ಗುಡಿಬಂಡೆ: ಜಿಲ್ಲಾ ಮಟ್ಟದ ಕಬಡ್ಡಿ(Kabaddi) ಕ್ರೀಡಾಕೂಟದಲ್ಲಿ ಸತತ ನಾಲ್ಕನೇ ಬಾರಿಗೆ ಜಯಭೇರಿ ಬಾರಿಸಿರುವ ಗುಡಿಬಂಡೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು, ತುಮಕೂರಿನಲ್ಲಿ ನಡೆಯಲಿರುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗುವ ಮೂಲಕ ತಾಲೂಕಿನ ಕ್ರೀಡಾ ಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ.
ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ವಿಜಯ ಸಾಧಿಸಿದ್ದಾರೆ. ಸತತ ನಾಲ್ಕನೇ ಬಾರಿಯ ಈ ಸಾಧನೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ: Kabaddi Player protest: ಜಿಲ್ಲಾಡಳಿತ ಭವನದ ಎದುರು ಬಾಲಕಿಯರ ಪ್ರತಿಭಟನೆ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ವಿದ್ಯಾರ್ಥಿಗಳ ಈ ಯಶಸ್ಸಿಗೆ ಟಿಪಿಇಐ ಹನುಮಂತ ರೆಡ್ಡಿ ಅವರ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ಸಹಕಾರ ಪ್ರಮುಖವಾಗಿದ್ದು, ದೈಹಿಕ ಶಿಕ್ಷಣ ಶಿಕ್ಷಕರಾದ ಮುರಳಿ, ವಿಜಯ್ ಕುಮಾರ್, ಅಂಜಿನಪ್ಪ, ಮುಬಾರಕ್, ಮಂಜು, ಮನೋಹರ್, ಮಧು, ಆಸಿಫಾ, ಗೌರಮ್ಮ, ನರಸಿಂಹಮೂರ್ತಿ ಮತ್ತು ಶರೀಫ್ ಅವರ ಪರಿಶ್ರಮವನ್ನು ವಿದ್ಯಾರ್ಥಿಗಳು ಸ್ಮರಿಸಿದ್ದಾರೆ.
ಶಾಲೆಯ ಪ್ರಾಂಶುಪಾಲ ಉಮೇಶ್ ಕುಂಟೋಜಿ, ನಿಲಯ ಪಾಲಕ ರಾಜಿನಿಕಾಂತ್ ಹಾಗೂ ಹಿರಿಯ ಶಿಕ್ಷಕಿ ಸುನೀತಾ ಅವರ ಮಾರ್ಗದರ್ಶನ ಮತ್ತು ಬೆಂಬಲವೂ ಈ ಸಾಧನೆಗೆ ನೆರವಾಗಿದೆ. ಕ್ರೀಡಾಪಟುಗಳಿಗೆ ನಿರಂತರ ಪ್ರೋತ್ಸಾಹ ನೀಡಿದ ಪೋಷಕರಿಗೂ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಸಾಧನೆಯ ಪರಂಪರೆ ಮುಂದುವರಿಸಿರುವ ವಿದ್ಯಾರ್ಥಿಗಳು, ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿ ಎಂದು ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.