ಚಿಕ್ಕಬಳ್ಳಾಪುರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸರ್ಕಾರದ ಆದೇಶದಂತೆ ಆಯೋಜಿಸಲಾದ “ಕಲಾ ನಡಿಗೆ ನಿಮ್ಮ ಬಳಿಗೆ” ಕಾರ್ಯಕ್ರಮವು ಶನಿವಾರ ನಂದಿಗಿರಿಧಾಮದಲ್ಲಿ ಬೆಳಗ್ಗೆ 7.30 ಗಂಟೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಎನ್. ಚಲವಾದಿ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ಆಶಯದಂತೆ ಜನಸಾಮಾನ್ಯರ ಬಳಿಗೆ ಸಾಂಪ್ರದಾಯಿಕ ಹಾಗೂ ವೈವಿಧ್ಯಮಯ ಕಲಾ ಪ್ರಕಾರಗಳನ್ನು ಕೊಂಡೊಯ್ಯುವ ಉದ್ದೇಶದಿಂದ “ಕಲಾ ನಡಿಗೆ ಜನರ ಬಳಿಗೆ” ಯೋಜನೆಯನ್ನು ರೂಪಿಸಲಾಗಿದೆ. ಪ್ರವಾಸಿ ತಾಣಗಳು, ಉದ್ಯಾನವನಗಳು, ಮಾಲ್‌ಗಳು ಹಾಗೂ ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಪ್ರತಿ ತಿಂಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರಿಗೆ ವೇದಿಕೆ ಕಲ್ಪಿಸುವ ಜೊತೆಗೆ ಜನರಲ್ಲಿ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾತ್ತಿದೆ ಎಂದರು.
ಈ ಯೋಜನೆಯಡಿ 2026–27ನೇ ಸಾಲಿನ ಮೊದಲ ಕಾರ್ಯಕ್ರಮವನ್ನು ನಂದಿಬೆಟ್ಟದಲ್ಲಿ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಆಯೋಜಿಸಲಾಗಿದ್ದು, ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಕಲಾ ತಂಡಗಳು ಮನಮೋಹಕ ಪ್ರದರ್ಶನ ನೀಡಿ ಗಮನ ಸೆಳೆದವು. ಡೊಳ್ಳು ಕುಣಿತ ಕಲಾವಿದ ಮಂಜುನಾಥ ಮತ್ತು ತಂಡ, ವೀರಗಾಸೆ ಕಲಾವಿದ ಗಂಗಾಧರಯ್ಯ ಮತ್ತು ತಂಡ ಹಾಗೂ ಜನಪದ ಗಾಯನ ಕಲಾವಿದ ಜಿ.ಎನ್.ಅಶ್ವಥ್( Folk singer G.N. Ashwath) ಮತ್ತು ತಂಡ ತಮ್ಮ ಅದ್ಭುತ ಕಲಾ ಪ್ರದರ್ಶನಗಳ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ನಂದಿಗಿರಿಧಾಮಕ್ಕೆ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಡೊಳ್ಳು ಕುಣಿತ, ವೀರಗಾಸೆ ಹಾಗೂ ಜನಪದ ಗೀತೆಗಳ ಸೊಗಸನ್ನು ಕಣ್ತುಂಬಿಕೊಂಡರು. ಅನೇಕರು ಕಲಾವಿದರೊಂದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಸೂರ್ಯೋದಯದ ನೈಸರ್ಗಿಕ ಸೊಬಗಿನ ನಡುವೆ ಮೂಡಿಬಂದ ಈ ಸಾಂಸ್ಕೃತಿಕ ಸಂಭ್ರಮ ಪ್ರವಾಸಿಗರಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾದ ಡಿ.ಎಂ. ರವಿಕುಮಾರ್, ಪ್ರವಾಸೋದ್ಯಮ ಇಲಾಖೆಯ ಮನೋಜ್ ಹಾಗೂ ನರೇಶ್, ಬೆಂಗಳೂರು ನಗರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್, ಯೋಗನಂದೀಶ್ವರ ದೇವಾಲಯದ ನಾರುಬೇರು ಕಲಾವಿದ ನಾಗರಾಜ್, ಕ್ರೀಡಾ ಪಟು ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯ ಕ್ರಮದ ಯಶಸ್ಸಿಗೆ ಸಾಕ್ಷಿಯಾದರು.