ಗುಡಿಬಂಡೆ: ತಾಲೂಕಿನ ವರ್ಲಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಡಿ ಯುವ ನೀರಿನ ಕೊಳವೆಬಾವಿಯನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿ ಕಾಂಪೌಂಡ್ ನಿರ್ಮಿಸಿ ರುವ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪೋಲಂಪಲ್ಲಿ ಮತ್ತು ಜಂಗಾಲಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಹಲವು ವರ್ಷಗಳ ಹಿಂದೆ ಈ ಕೊಳವೆ ಬಾವಿ ಕೊರೆಸಲಾಗಿತ್ತು. ಇದಕ್ಕೆ ಪ್ರತ್ಯೇಕ ವಿದ್ಯುತ್ ಟ್ರಾನ್ಸ್ಫಾರ್ಮರ್ ಕೂಡ ಅಳವಡಿಸಲಾಗಿತ್ತು. ಆದರೆ, ಇತ್ತೀಚೆಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರು ಈ ಜಾಗ ತಮ್ಮದೆಂದು ಹಕ್ಕು ಸಾಧಿಸಿದ್ದು, ಕೊಳವೆಬಾವಿ ಹಾಗೂ ಟ್ರಾನ್ಸ್ಫಾರ್ಮರ್ ಸೇರಿಸಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Gudibande News: ಎಲ್ಲವನ್ನೂ ನೀಡುವ ಭೂ ತಾಯಿಯನ್ನು ನಾವು ಸಂರಕ್ಷಿಸೋಣ : ನಾಗಮಣಿ
ಅಧಿಕಾರಿಗಳ ಭೇಟಿ, ಪರಿಶೀಲನೆ: ವಿಷಯ ತಿಳಿದ ತಕ್ಷಣ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪೂಜಪ್ಪ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ನವೀನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಹಾಗೂ ಖಾಸಗಿ ವ್ಯಕ್ತಿ ಯ ನಡುವೆ ತೀವ್ರ ವಾಕ್ಸಮರ ಏರ್ಪಟ್ಟಿತು. ಜಮೀನು ಮಾಲೀಕರು ತಮ್ಮ ಸರ್ವೆ ವರದಿಯ ಪ್ರಕಾರ ಇದು ತಮ್ಮ ಜಾಗವೆಂದು ವಾದಿಸಿದರು.
ಅಧಿಕಾರಿಗಳು ರಸ್ತೆಯ ಮಧ್ಯಭಾಗದಿಂದ ಅಳತೆ ಮಾಡಿದಾಗ, ಕೊಳವೆಬಾವಿ ಇರುವ ಜಾಗವು ರಸ್ತೆಗೆ ಸೇರಿದ್ದು ಎಂಬುದು ಪ್ರಾಥಮಿಕವಾಗಿ ದೃಢಪಟ್ಟಿದೆ. ನಿಯಮಗಳ ಪ್ರಕಾರ ರಸ್ತೆಯ ಮಧ್ಯಭಾಗ ದಿಂದ 40 ರಿಂದ 50 ಅಡಿ ವ್ಯಾಪ್ತಿಯ ಜಾಗವು ರಸ್ತೆಗೆ ಸೇರುತ್ತದೆ.
ಈ ಕುರಿತು ತಹಶೀಲ್ದಾರ್ ಅವರಿಗೆ ವಿಸ್ತೃತ ವರದಿ ಸಲ್ಲಿಸಲಾಗುವುದು. ಅಕ್ರಮವಾಗಿ ನಿರ್ಮಿಸಿರುವ ಕಾಂಪೌಂಡ್ ತೆರವುಗೊಳಿಸಲು ಕೂಡಲೇ ನೋಟಿಸ್ ಜಾರಿ ಮಾಡಲಾಗುವುದು" ಎಂದು ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಲ್ಲದೆ, ಜಿಲ್ಲಾಧಿಕಾರಿಗಳು ಈ ಕೂಡಲೇ ಮಧ್ಯಪ್ರವೇಶಿಸಿ ಸರ್ಕಾರಿ ಆಸ್ತಿಯನ್ನು ರಕ್ಷಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸರ್ಕಾರಿ ಜಾಗವಿದ್ದರೆ ಬಿಟ್ಟುಕೊಡಲು ಸಿದ್ಧ - ಮಾಲೀಕ: ಈ ವಿವಾದದ ಕುರಿತು ಪ್ರತಿಕ್ರಿಯಿ ಸಿರುವ ಜಮೀನು ಮಾಲೀಕ ಶಫಿ ಅಹಮದ್, "ನಾನು ಕಾನೂನುಬದ್ಧವಾಗಿ ನಿಯಮಗಳ ಅನ್ವಯ ವೇ ಜಮೀನು ಖರೀದಿಸಿದ್ದೇನೆ. ಆದರೆ ಸ್ಥಳೀಯರು ನನಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಅಧಿಕಾರಿಗಳು ಅಧಿಕೃತವಾಗಿ ಅಳತೆ ಮಾಡಲಿ. ಒಂದು ವೇಳೆ ನನ್ನ ಜಾಗದಲ್ಲಿ ಸರ್ಕಾರಿ ಆಸ್ತಿ (ರಸ್ತೆ ಜಾಗ) ಇರುವುದು ಸಾಬೀತಾದರೆ, ಆ ಜಾಗ ಬಿಟ್ಟು ಕೊಡಲು ನಾನು ಸಿದ್ಧನಿದ್ದೇನೆ" ಎಂದು ಸ್ಪಷ್ಟ ಪಡಿಸಿದ್ದಾರೆ.