ಬೆಂಗಳೂರು: ಒಳಮೀಸಲಾತಿ ಹೆಸರಿನಲ್ಲಿ ಅಂಬೇಡ್ಕರ್ ಎಂಬ ಸುಂದರ ಮೂರ್ತಿ ಯನ್ನು ಭಗ್ನಗೊಳಿಸುತ್ತಿರುವ ಮನುವಾದಿ ಕುತಂತ್ರವನ್ನು ನಾವು ನೀವೆಲ್ಲಾ ತಡೆಯ ಬೇಕಿದೆ. ಹೀಗಾಗಿ ಅಸ್ಪೃಷ್ಯ ಜಾತಿಗಳು ಒಕ್ಕೊರಲಿನಿಂದ ನಮಗೆ ಅಂಬೇಡ್ಕರ್ ಮೀಸಲಾತಿ ಸಾಕು ಒಳಮೀಸಲಾತಿ ಬಿಸಾಕು ಎಂಬ ಘೋಷಣೆ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.
ನಗರದ ಪ್ರೀಡಂ ಪಾರ್ಕಿನಲ್ಲಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಒಳಮೀಸಲಾತಿ ರಹಿತ ಹಳೆಯ ಮೀಸಲಾತಿಯ ಜಾರಿಗಾಗಿ ಒತ್ತಾಯಿಸಿ ನಡೆದ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರ್‌ಎಸ್‌ಎಸ್ ಪ್ರಣೀತ ಒಳಮೀಸಲಾತಿ ಎಂಬುದು ಅಸ್ಪೃಷ್ಯ ಸಮುದಾಯಗಳ ಒಗ್ಗಟ್ಟನ್ನು ಒಡೆಯುವ ಭಾರೀ ಕುತಂತ್ರವಾಗಿದೆ. ಎಸ್ಸಿ,ಎಸ್ಟಿ ಸಂಬಂಧಿತ ಸಹೋದರ ಸಮುದಾಯಗಳನ್ನು ಬೆಸೆಯಲು ಬಿಟ್ಟರೆ ಅವರು ಮುಖ್ಯಮಂತ್ರಿ ಪ್ರಧಾನ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಅಧಿಕಾರ ಸ್ಥಾನಕ್ಕೆ ಏರಲಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಒಳ ಮೀಸಲಾತಿಯೆಂಬ ವಿಷವನ್ನು ಇವರ ಮೆದುಳಿಗೆ ತುಂಬಬೇಕು ಎಂದು ಭಾವಿಸಿ ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತುಂಬಿದ್ದಾರೆ. ಉತ್ತರ ಭಾರತದಲ್ಲಿ ಈ ಕುತಂತ್ರ ಫಲಿಸದ ಕಾರಣ ತೆಲಂಗಾಣ ಎಂಬ ಹುಸಿ ಮಾದರಿಯನ್ನು ಮುಂದಿಟ್ಟು ಕರ್ನಾಟಕದಲ್ಲಿ ಕ್ರಾಂತಿ ಹುಟ್ಟು ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದರು.
ಜಸ್ಟೀಸ್ ನಾಗಮೋಹನ್‌ದಾಸ್(Justice Nagamohandas) ಎಂಬ ನಿವೃತ್ತ ನ್ಯಾಯ ಮೂರ್ತಿಯ ಅಧ್ಯಕ್ಷತೆಯ ಒಳಮೀಸಲಾತಿ ಏಕಸದಸ್ಯ ಆಯೋಗವು ದಿನಾಂಕ 4/08/2025 ರಂದು ಸರಕಾರಕ್ಕೆ ಸಲ್ಲಿಸಿರುವ ವರದಿಯು ಅವೈಜ್ಞಾನಿಕ, ಅಪೂರ್ಣ, ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿದೆ. ಆದ್ದರಿಂದ ಸದರಿ ವರದಿಯನ್ನು ತಿರಸ್ಕರಿಸಿ ಈಗಾಗಲೇ ಒಳಮೀಸಲಾತಿ ಅನುಷ್ಠಾನ ಕುರಿತು ಹೊರಡಿಸಿರುವ ಎಲ್ಲಾ ಆದೇಶಗಳನ್ನು ಹಿಂಪಡೆಯ ಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ನಾಗಮೋಹನ್‌ದಾಸ್ ಒಳಮೀಸಲಾತಿ ಏಕಸದಸ್ಯ ವಿಚಾರಣಾ ಆಯೋಗವು ಪಜಾತಿ ಕುಟುಂಬಗಳನ್ನು ಸಮೀಕ್ಷೆ ಮಾಡಿ ದಿನಾಂಕ : 4/08/2025 ರಂದು ಸರಕಾರಕ್ಕೆ ವರದಿ ಸಲ್ಲಿಸಿದೆ.ಸದರಿ ವರದಿ ಸಿದ್ಧಪಡಿಸಲು ಮೇ.5 2025ರಿಂದ ಜುಲೈ-6, 2025ರವರೆಗೆ ನಡೆದ ಸಮೀಕ್ಷೆಯಲ್ಲಿ 27.24ಲಕ್ಷ ಕುಟುಂಬಗಳ 1.07ಕೋಟಿ ಜನರನ್ನು ಸಮೀಕ್ಷೆ ಮಾಡಿದ್ದು ಪ್ರಸ್ತುತ 5 ಗುಂಪುಗಳಾಗಿ ವಿಂಗಡಿಸಿ ಅತೀ ಹಿಂದುಳಿದ ಗುಂಪಿಗೆ ಶೇ.1ರಷ್ಟು, ಎಡಗೈ ಗುಂಪಿಗೆ ಶೇ.6ಬಲಗೈ ಗುಂಪಿಗೆ ಶೇ.5ರಷ್ಟು, ಬಂಜಾರ ಬೋವಿ, ಕೊರಮ ಕೊರಚ ಅಸ್ಪೃಶ್ಯ ರಲ್ಲದ ಜಾತಿಗಳಿಗೆ ಶೇ.4ರಷ್ಟು ಜಾತಿಯೇ ಅಲ್ಲದ ಗುಂಪುಗಳಿಗೆ ಅಂದರೆ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಗುಂಪುಗಳಿಗೆ ಶೇ.1ರಷ್ಟು ಮೀಸಲಾತಿ ನಿಗದಿಪಡಿಸಿ ವರದಿ ನೀಡಿರುವುದು ಸರಕಾರದ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ದೂರಿದರು.
ನಾಗಮೋಹನ್‌ದಾಸ್ ಆಯೋಗವು ನೀಡಿರುವ ವರದಿಯು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪೂರ್ಣ ಅಂಕಿಅಂಶಗಳಿಂದ ಕೂಡಿಲ್ಲ. ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿಯನ್ನು ಪರಿಗಣಿಸಿ ಅವೈಜ್ಞಾನಿಕವಾಗಿ ತರ್ಕಬದ್ಧ ಒಳಮೀಸ ಲಾತಿ ಉಪವರ್ಗೀಕರಣ ಮತ್ತು ಪರಿಶಿಷ್ಟ ಜಾತಿಗಳಲ್ಲಿ ಸಮಾನ ಜಾತಿಯ ಹೋಮೋ ಜೀನಿಯಸ್ ಉಪಜಾತಿಗಳ ಗುಂಪುಗಳನ್ನು ಒಟ್ಟುಗೂಡಿಸುವ ಬಗ್ಗೆ ವರದಿ ನೀಡದೇ ಇರುವುದು ಸೇರಿದಂತೆ ಅನೇಕ ನ್ಯೂನ್ಯತೆಗಳಿಂದ ಕೂಡಿರುವುದರಿಂದ ತಿರಸ್ಕರಿಸಬೇಕು ಎಂದರು.
ಜನಸಂಖ್ಯೆಯಲ್ಲಿ ಕೂಡ 2011ರ ಗಣತಿಗಿಂತ ಕಡಿಮೆ ತೋರಿಸಿದೆ. ಕೋಲಾರ, ಚಿತ್ರದುರ್ಗ, ಬೆಂಗಳೂರು ನಗರ ಗ್ರಾಮಾಂತರದಲ್ಲಿ ಬಲಗೈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ದುರುದ್ದೇಶದಿಂದ ಕಡಿಮೆ ತೋರಿಸಲಾಗಿದೆ. ಒಳಮೀಸಲಾತಿ ಜಾರಿಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಸಂಪುಟ ಸಭೆಗೆ ಹೋಗುವ ಮುನ್ನ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಹೊಲೆಯ ಸಮುದಾಯವನ್ನು ಗ್ರೂಪ್ ಎಗೆ ಸೇರಿಸಿದ್ದರು. ಆದರೆ ಸಂಪುಟದಲ್ಲಿ ಮಂಡನೆಯಾಗುವ ವೇಳೆಗೆ ಬಿ ಆಗಿ ಬದಲಾಗಿದ್ದು ಹೇಗೆ? ಈ ಸತ್ಯವನ್ನು ಮುಖ್ಯಮಂತ್ರಿಗಳು ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಎ ಮತ್ತು ಬಿ ಎರಡನ್ನೂ ಸೇರಿಸಿ ಅಸ್ಪೃಷ್ಯ ವರ್ಗವಾಗಿ ಮಾಡಿ, ಟಚಬಲ್‌ನೆಲ್ಲಾ ಸೇರಿಸಿ ಮತ್ತೊಂದು ವರ್ಗ ಮಾಡಿದರೆ ನಮ್ಮದು ಯಾವ ಆಕ್ಷೇಪಣೆಯೂ ಇರುವುದಿಲ್ಲ.ಈಗ ಸಮಸ್ಯೆ ಆಗಿರುವುದು ನಮ್ಮ ಎರಡು ಸಮುದಾಯಗಳ ಪ್ರಶ್ನೆ. ನಮ್ಮ ಎರಡೂ ಸಮುದಾ ಯದ ಮುಖಂಡರೇ ಕುಳಿತು ಬಗೆಹರಿಸಿಕೊಳ್ಳುತ್ತೇವೆ. ಅವರಿಗೆ ಏನು ಸಂಬಂಧ ಎಂದು ಖಾರವಾಗಿ ಮಾತನಾಡಿದ ಸ್ವಾಮೀಜಿ ಆರ್‌ಎಸ್‌ಎಸ್ ಹೆಸರು ಹೇಳದೆಯೇ ವಾದಿರಾಜ್ ಅವರ ಪ್ರವೇಶವನ್ನು ಬಲವಾಗಿ ವಿರೋಧಿಸಿದರು. ಮುಂದುವರೆದು ಅವರು ಆಯೋಗಕ್ಕೆ ಪದೇ ಪದೇ ಅರ್ಜಿ ಕೊಟ್ಟಿದ್ದು ಗೊತ್ತಿದೆ. ಇದರಲ್ಲಿ ನಿಮಗೇನು ಕೆಲಸ. ಇದು 27ಕ್ಕೆ ಇತ್ಯರ್ಥ ಆಗುವುದಿಲ್ಲ. ನಮ್ಮ ಕೈಯಲ್ಲಿ ತಲವಾರುಗಳಿಲ್ಲ, ಬಾಬಾ ಸಾಹೇಬರು ಪೆನ್ನು ಕೊಟ್ಟಿದ್ದಾರೆ ಎಚ್ಚರ ಎಂದು ಹೇಳಿದರು.
ಅಂಬೇಡ್ಕರ್ ನೀಡಿದ ಮೀಸಲಾತಿ ಅಡಿಯಲ್ಲಿ ಮಾದಿಗ ಸಮುದಾಯ ಈವರೆಗೆ 6000 ಮಂದಿ ವಿದೇಶದಲ್ಲಿ ಶಿಕ್ಷಣ ಪಡೆದಿದ್ದಾರೆ. ಹೊಲೆಯ ಸಮುದಾಯದವರು ಕೇವಲ-300 ಮಂದಿ ಮಾತ್ರ ಹೋಗಿದ್ದಾರೆ. ಕೇವಲ ವಿಶ್ವವಿದ್ಯಾಲಯಗಳ ಅಂಕಿ ಆಂಶ ಹಿಡಿದು ಮಾತನಾಡುವವರಿಗೆ ಇದು ಕಾಣಿಸಲಿ ಎಂದರು.
ಅಂಬೇಡ್ಕರ್ ನೀಡಿರುವ ಮೀಸಲಾತಿಯ ಹಗ್ಗ ಬಿಚ್ಚಿ ಒಳಮೀಸಲಾತಿ ನೀಡಿದರೆ ಭವಿಷ್ಯ ದಲ್ಲಿ ಮೀಸಲಾತಿಯೇ ಉಳಿಯುವುದಿಲ್ಲ. ಒಳ ಮೀಸಲು ಜಾರಿ ಸಂವಿಧಾನಕ್ಕೆ ಮಾಡುವ ದ್ರೋಹವಾಗಿದೆ.ಎಬಿಸಿ ಎನ್ನುವುದೇ ಅಸಂಬದ್ಧ.ಈಬಗ್ಗೆ ಎಚ್ಚರವಹಿಸುವುದು ಅಗತ್ಯ ಎಂದರು.
ಸಂಚಾಲಕ ಸಿದ್ದಯ್ಯ ಮಾತನಾಡಿ, ನಾವು ಇಲ್ಲಿ ಸೇರಲು ನಾಗಮೋಹನ್ ದಾಸ್ ವರದಿ ಕಾರಣ.ಸಂಪೂರ್ಣ ದತ್ತಾಂಶ ಕ್ರೂಡೀಕರಣ ಮಾಡಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ. ಸರಕಾರ ಎಲ್ಲಾ ಜಾತಿಗಳಿಗೆ ಖಚಿತವಾಗಿ ಮೀಸಲಾತಿ ದೊರೆಯುವಂತೆ ನೋಡಿ ಕೊಳ್ಳುವುದು ಎಂದು ಹೇಳಿದೆ. ಷರತ್ತು ಹಾಕಿ ಸಮೀಕ್ಷೆ ಮಾಡಲು ತಿಳಿಸಲಾಗಿತ್ತು. ಅಂತರ್ ಹಿಂದುಳಿದಿರುವಿಕೆ ಗಮನಿಸಿ ಮಾಡಬೇಕು ಎಂದು ಹೇಳಿತ್ತು.ಮೂಲ ದತ್ತಾಂಶ ಸಂಗ್ರಹ ಮಾಡಬೇಕು ಎಂದು ಹೇಳಿತ್ತು.ಇದನ್ನು ಮಾಡದ ಕಾರಣ ಈ ವರದಿ ತಿರಸ್ಕಾರ ಯೋಗ್ಯ ಎಂದು ಹೇಳಲು ಇಲ್ಲಿ ಸೇರಿದ್ದೇವೆ ಎಂದರು.
ದಾಸ್ ಆಯೋಗ ಶೇ.40ರಷ್ಟು ಕೂಡ ಸಮೀಕ್ಷೆ ಮುಗಿಸಿರಲಿಲ್ಲ. ತರಾತುರಿಯಲ್ಲಿ ಯಾರನ್ನೋ ಮೆಚ್ಚಿಸಲು ವರದಿ ತಯಾರಿಸಿ ನೀಡಿದೆ. ಬೆಂಗಳೂರು 1.40 ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಬಲಗೈ ಸಮುದಾಯ 10 ಲಕ್ಷ ಇಲ್ಲವೆ.? ಆಯೋಗ 7 ಲಕ್ಷ ಜನಸಂಖ್ಯೆ ಕೈಬಿಡಲಾಗಿದೆ. ಚಿತ್ರದುರ್ಗ, 1.40 ಸಾವಿರದ ಬದಲಿಗೆ 22 ಸಾವಿರ ತೋರಿಸಿದೆ. ಕೋಲಾರ ದಲ್ಲಿ 6 ಲಕ್ಷ 2.20 ಸೀಮಿತ ಮಾಡಿದೆ, ಚಿಕ್ಕಮಗಳೂರು 4 ಲಕ್ಷ ಇದ್ದು 90ಸಾವಿರಕ್ಕೆ ಸೀಮಿತ ಮಾಡಿದೆ. ಈ ಸಂಖ್ಯೆ ಮೂಡಿಗೆರೆಯಲ್ಲಿಯೇ ಇದೆ. ಗುಲ್ಬರ್ಗಾ 2.20, ಹೀಗೆ ಮೂಲ ಸಂಖ್ಯೆಯನ್ನು ಮರೆಮಾಚಿ ಬೇಕೆಂತಲೇ ಕಡಿಮೆ ತೋರಿಸಲಾಗಿದೆ ಎಂದು ದೂರಿದರು.
ನಾಗಮೋಹನ್‌ದಾಸ್ ವರದಿ ನಾವು ಒಪ್ಪಲ್ಲ. ಇದರಲ್ಲಿ ನಂಬಿಕೆ ವಿಶ್ವಾಸ ಇಲ್ಲ. ನ್ಯೂಟ್ರಲ್ ಕಮಿಷನ್ ಮಾಡಿ.ಆ ಡೇಟಾ ಜೊತೆಗೆ ಹೋಲಿಸಿ, ವ್ಯತ್ಯಾಸ ಆದರೆ ಹೊಸ ಸಮೀಕ್ಷೆ ನಡೆಸಿ. ಭಾರತ ಸರ್ಕಾರ ಜನಗಣತಿ ಪೂರ್ಣ ಕೊಳ್ಳುವವರಿಗೆ ಒಳಮೀಸಲಾತಿ ಬಗ್ಗೆ ಚಕಾರ ಎತ್ತಬೇಡಿ. ಆವರೆಗೆ ಅಂಬೇಡ್ಕರ್ ನೀಡಿರುವ 15ರ ಮೀಸಲಾತಿ ಇರಲಿ. ಅಲ್ಲಿಯವರೆಗೆ ಸರಕಾರವು ಯಾವ ಫಾರ್ಮುಲಾ ನೀಡಿದರೂ ನಾವು ಒಪ್ಪಲ್ಲ. ಇಡಿ ಸಮುದಾಯ ಒಂದೇ ವ್ಯಕ್ತಿಯಾಗಿ ಒಗ್ಗಟ್ಟು ತೋರಬೇಕು. ಮಾತನಾಡಬೇಕು.
ಸಮುದಾಯಕ್ಕೆ ಪರಿಪೂರ್ಣ ನ್ಯಾಯ ಒದಗಿಸುವುದೇ ನಮಗೆ ಮುಖ್ಯ. ಒಳಮೀಸಲಾತಿ ಒಪ್ಪಿದ್ದೇ ಆದರೆ ಕ್ಲಾಸ್ 1, ಕ್ಲಾಸ್ 2 ಹುದ್ದೆಗಳು 30 ವರ್ಷ ಬಲಗೈಗೆ ಸೇರುವುದಿಲ್ಲ. ಹೀಗಾಗಿಯೇ ಇದರ ವಿರುದ್ಧ ಹೋರಾಟ ನಡೆಯುತ್ತಿದ್ದು ಇದು ಇನ್ನಷ್ಟು ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ವೇದಿಕೆಯಲ್ಲಿ ಬಸವ ನಾಗಿದೇವ ಸ್ವಾಮೀಜಿ, ಬಂತೇಜಿ, ಎಸ್ಸಿಎಸ್ಟಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ, ಸಂಪತ್‌ರಾಜ್, ಪುರುಷೋತ್ತಮ, ಸಿದ್ದಯ್ಯ, ವಾಣಿ ಶಿವರಾಮ್, ಟಿ.ಆರ್.ಶಿವರಾಮ್, ಫಟಾಫಟ್ ಶ್ರೀನಿವಾಸ್, ರುದ್ರಮುನಿ, ಸೋಮಶೇಖರ್ ಬಣ್ಣದ ಮನೆ, ನಾಗೇಶ್ವರರಾವ್ ಮತ್ತಿತರರು ಇದ್ದರು.