ಚಿಕ್ಕಬಳ್ಳಾಪುರ: ತೆರೆದ ಕೊಳವೆ ಬಾವಿಗಳಿಗೆ ಯಾವುದೇ ಮಕ್ಕಳು ಹಾಗೂ ವ್ಯಕ್ತಿಗಳು ಬಿದ್ದು ಪ್ರಾಣ ಹಾನಿ ಆಗುವ ಪ್ರಸಂಗಗಳು ಜಿಲ್ಲೆಯಲ್ಲಿ ಜರುಗಬಾರದು. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು (Deputy Commissioner G.Prabhu)ಖಡಕ್ ಎಚ್ಚರಿಕೆ ನೀಡಿದರು.
ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ “ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮುಂಗಾರು ಮಾನ್ಸೂನ್ ಮಳೆ ಬರುವವರೆಗೂ ಮುಂದಿನ 3 ರಿಂದ 4 ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಕಾರ್ಯಪಾಲಕ ಅಭಿಯಂತರರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಜಲಜೀವನ್ ಮಿಷನ್(Jaljeevan Mission) ಅನುಷ್ಠಾನದ ಅಭಿಯಂತರು ಯೋಜನೆ ಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಎಲ್ಲ ಮೂಲ ಸೌಕರ್ಯ ಕಲ್ಪಿಸಿದ ಮೇಲೆ ಕೊಳವೆ ಬಾವಿ ಯಿಂದ ನೀರು ಹೊರ ತೆಗೆದ ನಂತರವೇ ಗ್ರಾಮ ಪಂಚಾಯಿತಿಗಳ ಸುಪರ್ದಿಗೆ ನೀಡಬೇಕು. ಜಲಜೀವನ್ ಯೋಜನೆಯಡಿ ಅನುಮೋದನೆ ಆಗಿರುವ ಕೊಳವೆ ಬಾವಿಗಳನ್ನು ಕೊರೆಸಿ ನೀರು ಪೂರೈಸುವಂತಹ ಕೆಲಸವಾದರೆ ನೀರಿನ ಸಮಸ್ಯೆಯೇ ಉದ್ಬವವಾಗುವುದಿಲ್ಲ,ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಯೋಜನಾ ಅಭಿಯಂತರರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ಉದ್ದೇಶಕ್ಕೆ ಹಾಗೂ ಇತರ ಯಾವುದೇ ಉದ್ದೇಶಕ್ಕಾಗಿ ಕೊರೆದ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾದರೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಮೋಟಾರ್ ಪಂಪ್ ಅಳವಡಿಸಿ ನೀರು ಪೂರೈಸುವಂತೆ ಸಕಲ ವ್ಯವಸ್ಥೆಗಳನ್ನು ಮಾಡಬೇಕು. ಒಂದು ವೇಳೆ ನೀರು ದೊರಕದೆ ಇರುವ ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಮುಚ್ಚುವಂತಹ ಕೆಲಸವನ್ನು ಸಂಬಂಧ ಪಟ್ಟವರು ಕೂಡಲೇ ಮಾಡಬೇಕು. ಕೊಳವೆ ಬಾವಿ ಕೊರೆದು ನೀರು ದೊರಕಿದರೂ ವಿದ್ಯುತ್ ಸಂಪರ್ಕ ಅಥವಾ ಇತರ ಮೂಲ ಸೌಕರ್ಯ ಕಲ್ಪಿಸಲು ವಿಳಂಬ ಮಾಡಿ ಯಾವುದೇ ರೀತಿಯ ಅವಘಡಗಳು ಜಿಲ್ಲೆಯಲ್ಲಿ ಸಂಭವಿಸಿದರೆ ಸಹಿಸಲ್ಲ ಅಂತಹ ಅಭಿಯಂತರರು ಹಾಗೂ ಸ್ಥಳೀಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಕಡಕ್ ಎಚ್ಚರಿಕೆ ನೀಡಿದರು.
ಜಿಲ್ಲೆಯ 19 ಗ್ರಾಮ ಪಂಚಾಯಿತಿಗಳ 23 ಗ್ರಾಮಗಳಿಗೆ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇದ್ದು, ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 66 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದ್ದು, ಮುನ್ನೆಚ್ಚರಿಕೆ ಕ್ರಮ ಗಳನ್ನು ತೆಗೆದುಕೊಂಡು ಖಾಸಗಿ ಕೊಳವೆ ಬಾವಿ ಮಾಲೀಕರ ಸಹಕಾರ ಪಡೆದು ಒಪ್ಪಂದ ಮಾಡಿಕೊಳ್ಳಬೇಕು ಎಂದರು .
ನಗರಾಡಳಿತ ಪ್ರದೇಶದಲ್ಲಿಯೂ ಸಹ 14 ವಾರ್ಡ್ʼಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 9 ಖಾಸಗಿ ಟ್ಯಾಂಕರ್ ಮೂಲಕ ಹಾಗೂ 10 ಖಾಸಗಿ ಕೊಳವೆ ಬಾವಿ ಮೂಲಕ ಸದ್ಯಕ್ಕೆ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 21 ವಾರ್ಡ್ ಗಳಲ್ಲಿ ಸಮಸ್ಯೆ ಎದುರಾಗಬಹುದಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಂಜುನಾಥ ಸೇರಿದಂತೆ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು, ನಗರಾಡಳಿತ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.