ಚಿಕ್ಕಬಳ್ಳಾಪುರ: ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ರಾಮನಾಥರೆಡ್ಡಿ, 13 ವರ್ಷಗಳ ಹಿಂದೆ ನಡೆದ ಮಹದಾಯಿ ಹಾಗೂ ಕಳಸಾ–ಬಂಡೂರಿ ಚಳವಳಿಯಲ್ಲಿ ಭಾಗವಹಿಸಿ ರೈಲು ತಡೆ ನಡೆಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಹಲವು ವರ್ಷಗಳಿಂದ ರಾಜ್ಯಾದ್ಯಂತ ಸಂಚರಿಸಿ ರೈತ ಸಂಘಟನೆ ಕಟ್ಟುವ ಕಾರ್ಯದಲ್ಲಿ ತೊಡಗಿದ್ದರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಂಧನವಾಗಿರಲಿಲ್ಲ. ಇದೀಗ ಪ್ರಕರಣವನ್ನು ಮರುಮೆಲುಕು ಹಾಕಿ ಸಿರಸಿಯಲ್ಲಿ ಬಂಧಿಸಿರುವುದು ದುರುದ್ದೇಶಪೂರ್ವಕವಾಗಿದೆ ಎಂದು ಆರೋಪಿಸಿದರು.
ರೈತ ಮುಖಂಡರನ್ನು ಬಂಧಿಸುವ ಮೂಲಕ ರೈತಸಂಘದ ಹೋರಾಟವನ್ನು ಹತ್ತಿಕ್ಕಲು ಸಾಧ್ಯ ವಿಲ್ಲ. ರೈತರ ಸಮಸ್ಯೆಗಳಿಗಾಗಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಮಾತನಾಡಿ, ಕೋಡಿಹಳ್ಳಿ ಚಂದ್ರಶೇಖರ್ ಅವರು ವೈಯಕ್ತಿಕ ಅಥವಾ ಕುಟುಂಬದ ಹಿತಾಸಕ್ತಿಗಾಗಿ ಹೋರಾಟ ನಡೆಸಿಲ್ಲ. ಅವರ ನೇತೃತ್ವದಲ್ಲಿ ನಡೆದ ರೈತ ಹೋರಾಟಗಳು ರೈತಾಪಿ ವರ್ಗಕ್ಕೆ ಧೈರ್ಯ ತುಂಬಿವೆ. ನೇರವಾಗಿ ಎದುರಿಸಲು ಸಾಧ್ಯವಾಗದೆ ಹಳೆಯ ಪ್ರಕರಣವನ್ನು ಮುನ್ನೆಲೆಗೆ ತಂದು ಬಂಧಿಸಿರುವುದು ಖಂಡನೀಯ ಎಂದು ಆರೋಪಿಸಿ ದರು.
ಸರ್ಕಾರ ಮಧ್ಯಪ್ರವೇಶಿಸಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕೂಡಲೇ ಬಿಡುಗಡೆಗೊಳಿಸ ಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಉಪಾಧ್ಯಕ್ಷ ಮುನಿಆಂಜಿನಪ್ಪ, ಸೀಕಲ್ ರಮಣಾರೆಡ್ಡಿ, ತಾದೂರು ಮಂಜುನಾಥ್, ಸುಬ್ರಮಣಿ, ಸೋಮಶೇಖರ್, ರಮಣಾರೆಡ್ಡಿ, ತಾಳಹಳ್ಳಿ ನಾರಾಯಣಸ್ವಾಮಿ, ಜಾತವಾರ ಮುನಿರಾಜು, ಬೊಮ್ಮನಹಳ್ಳಿ ಅಶ್ವತ್ಥಪ್ಪ, ಗುಟ್ಟಹಳ್ಳಿ ರಾಮಕೃಷ್ಣಪ್ಪ, ಅಲ್ಲಾಬಕಾಶ್, ಆನಂದ್‌ರೆಡ್ಡಿ ಸೇರಿದಂತೆ ಹಲವು ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.