ಚಿಕ್ಕಬಳ್ಳಾಪುರ : H1N1 ಸೋಂಕು ಉಸಿರಾಟದ ಮೂಲಕ ಹರಡುವುದರಿಂದ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚೇತನ್ ತಿಳಿಸಿದ್ದಾರೆ. ಜ್ವರ, ಕೆಮ್ಮು, ಗಂಟಲು ನೋವು, ಮೂಗು ಸೋರುವಿಕೆ, ತಲೆನೋವು, ಮೈ-ಕೈ ನೋವು ಹಾಗೂ ಸುಸ್ತು ಪ್ರಮುಖ ಲಕ್ಷಣಗಳಾಗಿದ್ದು, ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ದೀರ್ಘಕಾಲಿಕ ಕಾಯಿಲೆ ಹೊಂದಿರುವವರು ಹೆಚ್ಚಿನ ಜಾಗ್ರತೆ ವಹಿಸಬೇಕು.
ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಕೆಮ್ಮು-ಸೀನುವಾಗ ಬಾಯಿ ಮುಚ್ಚಿಕೊಳ್ಳುವುದು ಹಾಗೂ ಅನಾರೋಗ್ಯದ ವೇಳೆ ಜನಸಂದಣಿಯಿಂದ ದೂರವಿರುವಂತೆ ಅವರು ಸಲಹೆ ನೀಡಿದ್ದಾರೆ. ತೀವ್ರ ಉಸಿರಾಟದ ತೊಂದರೆ, ಎದೆನೋವು ಸೇರಿದಂತೆ ಗಂಭೀರ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ 104 ಆರೋಗ್ಯ ಸಹಾಯವಾಣಿಗೆ ಕರೆ ಮಾಡಬಹುದು.
ಇದನ್ನೂ ಓದಿ: Health Camp: ಹಳೇ ಉಪ್ಪಾರಹಳ್ಳಿಯಲ್ಲಿ ‘ವತ್ಸಲಾ’ ಪಶು ಆರೋಗ್ಯ ಶಿಬಿರ ಯಶಸ್ವಿ
ಮಡಿವಾಳ ಮಾಚಿದೇವ ನಿಗಮದಿಂದ ಅರ್ಜಿ ಆಹ್ವಾನ
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ 2026-27ನೇ ಸಾಲಿನ ವಿವಿಧ ಯೋಜನೆ ಗಳಡಿ ಸಹಾಯಧನ ಹಾಗೂ ಸಾಲ-ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ, ಅರಿವು-ಶೈಕ್ಷಣಿಕ ಸಾಲ, ಆಧುನಿಕ ಲ್ಯಾಂಡ್ರಿ, ಗಂಗಾ ಕಲ್ಯಾಣ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಸೆ.30ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಬಹುದು.
ಉಪ್ಪಾರ ಅಭಿವೃದ್ಧಿ ನಿಗಮದಿಂದ ಸಾಲ-ಸೌಲಭ್ಯಕ್ಕೆ ಅರ್ಜಿ
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ 2026-27ನೇ ಸಾಲಿನ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಹಾಗೂ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ, ಶೈಕ್ಷಣಿಕ ಸಾಲ, ವಿದೇಶಿ ವ್ಯಾಸಂಗ ಸಾಲ, ಸ್ವಾವಲಂಬಿ ಸಾರಥಿ ಹಾಗೂ ಭಗೀರಥ ಗಂಗಾ ಕಲ್ಯಾಣ ಯೋಜನೆಗಳಿಗೆ ಸೇವಾಸಿಂಧು ಮೂಲಕ ಸೆ.30ರೊಳಗೆ ಅರ್ಜಿ ಸಲ್ಲಿಸಬೇಕು. 2024-25 ಮತ್ತು 2025-26ರಲ್ಲಿ ಅರ್ಜಿ ಸಲ್ಲಿಸಿದ್ದವರಿಗೂ ಬೇರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಬರಪರಿಹಾರ, ಸಾಲಮನ್ನಾಕ್ಕೆ ಕೃಷಿಕ ಸಮಾಜ ಒತ್ತಾಯ
ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ ಬರಪರಿಸ್ಥಿತಿ ಉಂಟಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿ ದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಹಿಂಗಾರು ಬೆಳೆಗೆ ಉಚಿತ ಬಿತ್ತನೆ ಬೀಜ–ಗೊಬ್ಬರ, ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಹಾಗೂ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಒದಗಿಸಬೇಕು ಎಂದು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಒತ್ತಾಯಿಸಿದೆ. ಕ್ಷೇತ್ರದ ಬರ ನಿರ್ವಹಣೆಗೆ ಕನಿಷ್ಠ 10 ಕೋಟಿ ಬಿಡುಗಡೆ, ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ನಿರಂತರ ಗುಣಮಟ್ಟದ ವಿದ್ಯುತ್ ಹಾಗೂ ರೈತರ ಬೆಳೆ ಸಾಲ ಮತ್ತು ಭೂಕಂದಾಯ ಮನ್ನಾ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಸಿ. ಮುನಿರಾಜ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.