ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಮಕ್ಕಳ‌‌‌ ಕಲಿಕೆಗೆ ಅಂಗನವಾಡಿ ಕೇಂದ್ರಗಳೇ ಬುನಾದಿ

ಸರ್ಕಾರವು ಗ್ರಾಮೀಣ ಭಾಗದಲ್ಲಿನ ಗರ್ಭಿಣಿ ತಾಯಂದಿರು ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಪೌಷ್ಟಿಕಾಹಾರದ ಜೊತೆಗೆ ಮಕ್ಕಳಿಗೆ ಅಗತ್ಯ ವಿರುವ ಕಲಿಕೆಗಾಗಿ ವಿಶೇಷವಾಗಿ ಮೊದಲ ಹಂತದಲ್ಲಿ ತಾಲ್ಲೂಕಿನ 18 ಅಂಗನವಾಡಿ ಕೇಂದ್ರದಲ್ಲಿ ಮಾಂಟೆಸ್ಸರಿ ( ಎಲ್ ಕೆ ಜಿ ಮತ್ತು ಯುಕೆಜಿ) ತರಗತಿಗಳನ್ನು ಆರಂಭಿಸಲಾಗಿದೆ.

ಗೌರಿಬಿದನೂರು: ಬಾಲ್ಯದಲ್ಲಿ ಮಕ್ಕಳ ಕಲಿಕೆ ಮತ್ತು ಆರೋಗ್ಯ ಸಮತೋಲನಕ್ಕೆ ಸ್ಥಳೀಯ ಅಂಗನವಾಡಿ ಕೇಂದ್ರಗಳು ಭದ್ರ ಬುನಾದಿಯಾಗಿವೆ‌ ಎಂದು ಸಿಡಿಪಿಒ ಕೆ.ರವಿ ತಿಳಿಸಿದರು. 

ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಕಲ್ಲುನಾಯಕನಹಳ್ಳಿಯಲ್ಲಿನ ಎರಡು ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದರು. 

ಸರ್ಕಾರವು ಗ್ರಾಮೀಣ ಭಾಗದಲ್ಲಿನ ಗರ್ಭಿಣಿ ತಾಯಂದಿರು ಮತ್ತು ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಪೌಷ್ಟಿಕಾಹಾರದ ಜೊತೆಗೆ ಮಕ್ಕಳಿಗೆ ಅಗತ್ಯವಿರುವ ಕಲಿಕೆಗಾಗಿ ವಿಶೇಷವಾಗಿ ಮೊದಲ ಹಂತದಲ್ಲಿ ತಾಲ್ಲೂಕಿನ 18 ಅಂಗನ ವಾಡಿ ಕೇಂದ್ರದಲ್ಲಿ ಮಾಂಟೆಸ್ಸರಿ ( ಎಲ್ ಕೆ ಜಿ ಮತ್ತು ಯುಕೆಜಿ) ತರಗತಿಗಳನ್ನು ಆರಂಭಿಸಲಾಗಿದೆ. ಹಂತಹಂತವಾಗಿ ಎಲ್ಲ ಕೇಂದ್ರಗಳಲ್ಲಿ ಇಂಗ್ಲಿಷ್ ಕಲಿಕೆಗೆ ಅವಕಾಶವಿದ್ದು ಪೋಷಕರು ಖಾಸಗೀ ಶಾಲೆಗಳ‌ ಮೇಲಿನ ವ್ಯಾಮೋಹವನ್ನು ಬಿಟ್ಟು ತಮ್ಮ ಮಕ್ಕಳನ್ನು ಅಂಗನವಾಡಿ‌ ಕೇಂದ್ರಗಳಿಗೆ ದಾಖಲಿಸಿ ಅಲ್ಲಿನ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕಾಗಿದೆ. 

ಸರ್ಕಾರವು ಹೊಸದಾಗಿ ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿ ತರಗತಿಗಳನ್ನು ಆರಂಭಿಸಿ‌ ಮಕ್ಕಳ‌ ಕಲಿಕೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಟಿ.ವಿ, ಕಲಿಕಾ ಪರಿಕರಗಳು ಮತ್ತು ಆಟಿಕೆಗಳನ್ನು ನೀಡಿದ್ದು ಅದರ ಜೊತೆಗೆ ಉತ್ತಮ‌ ಆರೋಗ್ಯಕ್ಕಾಗಿ ಗುಣಮಟ್ಟದ ಪೌಷ್ಠಿಕಾಂಶಯುಕ್ತ ಆಹಾರ ಮತ್ತು ಶುದ್ಧ ಕುಡಿಯುವ ನೀರಿಗಾಗಿ ಆರ್ ಓ ಯಂತ್ರಗಳನ್ನು ನೀಡಲಾಗುತ್ತಿದೆ. ಸ್ಥಳೀಯ ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅಂಗನವಾಡಿಗಳನ್ನು ಆಯ್ಕೆ ಮಾಡಿಕೊಳ್ಳ ಬೇಕಾಗಿದೆ ಎಂದು ಹೇಳಿದರು. 

ಇದನ್ನೂ ಓದಿ: Gauribidanur News: ಡಿ.ಪಾಳ್ಯ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

 ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿ.ಬಸವರಾಜ್ ಬಳೂಟಗಿ ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿ ನೂತನವಾಗಿ ಮಾಂಟೆಸ್ಸರಿ ತರಗತಿಗಳನ್ನು ಆರಂಭಿಸುತ್ತಿರುವುದು ಸಂತಸದ ವಿಚಾರವಾಗಿದೆ. ಈಗಾಗಲೇ ಕೇಂದ್ರಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ನಮ್ಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಎರಡು ಮಾಂಟೆಸ್ಸರಿ ತರಗತಿಗಳು ಆರಂಭವಾಗುತ್ತಿರುವುದು ನಿಜಕ್ಕೂ ಅದೃಷ್ಟವಾಗಿದೆ. ಇಂತಹ ಸನ್ನಿವೇಶದಲ್ಲಿ ಮಕ್ಕಳು ಕಲಿಯುವುದರಿಂದ ಗುಣಮಟ್ಟದ ಶಿಕ್ಷಣ‌‌ ಪಡೆದು ಆರೋಗ್ಯವನ್ನು ಸದೃಢವಾಗಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. 

ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನರಸಮ್ಮ ಮಾತನಾಡಿ, ಅಂಗನ ವಾಡಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಅಗತ್ಯವಾಗಿರುವ ಮೌಲ್ಯಾಧಾರಿತ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಇದರಿಂದಾಗಿ ಕಲಿಕಾ ಹಂತದಲ್ಲಿ ಮಕ್ಕಳು ಸಾಮಾಜಿಕವಾಗಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸರ್ಕಾರಿ ಶಾಲೆಗಳು ಶಿಕ್ಷಣದ ಜೊತೆಗೆ ಸಂಸ್ಕಾರ ‌ಮತ್ತು ನಾಗರೀಕ ಮೌಲ್ಯಗಳನ್ನು ಕಲಿಸುತ್ತವೆ ಎಂದು‌ ಹೇಳಿದರು. 

 ಎಸಿಡಿಪಿಒ ಮೂಕಾಂಭಿಕಾ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಮೊದಲ ಹಂತದಲ್ಲಿ ‌ತಾಲ್ಲೂಕಿನ 18 ಅಂಗನವಾಡಿ ‌ಕೇಂದ್ರಗಳಲ್ಲಿ ಮಾಂಟೆಸ್ಸರಿ ತರಗತಿಗಳನ್ನು ‌ಆರಂಭಿಸಲಾಗಿದೆ. ಇದಕ್ಕೆ ಬೇಕಾದ ಎಲ್ಲಾ ಕಲಿಕಾ ಸಾಮಗ್ರಿಗಳು ಮತ್ತು ಟಿ ವಿ ಯನ್ನು ಇಲಾಖೆ ಈಗಾಗಲೇ ನೀಡಿದ್ದು ಶೀಘ್ರದಲ್ಲೇ ಶುದ್ಧ ಕುಡಿಯುವ ‌ನೀರಿನ ಯಂತ್ರವನ್ನು ನೀಡಲಿದ್ದಾರೆ ಎಂದು ಹೇಳಿದರು. 

ಈ ವೇಳೆ, ಸ್ಥಳೀಯ ಗ್ರಾ.ಪಂ ಅಧ್ಯಕ್ಷೆ ಸುಮಾ, ಸದಸ್ಯೆ ಲಲಿತಾ, ಇಲಾಖೆಯ ಮೇಲ್ವಿಚಾರಕಿ ಸರೋಜಮ್ಮ, ಗ್ರಾ.ಪಂ ಬಿಲ್ ಕಲೆಕ್ಟರ್ ಮೂರ್ತಿ, ಕಾರ್ಯಕರ್ತೆ ಮಂಜುಳಾ,‌ ಶಾಂತಮ್ಮ, ಆರೋಗ್ಯ ಇಲಾಖೆಯ ಸಹಾಯಕಿ ಕಲ್ಪನಾ, ಸಹಾಯಕಿ ರಾಧಮ್ಮ, ಪುಷ್ಪಮ್ಮ ಸೇರಿದಂತೆ ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿನ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಹಳೆ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು. .