ಚಿಕ್ಕಬಳ್ಳಾಪುರ: ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಸಾಧನೆ ಎಂಬುದನ್ನು ಮಾತ್ರ ಶ್ರೇಷ್ಠ ಎಂದುಕೊಳ್ಳುವುದಲ್ಲ ಬದಲಿಗೆ ಅದು ಮುಂದಿನ ಹಂತಕ್ಕೆ ಭದ್ರ ಬುನಾದಿ ಆಗಬೇಕು ಅಂತಹ ಸಂಸ್ಕೃತಿ ಸಂಬಂಧವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಭಗತ್ ಸಿಂಗ್ ಚಾರಿಟೇ ಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ ಬಿ ರೆಡ್ಡಿ ಹೇಳಿದರು.
ನಗರದ ಕೃಷ್ಣ ಟಾಕೀಸ್ ರಸ್ತೆಯಲ್ಲಿರುವ ಬ್ರಹ್ಮಾಕುಮಾರೀಸ್ ಸಂಸ್ಥೆಯ ಶಿವ ಪ್ರೇರಣಾ ಭವನದಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರ ಹೊಮ್ಮಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ನೆರವೇರಿಸಿ ಮಾತನಾಡಿದರು.
ಪ್ರಪಂಚದಲ್ಲಿ ಎಲ್ಲೂ ಇಲ್ಲದ ಬಹು ಭಾಷಾ ಸಂಸ್ಕೃತಿ ವಿವಿಧತೆಯಲ್ಲಿ ಏಕತೆ ಭಾರತದಲ್ಲಿದೆ. ಅದರಲ್ಲೂ ಇಲ್ಲಿನ ಧಾರ್ಮಿಕ ಸಾಮರಸ್ಯ ಸ್ವಾತಂತ್ರ್ಯ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: Chikkaballapur News: ಭಾಷೆ ಸಾಹಿತ್ಯ ಸಂಸ್ಕೃತಿ ಬೆಳವಣಿಗೆಗೆ ಸಾಂಸ್ಥಿಕ ಚೌಕಟ್ಟಿನ ಪ್ರತಿರೂಪ ಕಸಾಪ
ದೇಶ ಮತ್ತು ದೇಶವಾಸಿಗಳ ಬಗ್ಗೆ ಇಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಹೆಮ್ಮೆಯಿರಬೇಕು. ಆ ಮೂಲಕ ದೇಶ ಕಟ್ಟುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಕೂಡ ಶೈಕ್ಷಣಿಕ ಸಾಧನೆಯಂತೆ ನಮ್ಮ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ವಿಸ್ತರಿಸುತ್ತಾ ದೇಶದ ಘನತೆ ಗೌರವ ಕಾಪಾಡಿ ಎಂದರು.
ಪ್ರೀತಿಯ ವಿದ್ಯಾರ್ಥಿಗಳೇ ನೀವು ಪಡೆದಿರುವ ಉತ್ತಮ ಅಂಕಗಳೇ ಭವಿಷ್ಯವಲ್ಲ. ವಿದ್ಯೆಯ ಜತೆಗೆ ವಿನಯವನ್ನೂ ಬೆಳೆಸಿಕೊಳ್ಳಿ.ನಮ್ಮ ಜೊತೆಗಿರುವ ಯಾರ ಬಗ್ಗೆಯೂ ಅಸೂಯೆ ಬೇಡ ಗುರು ಹಿರಿಯರ ಬಗ್ಗೆ ಹೆತ್ತ-ತಂದೆ ತಾಯಿ ಬಗ್ಗೆ ವ್ಯಾಸಂಗ ಮಾಡಿದ ಶಾಲೆಯ ಬಗ್ಗೆ ಹೆಮ್ಮೆ ಇರಿಸಿಕೊಳ್ಳ ಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿ ಸಂದೀಪ ಬಿ ರೆಡ್ಡಿ ಮನನ ಮಾಡಿದರು.
ಮೌಂಟ್ ಅಬುಮಧುಬನ ನಿವಾಸಿ ರಾಮಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಮೌಲ್ಯಗಳನ್ನ ರೂಡಿಸಿಕೊಳ್ಳುವುದರ ಬಗ್ಗೆ ತಮ್ಮ ಜೀವನವನ್ನು ಶ್ರೇಷ್ಠತೆ ಮಾಡಿಕೊಳ್ಳುವುದರ ಬಗ್ಗೆ ಸರಳ ಧ್ಯಾನದಿಂದ ಉಂಟಾಗುವ ಒಳಿತಿನ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮನನ ಮಾಡಿದರು.
ಡಿಡಿಪಿಐ ಕಚೇರಿ ವಿಷಯ ಪರಿವೀಕ್ಷಕ ಅಂಜಿನಪ್ಪ ಮಾತನಾಡಿ, ವಿದ್ಯೆ ಕೇವಲ ಅಂಕಗಳಿಗೆ ಸೀಮಿತ ಸಲ್ಲ ಜೀವನದಲ್ಲಿ ಸಂಸ್ಕಾರವನ್ನ ಬೆಳೆಸಿಕೊಳ್ಳಲು ಇದು ಉಪಯೋಗ ಆಗಬೇಕು. ಸರ್ಕಾರ ಶಿಕ್ಷಣದ ಗುಣಮಟ್ಟ ಹೆಚ್ಚು ಮಾಡುವ ದಿಸೆಯಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ವಿದ್ಯಾರ್ಥಿಗಳಿಗೆ ಕಲಿಕೆಯ ಪ್ರಾರಂಭದಿಂದ ಮೊದಲ ಪಬ್ಲಿಕ್ ಪರೀಕ್ಷೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯೇ ಆಗಿದೆ. ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣದೊಂದಿಗೆ ತಮ್ಮ ಬದ್ಧತೆ ತೋರಿಸಬೇಕು ಎಂದು ಕಿವಿಮಾತು ಹೇಳಿದರು.
ಇದೆ ವೇಳೆ, ರಾಜ್ಯದಲ್ಲಿಯೇ ಎರಡನೇ ರಾಂಕ್ ಪಡೆದ ಮಂಚನಬೆಲೆ ಗ್ರಾಮೀಣ ಪ್ರತಿಭೆ ಪ್ರಣತಿ ರಾಜ್ ಸೇರಿದಂತೆ ಜಿಲ್ಲೆ ತಾಲೂಕು ಹಾಗೂ ಶಾಲಾ ಹಂತದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಧನುಶ್ರೀ, ಅಗಲಗುರ್ಕಿ ಬಿಜಿಎಸ್ ಶಾಲೆಯ ಕುಶಲ ಕೆ.ಎಸ್.ಭಾರತಿ ಪ್ರೌಢಶಾಲೆಯ ಕೆ.ಎನ್.ವೀಣಾ, ಶೃತಿ.ಸಿ, ಪೂರ್ವಿಕ ಆರ್, ವಾಪಸಂದ್ರ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಕರುಣಶ್ರೀ, ನಿಹಾರಿಕಾ ಕೆ.ಎನ್, ಅನುಜ, ಚಂದ್ರದೀಪ ಕೆ.ಎಲ್, ವೈಷ್ಣವಿ ಎಸ್, ಅನಂತ ವಿದ್ಯಾ ನಿಕೇತನ ಶಾಲೆಯ ರಾಜಸ್ ಸಿ.ಎಂ. ಪ್ರಕೃತಿ ವಿದ್ಯಾನಿಕೇತನ ಶಾಲೆಯ ತೇಜಸ್ವಿನಿ ಎಂ., ದರ್ಶನ್ ವಿಷ್ಣು, ಅನುಪಮಾ.ಎಂ. ಎಂಬ ವಿದ್ಯಾರ್ಥಿಗಳನ್ನು ಗಣ್ಯರು ಗೌರವ ಸಮರ್ಪಣೆ ಮಾಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಾ ಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಾನಿಕ ಸಂಚಾಲಕಿ ರಾಜಯೋಗಿನಿ ಬಿ.ಕೆ.ಲಲಿತ, ಹಿರಿಯ ಪತ್ರಕರ್ತ ಎಚ್.ವಿ.ಸೋಮಶೇಖರ್, ಬ್ರಹ್ಮ ಕುಮಾರಿಯರಾದ ರೇಣುಕಾ, ಚಿನ್ನಮ್ಮ, ಲಕ್ಷ್ಮಿದೇವಮ್ಮ, ಮಂಜುಳಾ, ಎಂ ಕೃಷ್ಣಪ್ಪ, ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಶಿಕ್ಷಕರು, ಪೋಷಕರು ಇದ್ದರು.