ಗುಡಿಬಂಡೆ: ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಪ್ಪ ಕೆರೆಯಿಂದ ಅಕ್ರಮವಾಗಿ ಮಣ್ಣು ತೆಗೆಯುವ ಹಾಗೂ ಮಾರಾಟ ಮಾಡುವ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿರುವ ಹಳೇ ಗುಡಿಬಂಡೆ ಹಾಗೂ ನಿಚ್ಚನಬಂಡಹಳ್ಳಿ ಗ್ರಾಮಸ್ಥರು, ಈ ದಂಧೆಯನ್ನು ತಕ್ಷಣವೇ ನಿಲ್ಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾ.ಪಂ ಇಒ ನಾಗಮಣಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಹಳೇ ಗುಡಿಬಂಡೆ ಗ್ರಾಮದ ಯುವ ಮುಖಂಡ ಮನೋಜ್ , ಕಳೆದ ಹಲವು ತಿಂಗಳಿಂದ ಕೆಲ ಟಿಪ್ಪರ್ ಲಾರಿ ಮಾಲೀಕರು ಹಾಗೂ ಇಟ್ಟಿಗೆ ಕಾರ್ಖಾನೆಗಳಿಗೆ ಸಂಬಂಧಿಸಿದವರು ಯಾವುದೇ ಅಧಿಕೃತ ಅನುಮತಿ ಪಡೆಯದೇ ಕೆರೆಯಿಂದ ಮಣ್ಣನ್ನು ಅಕ್ರಮವಾಗಿ ತೆಗೆದು ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: Chikkaballapur News: ಆಕ್ಸಿಜನ್ ಕೊರತೆಯಿಂದ ಬಾಲಕಿ ಸಾವು ಆರೋಪ; ಆಸ್ಪತ್ರೆ ಎದುರು ಗ್ರಾಮಸ್ಥರ ಪ್ರತಿಭಟನೆ
ಅಕ್ರಮ ಮಣ್ಣು ತೆಗೆಯುವ ಪರಿಣಾಮ ಕೆರೆಯಲ್ಲಿ ಸುಮಾರು 10 ಅಡಿಗೂ ಹೆಚ್ಚು ಆಳದ ಗುಂಡಿಗಳು ನಿರ್ಮಾಣವಾಗಿದ್ದು, ಸಾರ್ವಜನಿಕರು ಅಥವಾ ಜಾನುವಾರುಗಳು ಅಜಾಗರೂಕತೆ ಯಿಂದ ಬಿದ್ದರೆ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಇನ್ನೂ ಮಣ್ಣು ತುಂಬಿದ ಟಿಪ್ಪರ್ ಲಾರಿಗಳು ಗ್ರಾಮ ರಸ್ತೆಗಳ ಮೂಲಕ ಅತಿವೇಗದಲ್ಲಿ ಸಂಚರಿಸುತ್ತಿರುವುದರಿಂದ ಧೂಳು ಹೆಚ್ಚಾಗಿ ಏಳಿ, ರಸ್ತೆ ಬದಿಯ ಕೃಷಿ ಬೆಳೆಗಳಿಗೆ ಹಾನಿಯಾಗುತ್ತಿದೆ. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಕ್ರಮ ಮಣ್ಣು ಸಾಗಣೆ ತಕ್ಷಣ ನಿಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದರು.
ಬಳಿಕ ಹೆಚ್.ಪಿ. ಲಕ್ಷ್ಮೀನಾರಾಯಣ ಮಾತನಾಡಿ, ಈ ಭಾಗದ ರೈತರಿಗೆ ಕೃಷಿ ಜಮೀನುಗಳಿಗೆ ಅಗತ್ಯ ವಿರುವಷ್ಟು ಮಣ್ಣು ಪಡೆಯುವುದಕ್ಕೂ ಸಾಕಷ್ಟು ತೊಂದರೆ ಎದುರಾಗುತ್ತಿದೆ. ಆದರೆ ಕೆಲವರು ಕೆರೆಯ ಮಣ್ಣನ್ನೇ ವ್ಯಾಪಾರವನ್ನಾಗಿ ಮಾಡಿಕೊಂಡು ಮಾಫಿಯಾ ರೀತಿಯಲ್ಲಿ ಮಾರಾಟ ನಡೆಸು ತ್ತಿದ್ದಾರೆ. ಇದು ಸಾರ್ವಜನಿಕ ಆಸ್ತಿಯ ದುರುಪಯೋಗವಾಗಿದ್ದು, ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಕ್ರಮ ಚಟುವಟಿಕೆಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರ ಮನವಿ ಸ್ವೀಕರಿಸಿದ ತಾಪಂ ಇಒ ನಾಗಮಣಿ ಪ್ರತಿಕ್ರಿಯಿಸಿ, ಕೆರೆಯಿಂದ ಮಣ್ಣು ತೆಗೆಯ ಬಾರದು ಎಂದು ಈಗಾಗಲೇ ಹಲವು ಬಾರಿ ಸೂಚನೆ ನೀಡಲಾಗಿದೆ. ಆದರೂ ಚಟುವಟಿಕೆ ಮುಂದು ವರಿದಿರುವ ಬಗ್ಗೆ ದೂರುಗಳು ಬಂದಿವೆ. ಸ್ಥಳ ಪರಿಶೀಲನೆ ನಡೆಸಿ ಅಕ್ರಮ ಮಣ್ಣು ಸಾಗಣೆ ಹಾಗೂ ಮಾರಾಟವನ್ನು ತಕ್ಷಣವೇ ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.