Chikkaballapur News: ನಗರದಲ್ಲಿಯೂ ಉಲ್ಬಣಿಸಿದ ಸಮಸ್ಯೆ: ದ್ವೀಪದಂತಾದ ಸರಕಾರಿ ಮಹಿಳಾ ಕಾಲೇಜು
ಒಂದೇ ಒಂದು ರಾತ್ರಿ ಸುರಿದ ಧಾರಾಕಾರ ಮಳೆಯ ಪರಿಣಾಮವನ್ನು ಸರಿದೂಗಿಸಲು ಜಿಲ್ಲಾಡಳಿತ ಹರಸಾಹಸ ಪಡುವಂತಾಗಿರುವುದು ವಿಚಿತ್ರವಾದರೂ ಸತ್ಯ. ಮಂಚನಬಲೆ ಗ್ರಾನದ ಸುತ್ತ ಮುತ್ತಲಿರುವ ದಾಳಿಂಬೆ ತೋಟಗಳು, ಹೂವಿನ ತೋಟ, ದ್ರಾಕ್ಷಿ, ತರಕಾರಿ ತೋಟಗಳಲ್ಲಿ ನೀರು ಎರಡುಮೂರು ಅಡಿಗಳಷ್ಟು ನಿಂತಿದೆ.

-

ಚಿಕ್ಕಬಳ್ಳಾಪುರ : ಗುರುವಾರ ರಾತ್ರಿಯಿಂದ ಬೆಳಗಿನಜಾವದ ತನಕ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಜನತೆ ಜಲಾಘಾತಕ್ಕೆ ತುತ್ತಾಗುವಂತೆ ಆಗಿದೆ.ಹತ್ತಾರು ಹಳ್ಳಿಗಳನ್ನು ನಗರಕ್ಕೆ ಬೆಸೆಯುವ ಏಕೈಕ ಸಂಪರ್ಕದ ಕೊಂಡಿಯಂತಿದ್ದ ಮಂಚನಬಲೆಯ ರಸ್ತೆ ಸಂಪೂರ್ಣ ವಾಗಿ ಜಲದಿಗ್ಭಂಧನಕ್ಕೆ ಒಳಗಾಗಿದ್ದರಿಂದ ಜನತೆ ಪರಿತಪಿಸುವಂತಾಗಿತ್ತು.
ಜಿಲ್ಲೆಯಲ್ಲಿ ಸುರಿದ ವರಣನ ಆರ್ಭಟಕ್ಕೆ ಜಿಲ್ಲಾ ಕೇಂದ್ರದಲ್ಲಿನ ಜನತೆಯೂ ಸಮಸ್ಯೆಗಳಿಗೆ ಸಿಕ್ಕಿದ್ದರು. ತಗ್ಗು ಪ್ರದೇಶಗಳಲ್ಲಿ ನೀರು ಮನೆಗೆ ನುಗ್ಗಿದ್ದಲ್ಲದೆ, ಅವೈಜ್ಞಾನಿಕವಾಗಿ ನಿರ್ಮಾಣ ವಾಗಿರುವ ಚರಂಡಿಗಳು ತುಂಬಿ ರಸ್ತೆಯ ಮೇಲೆಲ್ಲಾ ನೀರು ಹರಿಸಿದೆ. ನಗರದ ಮಧ್ಯೆ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವ ಪರಿಣಾಮ ಎಂಜಿ ರಸ್ತೆಯಲ್ಲಿ ಪಾದಚಾರಿ ಮಾರ್ಗವೇ ನಾಪತ್ತೆಯಾಗಿದ್ದು ಕೆಸರಿನಲ್ಲಿನಲ್ಲಿಯೇ ವಿದ್ಯಾರ್ಥಿಗಳು ರೈತರು, ನಾಗರೀಕರು ಸಂಚರಿಸುವಂತೆ ಆಗಿತ್ತು.
ಇನ್ನು ನಗರ ಹೊರವಲಯದಲ್ಲಿ ಸುಮಾರು ೧೧ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಹಿಳಾ ಕಾಲೇಜು ಮುಂಭಾಗದಲ್ಲಿ ಹಾದು ಹೋಗಿರುವ ರಾಜಕಾಲುವೆ ಬಲಾಢ್ಯರ ಒತ್ತುವರಿಗೆ ಒಳಗಾಗಿರುವುದರಿಂದ ಕಾಲೇಜು ಕಾಂಪೌಂಡ್ ಹೊರಾವರಣದ ಸುತ್ತಲೂ ನೀರು ನಿಂತು ಒಂದು ರೀತಿಯಲ್ಲಿ ದ್ವೀಪದಂತೆ ಆಗಿದೆ.ಜಿಲ್ಲಾಧಿಕಾರಿಗಳ ಕಛೇರಿಗೆ ಹೋಗುವ ರಸ್ತೆಯ ಎಡಭಾಗದಲ್ಲಿ ಹೊಲಗದ್ದೆ ತೋಟಗಳಿಗೆ ನೀರು ನುಗ್ಗಿರುವ ಪರಿಣಾಮ ಹರಿಯುವ ನೀರಿಗೆ ಜನತೆ ಮೀನಿನ ಬಲೆ ಹಾಕಿ ಮೀನು ಬೇಟೆಯಲ್ಲಿ ನಿರತರಾಗಿದ್ದ ದೃಶ್ಯಗಳು ನಾಗರೀಕರ ಕುತೂಹಲಕ್ಕೆ ಕಾರಣವಾಗಿದ್ದವು.
ಇದನ್ನೂ ಓದಿ: China Open 2025: ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶಿಸಿದ ಸಾತ್ವಿಕ್‌ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ!
ಒಂದೇ ಒಂದು ರಾತ್ರಿ ಸುರಿದ ಧಾರಾಕಾರ ಮಳೆಯ ಪರಿಣಾಮವನ್ನು ಸರಿದೂಗಿಸಲು ಜಿಲ್ಲಾಡಳಿತ ಹರಸಾಹಸ ಪಡುವಂತಾಗಿರುವುದು ವಿಚಿತ್ರವಾದರೂ ಸತ್ಯ. ಮಂಚನಬಲೆ ಗ್ರಾನದ ಸುತ್ತ ಮುತ್ತಲಿರುವ ದಾಳಿಂಬೆ ತೋಟಗಳು, ಹೂವಿನ ತೋಟ, ದ್ರಾಕ್ಷಿ, ತರಕಾರಿ ತೋಟಗಳಲ್ಲಿ ನೀರು ಎರಡುಮೂರು ಅಡಿಗಳಷ್ಟು ನಿಂತಿದೆ.ಇದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ತಾಲೂಕು ಪರ್ಯಂತ ತೋಟಗಳಲ್ಲಿ ನೀರು ನಿಂತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬಾಗೇಪಲ್ಲಿ ತಾಲೂಕು ಕಸಬಾ ಹೋಬಳಿಯ ಪರಗೋಡು ಸಮೀಪದಲ್ಲಿ ನಿರ್ಮಾಣ ಮಾಡಿರುವ ಚಿತ್ರಾವತಿ ಜಲಾಶಯ ಎರಡು ವರ್ಷದ ಬಳಿಕ ಕೋಡಿಬಿದ್ದಿದ್ದು ಶಾಸಕ ಸುಬ್ಬಾರೆಡ್ಡಿ ಬಾಗೀನ ಅರ್ಪಿಸಿ ಸಂತಸಪಟ್ಟಿದ್ದಾರೆ.ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ನಗರಳಿಗೆ ನೀರನ್ನು ಒದಗಿಸುವ ಜಕ್ಕಲಮೊಡಗು ಜಲಾಶಯಕ್ಕೂ ನೀರಿನ ಹರಿವು ಹೆಚ್ಚಾಗಿದೆ.ಶ್ರೀನಿವಾಸ ಸಾಗರ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಬೋಟಿಂಗ್ ನಡೆಸಲು ಜಿಲ್ಲಾಡಳಿತ ಕ್ರಮವಹಿಸುತ್ತಿರುವ ಬಗ್ಗೆ ಮಾಹಿತಿಯಿದೆ.

ಹೀಗೆ ಜಿಲ್ಲೆಯಲ್ಲಿ ವರ್ಷಧಾರೆ ನಿರಂತರವಾಗಿ ಇರುವ ಕಾರಣ ಒಂದು ಕಾಲದಲ್ಲಿ ಬರಪೀಡಿತ ಜಿಲ್ಲೆ ಎಂಬ ಅಪಕೀರ್ತಿ ದೂರವಾಗಿ ಮಲೆನಾಡಿನಂತೆ ಹಚ್ಚಹಸಿರಿನ ಪರಿಸರ ಕಂಡುಬರುತ್ತಿರುವುದು ಜನಪ್ರತಿನಿಧಿಗಳಾದಿಯಾಗಿ ಜನತೆಯ ಮೊಗದಲ್ಲಿ ರಾಜಕಳೆಯುಕ್ಕುವಂತೆ ಮಾಡಿದೆ.
ಆದರೆ ರೈತಾಪಿಗಳು ಜನ-ಜಾನುವಾರುಗಳ ಪಾಲಿನ ಅಕ್ಷಯಪಾತ್ರೆಯಂತಿರುವ ಕೆರೆಗಳ ಸಂರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು.ಮಳೆಯ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಕಂಠಕವಾಗಿರುವ ರಾಜಕಾಲುವೆಗಳ ಒತ್ತುವರಿದಾರರ ವಿರುದ್ಧ ನಿರ್ಧಾಕ್ಷಿಣ್ಯಕ್ರಮಕ್ಕೆ ಮುಂದಾಗಬೇಕು. ಕೆರೆಗಳ ಒಡಲನ್ನು ತುಂಬಿರುವ ಹೂಳನ್ನು ತೆಗೆಸಿ ನೀರು ಸಂಗ್ರಹ ಹೆಚ್ಚಾಗುವಂತೆ ಮಾಡಬೇಕು ಎಂಬುದು ನೀರಾವರಿ ಹೋರಾಟಗಾರರ ಆಗ್ರಹವಾಗಿದೆ.
ಮೇಲಾಗಿ ಜಿಲ್ಲೆಯಾದ್ಯಂತ ಆಗಿರುವ ಮಳೆ ಹಾನಿಯ ಬಗ್ಗೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳು ರೈತರು ಮತ್ತು ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದು ಸಮಸ್ಯೆಗೆ ತುತ್ತಾಗಿರುವ ರೈತರಿಗೆ ಪರಿಹಾರ ನೀಡಬೇಕು ಎಂಬುದು ನಾಗರೀಕರ ಆಗ್ರಹವಾಗಿದೆ.