ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಿಲ್ಲೆಯ ನಾಲ್ವರು ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ: ಉಸ್ತುವಾರಿ ಸಚಿವ; ‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ’ ಸಂದೇಶ

ಜಿಲ್ಲೆಯ ಬರ ನಿರ್ವಹಣೆಯಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ರೈತರ ಹಿತಾಸಕ್ತಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಜನರಿಗೆ ಯಾವುದೇ ತೊಂದರೆಯಾಗದಂತೆ ಪರಿಹಾರ ಕ್ರಮಗಳನ್ನು ವೈಜ್ಞಾ ನಿಕ ನೆಲೆಗಟ್ಟಿನಲ್ಲಿ ಕೈಗೊಳ್ಳಲಾಗುತ್ತಿದೆ

ಚಿಕ್ಕಬಳ್ಳಾಪುರ: ಸಚಿವ ಸಂಪುಟ ವಿಸ್ತರಣೆ ಹಾಗೂ ಜಿಲ್ಲೆಗಳಿಗೆ ಸಚಿವರ ನೇಮಕ ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ತೀರ್ಮಾನಿಸುವ ವಿಷಯವಾಗಿದ್ದು, ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಆ ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎಂದು ಸಾರಿಗೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್(Byrati Suresh) ಸ್ಪಷ್ಟಪಡಿಸಿದರು.

ಜಿಲ್ಲಾ ಪ್ರಕೃತಿ ವಿಕೋಪ ಮತ್ತು ಬರ ಪರಿಸ್ಥಿತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾರು ಸಚಿವರಾಗಬೇಕು, ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಸಚಿವ ರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಸಮರ್ಪಕ ಪ್ರಾತಿನಿಧ್ಯ ಸಿಗುವ ಬಗ್ಗೆ ಪಕ್ಷದ ನಾಯಕತ್ವಕ್ಕೆ ಸ್ಪಷ್ಟ ಅರಿವಿದೆ. ಬಂಡಾಯದಂತಹ ಬೆಳವಣಿಗೆಗಳ ಬಗ್ಗೆಯೂ ಸೂಕ್ತ ನಿರ್ಧಾರ ಕೈಗೊಳ್ಳಲಿದೆ" ಎಂದರು.

ಜಿಲ್ಲೆಯ ಬರ ನಿರ್ವಹಣೆಯಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ರೈತರ ಹಿತಾಸಕ್ತಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಜನರಿಗೆ ಯಾವುದೇ ತೊಂದರೆಯಾಗದಂತೆ ಪರಿಹಾರ ಕ್ರಮಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.

ನಾಲ್ವರು ಶಾಸಕರಿಗೂ ಸಚಿವರಾಗುವ ಅರ್ಹತೆ

ಚಿಕ್ಕಬಳ್ಳಾಪುರ ಜಿಲ್ಲೆಯ ನಾಲ್ವರು ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಕೆ.ಎಚ್. ಪುಟ್ಟಸ್ವಾಮಿ ಗೌಡ, ಪ್ರದೀಪ್ ಈಶ್ವರ್ ಹಾಗೂ ಡಾ. ಎಂ.ಸಿ. ಸುಧಾಕರ್ ಎಲ್ಲರೂ ಸಚಿವರಾಗುವ ಅರ್ಹತೆ ಹೊಂದಿದ್ದಾರೆ. ಆದರೆ ಸಂಪುಟದಲ್ಲಿ ಸೀಮಿತ ಅವಕಾಶಗಳಿರುವುದರಿಂದ ಕೆಲವರಿಗೆ ಮಾತ್ರ ಜವಾಬ್ದಾರಿ ಸಿಗುತ್ತದೆ. "ಇಂದು ನಾನು ಸಚಿವನಾಗಿರಬಹುದು, ನಾಳೆ ಪ್ರದೀಪ್ ಈಶ್ವರ್ ನಾಡಿದ್ದು ಮತ್ತೊಬ್ಬರು ಸಚಿವರಾಗಬಹುದು. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸಾಧ್ಯ. ಅಂತಿಮ ನಿರ್ಧಾರ ಪಕ್ಷದ್ದೇ" ಎಂದು ಹೇಳಿದರು.

‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ’

"ನಾನು ವೈಯಕ್ತಿಕ ವರ್ಚಸ್ಸಿನ ಮೇಲೆ ಗೆದ್ದಿದ್ದೇನೆ" ಎಂಬ ಡಾ.ಎಂ.ಸಿ.ಸುಧಾಕರ್(Dr M C Sudhakar) ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬೈರತಿ ಸುರೇಶ್, ಯಾವುದೇ ಅಭ್ಯರ್ಥಿ ಪಕ್ಷದ ಬಿ-ಫಾರಂ ಇಲ್ಲದೆ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.

150ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಸಂಘಟನಾ ಬಲ ಮತ್ತು ವರ್ಚಸ್ಸು ಇದೆ. ಆ ಶಕ್ತಿಯ ಆಧಾರದಲ್ಲೇ ಎಲ್ಲರೂ ಗೆದ್ದಿದ್ದೇವೆ ಎಂದು ಹೇಳುವ ಮೂಲಕ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶ ನೀಡಿದರು.

ಎಚ್.ಎನ್. ವ್ಯಾಲಿ, ಬರ ನಿರ್ವಹಣೆಗೂ ಭರವಸೆ

ಎಚ್.ಎನ್. ವ್ಯಾಲಿ ಯೋಜನೆಯ ಮೂರನೇ ಹಂತದ ಶುದ್ಧೀಕರಣ ವಿಚಾರವನ್ನು ಸರ್ಕಾರದ ಗಮನ ಸೆಳೆದು ಶೀಘ್ರ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದಲೂ ಈಗಾಗಲೇ ಮಾಹಿತಿ ಪಡೆದಿರುವುದಾಗಿ ಹೇಳಿದರು.

ಬರ ಪರಿಸ್ಥಿತಿಯಲ್ಲಿ ಜನರಿಗೆ ಉದ್ಯೋಗ, ಆರ್ಥಿಕ ಭದ್ರತೆ ಹಾಗೂ ಜೀವನೋಪಾಯಕ್ಕೆ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಮತ್ತು ಇತರೆ ಕಾರ್ಯಕ್ರಮಗಳ ಮೂಲಕ ನೆರವು ನೀಡಲಾಗು ವುದು. ಯಾರೂ ಸಂಕಷ್ಟಕ್ಕೆ ಸಿಲುಕದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಜಿಲ್ಲೆಗೆ ಸಚಿವ ಸ್ಥಾನ ಇಲ್ಲ ಎಂಬ ಪ್ರಶ್ನೆಗೆ ಉತ್ತರ

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಚಿವ ಸ್ಥಾನ ದೊರೆಯದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಇನ್ನೂ ಎಂಟರಿಂದ ಒಂಬತ್ತು ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಹೇಳಿದರು.

ಹಿಂದಿನ ಅವಧಿಯಲ್ಲಿ ಅವಕಾಶ ಸಿಗದ ಜಿಲ್ಲೆಗಳಿಗೆ ಈ ಬಾರಿ ಆದ್ಯತೆ ನೀಡಲಾಗಿದೆ. ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ಭಾವನೆ ಸರಿಯಲ್ಲ. ನನ್ನ ಅವಧಿ ಯಲ್ಲಿ ಜಿಲ್ಲೆಯ ಯಾವ ತಾಲೂಕನ್ನೂ ಕಡೆಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸುಧಾಕರ್ ಸಭೆಗೆ ಗೈರು
ಡಾ.ಎಂ.ಸಿ.ಸುಧಾಕರ್ ಪ್ರಗತಿ ಪರಿಶೀಲನಾ ಸಭೆಗೆ ಗೈರಾಗಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು.

"ನಾನು ಅವರನ್ನು ಸಭೆಗೆ ಆಹ್ವಾನಿಸಿದ್ದೆ. ಅವರಿಗೆ ಬೇರೆ ಕೆಲಸ ಇದ್ದಿರಬಹುದು. ಅವರು ಏಕೆ ಬರಲಿಲ್ಲ ಎಂಬುದನ್ನು ಅವರನ್ನೇ ಕೇಳಬೇಕು" ಎಂದು ಪ್ರತಿಕ್ರಿಯಿಸಿದರು.

ಅವಿಭಜಿತ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ತಮಗೆ ಸಮಗ್ರ ಅರಿವಿದ್ದು, ಉಸ್ತುವಾರಿ ಸಚಿವರಾಗಿ ತಮ್ಮ ಅವಧಿಯಲ್ಲಿ ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವುದಾಗಿ ಬೈರತಿ ಸುರೇಶ್ ಭರವಸೆ ನೀಡಿದರು.