ಚಿಕ್ಕಬಳ್ಳಾಪುರ: ಮನುಷ್ಯ ಈ ಲೋಕಕ್ಕೆ ಬರುವುದು ಬರಿಗೈಯಲ್ಲಿ, ಹೋಗುವುದೂ ಬರಿಗೈ ಯಲ್ಲೇ. ಆದ್ದರಿಂದ ನಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು ಎಂಬುದು ನನ್ನ ಜೀವನದ ತತ್ವವಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಯಲುವಹಳ್ಳಿ ಎನ್. ರಮೇಶ್ ಹೇಳಿದರು.
ತಮ್ಮ ಸ್ವಗ್ರಾಮ ಯಲುವಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಮೊದಲನೇ ಮಹಡಿಯ ಕಟ್ಟಡವನ್ನು ಸ್ವಂತ ವೆಚ್ಚದಲ್ಲಿ ನಿರ್ಮಿಸಿ ಗುರುವಾರ ಗ್ರಾಮಸ್ಥರಿಗೆ ಸಮರ್ಪಿಸಿದ ಬಳಿಕ ಮಾತನಾಡಿದರು.
ಸಮಾಜ ಸೇವೆ ಮಾಡುವ ಉದ್ದೇಶದಿಂದಲೇ ಹಾಲು ಉತ್ಪಾದಕರ ಸಂಘದ ಮೊದಲ ಮಹಡಿಯ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ನೀಡಿದ್ದೇನೆ. ಈ ಕಟ್ಟಡದಿಂದ ದೊರೆಯುವ ಆದಾಯ ಸಂಘದ ಅಭಿವೃದ್ಧಿಗೆ ಬಳಸಿಕೊಳ್ಳುವಂತಾಗಬೇಕು ಎಂಬುದು ನನ್ನ ಆಶಯವಾಗಿದೆ ಎಂದು ತಿಳಿಸಿದರು.
ತಮ್ಮ ರಾಜಕೀಯ ಹಾಗೂ ಸಾಮಾಜಿಕ ಬದುಕನ್ನು ಸ್ಮರಿಸಿದ ಅವರು, ಕೋಲಾರ-ಚಿಕ್ಕಬಳ್ಳಾಪುರ ಭಾಗದ ರೈತ ಧುರೀಣರಾದ ಕೆ.ಬಿ.ಪಿಳ್ಳಪ್ಪ ಅವರು ನನಗೆ ಮಾರ್ಗದರ್ಶಕರಾಗಿದ್ದರು. ಅವರ ಹೋರಾಟದ ಫಲವಾಗಿ ಕೋಲಾರಕ್ಕೆ ಹಾಲು ಒಕ್ಕೂಟ ಬರಲು ಸಾಧ್ಯವಾಯಿತು. ಜನಸೇವೆಯ ಹಾದಿಯಲ್ಲಿ ನಡೆಯಲು ಅವರೇ ನನಗೆ ಪ್ರೇರಣೆಯಾಗಿದ್ದರು. ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾದರು.
ಯಲುವಹಳ್ಳಿ ಗ್ರಾಮದಲ್ಲಿ 1988ರಲ್ಲಿ ಹಾಲಿನ ಡೈರಿ ಸ್ಥಾಪನೆಯಾದ ಸಂದರ್ಭ ಹಾಗೂ ಆ ಕಾಲದಲ್ಲಿ ಹಾಲು ಉತ್ಪಾದಕರು ಎದುರಿಸಿದ್ದ ಸಂಕಷ್ಟಗಳ ಬಗ್ಗೆಯೂ ಅವರು ನೆನಪು ಹಂಚಿ ಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಚಿಮುಲ್ ಅಧ್ಯಕ್ಷ ಮಂಜುನಾಥ್ ರೆಡ್ಡಿ, "ಬಲಗೈ ಮಾಡುವ ಸೇವೆ ಎಡಗೈಗೂ ಗೊತ್ತಾಗಬಾರದು" ಎಂಬಂತೆ ರಮೇಶ್ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿ ದ್ದಾರೆ.
ತಮ್ಮ ಸ್ವಂತ ಹಣದಲ್ಲಿ ಹಾಲು ಉತ್ಪಾದಕರ ಸಂಘದ ಮೊದಲ ಮಹಡಿ ಕಟ್ಟಡ ನಿರ್ಮಿಸಿ ಹಸ್ತಾಂತರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಈ ವಯಸ್ಸಿನಲ್ಲಿಯೂ ಸಮಾಜಕ್ಕಾಗಿ ದುಡಿಯುತ್ತಿರುವ ಅವರ ಕಾಳಜಿ ಇಂದಿನ ಯುವಜನತೆಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡೈರಿಯ ಮೊದಲ ಮಹಡಿಯಲ್ಲಿ ಎರಡು ಬೆಡ್‌ರೂಮ್ ಮನೆ ನಿರ್ಮಿಸಿ ಅದರ ಬಾಡಿಗೆ ಆದಾಯ ವನ್ನು ಡೈರಿಯ ಅಭಿವೃದ್ಧಿಗೆ ಶಾಶ್ವತವಾಗಿ ಬಳಸುವಂತೆ ಒಪ್ಪಂದ ಮಾಡಿಕೊಟ್ಟಿರುವುದು ಅತ್ಯಂತ ಶ್ರೇಷ್ಠ ಕಾರ್ಯ ಎಂದು ಪ್ರಶಂಸಿಸಿದರು.
ರಮೇಶ್ ಅವರ ಸೊಸೆ ಹೇಮಲತಾ ಜನಾರ್ದನ್, ಮಾತನಾಡಿ ರಮೇಶ್ ಅಣ್ಣ ಅವರ ಜೀವನ ನಮಗೆ ಸ್ಫೂರ್ತಿ. ಅವರು ಆರಂಭಿಸಿರುವ ಜನಸೇವಾ ಕಾರ್ಯಗಳನ್ನು ಮುಂದುವರಿಸುತ್ತೇವೆ. ಶಿಕ್ಷಣ, ಆರೋಗ್ಯ ಸೇರಿದಂತೆ ಯಾವುದೇ ಸಮಸ್ಯೆಗಾಗಿ ಬರುವವರನ್ನು ಅವರು ಎಂದಿಗೂ ಖಾಲಿ ಕೈಯಲ್ಲಿ ಕಳುಹಿಸುವುದಿಲ್ಲ ಎಂದು ಹೇಳಿದರು.
ಇಷ್ಟೇ ಅಲ್ಲದೆ ಯಲುವಹಳ್ಳಿ ಎನ್. ರಮೇಶಣ್ಣ ಅವರು ಕಳೆದ ಎರಡು ವರ್ಷಗಳಿಂದ ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕರು, ಹಮಾಲಿಗಳು ಮತ್ತು ರೈತರಿಗೆ ವಾರದಲ್ಲಿ ಎರಡು ದಿನ ಅನ್ನಸಂತರ್ಪಣೆ ನಡೆಸುತ್ತಿದ್ದು, ಹೂವಿನ ಮಾರುಕಟ್ಟೆಯಲ್ಲಿಯೂ ಪ್ರತಿ ಸೋಮವಾರ ಉಚಿತ ಅನ್ನದಾನ ಕಾರ್ಯಕ್ರಮ ನಡೆಸುತ್ತಿದ್ದಾರೆ. ಕೊಡುಗೈ ದಾನಿಯಾದ ಇವರಿಗೆ ಭಗವಂತ ಆಯುರಾರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದರು.
ಕಾರ್ಯಕ್ರಮದಲ್ಲಿ ಮೆಘಾ ಡೈರಿ ವ್ಯವಸ್ಥಾಪಕ ನಾಗೇಶ್, ಸೂಪರ್‌ವೈಸರ್ ಮಂಜುನಾಥ್, ಕೊಂಡೇನಹಳ್ಳಿ ಚಂದ್ರಪ್ಪ, ಅನ್ನದಾನಿ ಸತೀಶ್, ಕಾರ್ಯದರ್ಶಿ ಮುನಿಶಾಮಿ, ಯುವ ಮುಖಂಡ ಯಲುವಹಳ್ಳಿ ಜನಾರ್ದನ್, ನಂದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.