ಕಾರ್ಯ ಕ್ರಮದ ಮೆರುಗು ಹೆಚ್ಚಿಸಿತು.
ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಸುರೇಂದ್ರ ಬಾಬು ಮತ್ತು ಜ್ಯೋತಿ ದಂಪತಿಗಳ ಪುತ್ರಿ ಕೃತಿಕಾ, ಏಳನೇ ವಯಸ್ಸಿನಿಂದಲೇ ವಿದ್ಯಾ ಕಲಾಸ್ ಸ್ಕೂಲ್ ಆಫ್ ಪರ್ಫಾರ್ಮೆನ್ಸ್ ಆರ್ಟ್ಸ್ನಲ್ಲಿ ಭರತನಾಟ್ಯ ಅಭ್ಯಾಸ ಆರಂಭಿಸಿದ್ದರು. ಹತ್ತು ವರ್ಷಗಳಿಗೂ ಅಧಿಕ ಕಾಲದ ನಿರಂತರ ಸಾಧನೆ, ಗುರುಗಳ ಮಾರ್ಗದರ್ಶನ ಹಾಗೂ ಪೋಷಕರ ಪ್ರೋತ್ಸಾಹದ ಫಲವಾಗಿ ಅವರ ರಂಗಪ್ರವೇಶ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್, "ವಿದೇಶದಲ್ಲಿ ನೆಲೆಸಿದ್ದರೂ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಆಚಾರ-ವಿಚಾರಗಳನ್ನು ಮರೆಯದೆ ಭರತನಾಟ್ಯದಂತಹ ಶ್ರೇಷ್ಠ ಕಲೆಯನ್ನು ಅಳವಡಿಸಿಕೊಂಡಿರುವ ಕೃತಿಕಾ ಯುವಜನತೆಗೆ ಮಾದರಿ. ಇಂದಿನ ದಿನಗಳಲ್ಲಿ ಅನೇಕ ಯುವಕರು ದುಶ್ಚಟಗಳ ಕಡೆಗೆ ಸಾಗುತ್ತಿರುವಾಗ, ಭಾರತೀಯ ಪರಂಪರೆಯ ಕಲೆಯನ್ನು ಜೀವನದ ಭಾಗವಾಗಿಸಿ ಕೊಂಡಿರುವುದು ಶ್ಲಾಘನೀಯ," ಎಂದರು.
"ಭರತನಾಟ್ಯ ಕೇವಲ ನೃತ್ಯವಲ್ಲ; ಅದು ಭಕ್ತಿ, ಶಿಸ್ತು, ಸಂಸ್ಕೃತಿ ಮತ್ತು ದೇವರ ಆರಾಧನೆಯ ಮಾರ್ಗವಾಗಿದೆ. ಶತಮಾನಗಳ ಹಿಂದೆ ದೇವಾಲಯಗಳಲ್ಲಿ ದೇವರಿಗೆ ಸಮರ್ಪಣೆಯಾಗಿ ಈ ಕಲೆ ಪ್ರದರ್ಶಿಸಲಾಗುತ್ತಿತ್ತು. ಇಂತಹ ಪವಿತ್ರ ಕಲೆಯನ್ನು ಇಂದಿನ ಮಕ್ಕಳಿಗೆ ಕಲಿಸುತ್ತಿರುವ ಗುರುಗಳ ಸೇವೆ ಶ್ಲಾಘನೀಯ. ಕೃತಿಕಾ ಅವರ ಇಂದಿನ ಪ್ರದರ್ಶನ ಅವರ ಉಜ್ವಲ ಭವಿಷ್ಯದ ಮುನ್ಸೂಚನೆ ಯಾಗಿದೆ. ಅವರು ಭರತನಾಟ್ಯದ ಮೂಲಕ ದೇಶ-ವಿದೇಶಗಳಲ್ಲಿ ಕೀರ್ತಿ ಗಳಿಸಲಿ," ಎಂದು ಹಾರೈಸಿ ದರು.
ಭರತನಾಟ್ಯವು ಕೇವಲ ಮನರಂಜನೆಗಾಗಿ ಇರುವ ಕಲೆ ಅಲ್ಲ; ಅದು ಭಕ್ತಿಯ ಭಾಷೆ, ಸಂಸ್ಕೃತಿಯ ಪ್ರತೀಕ ಮತ್ತು ಆತ್ಮೋನ್ನತಿಯ ಸಾಧನ. ಇಂತಹ ಕಲೆಯನ್ನು ಮಕ್ಕಳಲ್ಲಿ ಬೆಳೆಸಿದರೆ ಭಾರತೀಯ ಸಂಸ್ಕೃತಿಯ ಬೇರುಗಳು ಇನ್ನಷ್ಟು ಗಟ್ಟಿಯಾಗುವುದರ ಜೊತೆಗೆ ಮುಂದಿನ ಪೀಳಿಗೆ ಉತ್ತಮ ಸಂಸ್ಕಾರ, ಶಿಸ್ತು ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂಬ ಸಂದೇಶವನ್ನು ಈ ರಂಗಪ್ರವೇಶ ಕಾರ್ಯಕ್ರಮ ಸಾರಿತು.