ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

7ನೇ ತರಗತಿ ಮಕ್ಕಳ ಕಲಿಕಾ ಮಟ್ಟ ಪರಿಶೀಲನೆ: 180 ಶಿಕ್ಷಕರಿಗೆ ನೋಟಿಸ್: ಪ್ರಾಥಮಿಕ ಶಿಕ್ಷಣದ ಗುಣಮಟ್ಟಕ್ಕೆ ಒತ್ತು ನೀಡಿದ ಶಾಸಕ ಪ್ರದೀಪ್ ಈಶ್ವರ್

ಶಾಸಕರು ನಮ್ಮೂರಿಗೆ ನಮ್ಮ ಶಾಸಕ ಎಂಬ ಕಾರ್ಯಕ್ರಮದ ಮುಖೇನ ಕ್ಷೇತ್ರ ಸಂಚಾರದ ವೇಳೆ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ, ಕೆಲವು 7ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡದ ಮೂಲ ಅಕ್ಷರಮಾಲೆ ಬರೆಯಲು ಹಾಗೂ ಸರಳ ಸಂಕಲನ–ವ್ಯವಕಲನದಂತಹ ಮೂಲ ಗಣಿತದ ಲೆಕ್ಕಗಳನ್ನು ಬಿಡಿಸಲು ಕಷ್ಟವಾಗುತ್ತಿರುವುದು ಗಮನಕ್ಕೆ ಬಂದಿತ್ತು

ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಬುನಾದಿ ಶಿಕ್ಷಣ ಬಲಪಡಿಸುವ ಉದ್ದೇಶದಿಂದ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರು ಕೈಗೊಂಡಿರುವ ಕ್ರಮ ಇದೀಗ ಶಿಕ್ಷಣ ಇಲಾಖೆಯ ಗಮನ ಸೆಳೆದಿದೆ.

ಕ್ಷೇತ್ರದ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳ 7ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಪರಿಶೀಲಿಸಿದ ಬಳಿಕ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಬೋಧನೆ ಮಾಡಿರುವ ಶಿಕ್ಷಕರಿಂದ ವಿವರಣೆ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ನೋಟಿಸ್ ಜಾರಿಗೊಳಿಸ ಲಾಗಿದೆ.

ಶಾಸಕರು ʼನಮ್ಮೂರಿಗೆ ನಮ್ಮ ಶಾಸಕʼ ಎಂಬ ಕಾರ್ಯಕ್ರಮದ ಮುಖೇನ ಕ್ಷೇತ್ರ ಸಂಚಾರದ ವೇಳೆ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ, ಕೆಲವು 7ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡದ ಮೂಲ ಅಕ್ಷರಮಾಲೆ ಬರೆಯಲು ಹಾಗೂ ಸರಳ ಸಂಕಲನ–ವ್ಯವಕಲನದಂತಹ ಮೂಲ ಗಣಿತದ ಲೆಕ್ಕಗಳನ್ನು ಬಿಡಿಸಲು ಕಷ್ಟವಾಗುತ್ತಿರುವುದು ಗಮನಕ್ಕೆ ಬಂದಿತ್ತು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಅವರು, ಮಕ್ಕಳ ಕಲಿಕಾ ಕೊರತೆಗೆ ಕಾರಣಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: MLA Pradeep Eshwar: ಗ್ರಾಮಗಳ ಅಭಿವೃದ್ಧಿಗೆ ಹಂತ ಹಂತವಾಗಿ ಆದ್ಯತೆ: ಶಾಸಕ ಪ್ರದೀಪ್ ಈಶ್ವರ್

ಶಾಸಕರ ಸೆ.4ರ ಪತ್ರವನ್ನು ಆಧರಿಸಿ ಚಿಕ್ಕಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸೆ.15ರಂದು ನೋಟಿಸ್ ಜಾರಿಗೊಳಿಸಲಾಗಿದೆ. 2026–27ನೇ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾ ನಿತ ಪ್ರಾಥಮಿಕ ಶಾಲೆಗಳ ೭ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಶಿಕ್ಷಣ ಸಂಯೋಜಕರು, ಬಿಆರ್‌ಪಿ ಹಾಗೂ ಸಿಆರ್‌ಪಿಗಳ ಮೂಲಕ ಪರಿಶೀಲಿಸಲಾಗಿದ್ದು, ನಿರೀಕ್ಷಿತ ಮಟ್ಟಕ್ಕಿಂತ ಹಿಂದುಳಿದಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಈ ವಿದ್ಯಾರ್ಥಿಗಳಿಗೆ 1 ರಿಂದ 7ನೇ ತರಗತಿವರೆಗೆ ಬೋಧನೆ ಮಾಡಿರುವ ಶಿಕ್ಷಕರಿಂದ ಕಲಿಕಾ ಪ್ರಗತಿ ನಿರೀಕ್ಷಿತ ಮಟ್ಟ ತಲುಪದಿರುವುದಕ್ಕೆ ಕಾರಣ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಸಮಜಾ ಯಿಷಿ ಪಡೆಯಲಾಗುತ್ತಿದೆ. ಉತ್ತರವನ್ನು ಪರಿಶೀಲಿಸಿದ ಬಳಿಕ ನಿಯಮಾನುಸಾರ ಮುಂದಿನ ಕ್ರಮದ ಕುರಿತು ನಿರ್ಧರಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಗುರುತಿಸಿ, ಅಗತ್ಯವಿರುವ ಮಕ್ಕಳಿಗೆ ಹೆಚ್ಚುವರಿ ಬೋಧನೆ, ವೈಯಕ್ತಿಕ ಗಮನ ಹಾಗೂ ನಿರಂತರ ಅಭ್ಯಾಸಕ್ಕೆ ಅವಕಾಶ ಕಲ್ಪಿಸುವುದು ಮುಖ್ಯವಾಗಿದೆ. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಹಾಜರಾತಿ, ಕಲಿಕಾ ಮಟ್ಟ ಮತ್ತು ಬೋಧನಾ ಪ್ರಕ್ರಿಯೆ ಪರಿಶೀಲಿಸಿ, ಹಿಂದುಳಿದಿರುವ ಮಕ್ಕಳ ಕಲಿಕಾ ಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮಕ್ಕಳ ಭವಿಷ್ಯವೇ ಮುಖ್ಯ

ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆಯಬೇಕು ಎಂಬುದು ತಮ್ಮ ಕ್ರಮದ ಉದ್ದೇಶ ಎಂದು ಶಾಸಕ ಪ್ರದೀಪ್ ಈಶ್ವರ್ ಪತ್ರಿಕೆ ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

7ನೇ ತರಗತಿಯ ಮಕ್ಕಳಿಗೂ ಮೂಲ ಅಕ್ಷರಜ್ಞಾನ ಮತ್ತು ಸರಳ ಗಣಿತದ ಅರಿವು ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಇದನ್ನು ಸರಿಪಡಿಸುವುದು ಅಗತ್ಯ. ಈ ನಿರ್ಧಾರ ಮುಂದಿನ ಪೀಳಿಗೆಯ ಮಕ್ಕಳ ಹಿತದೃಷ್ಟಿಯಿಂದ ಕೈಗೊಂಡ ಕ್ರಮ” ಎಂದು ತಿಳಿಸಿದ್ದಾರೆ.

ಶಿಕ್ಷಕರ ಕಾರ್ಯಕ್ಷಮತೆ ಪ್ರಶ್ನಿಸುವುದಕ್ಕಿಂತಲೂ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯ ಶೈಕ್ಷಣಿಕ ಬೆಂಬಲ ಒದಗಿಸುವುದು ಈ ಪ್ರಕ್ರಿಯೆಯ ಪ್ರಮುಖ ಉದ್ದೇಶ ವಾಗಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಮಕ್ಕಳ ಕಲಿಕಾ ಮಟ್ಟವನ್ನು ಸುಧಾರಿಸಲು ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವೂ ಇದೆ.

image

ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಖಾಸಗಿ, ಅನುದಾನಿತ ಹಾಗೂ ಸರಕಾರಿ ಶಾಲೆಗಳಲ್ಲಿ ಸಾಮಾನ್ಯ ವಾಗಿ ಇರುತ್ತಾರೆ. ಈ ನೋಟೀಸ್ ಕೊಟ್ಟ ನಂತರ ಕೆಲ ಶಾಲೆಯ ಶಿಕ್ಷಕರು ಮಕ್ಕಳಿಗೆ ವರ್ಣಮಾಲೆ ಕಲಿಸಲು ಮುಂದಾಗಿರುವ ಮಾಹಿತಿ ಇದೆ. ಈ ನೋಟೀಸಿನ ಹಿಂದೆ ಯಾರನ್ನೂ ಟಾರ್ಗೆಟ್ ಮಾಡುವ ಉದ್ದೇಶವಿಲ್ಲ. ಸರಕಾರಿ ಶಾಲೆಯಲ್ಲಿ ಓದುವ ಬಡಮಕ್ಕಳಿಗೆ ಭವ್ಯ ಭವಿಷ್ಯವನ್ನು ಕಟ್ಟಿಕೊಡುವ ದೃಷ್ಟಿಯಿಂದ ಇಲಾಖೆಯ ಗಮನಕ್ಕೆ ಶಾಸಕರು  ಈ ವಿಚಾರ ತಂದಿದ್ದಾರೆ.ಪ್ರಾಥಮಿಕ ಹಂತದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕೆಂಬ ಅಭಿಲಾಷೆ ಇದರ ಹಿಂದಿದೆ ಎಂದು ನಾನು ಭಾವಿಸುತ್ತೇನೆ.ಹೀಗಾಗಿ ಶಾಸಕರ ಸೂಚನೆಯಂತೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪಾಠ ಬೋಧನೆ ಮಾಡಿರುವ ಶಿಕ್ಷಕರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ.

-ಸುಕನ್ಯ.ಡಿ.ಎನ್. ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿಕ್ಕಬಳ್ಳಾಪುರ.
image

ನನ್ನ ಚಿಕ್ಕಬಳ್ಳಾಪುರ ಕ್ಷೇತ್ರದ ಸರ್ಕಾರಿ ಶಾಲೆಗಳ ೭ನೇ ತರಗತಿಯ ಮಕ್ಕಳು ಸರಳ ಕನ್ನಡ ವರ್ಣ ಮಾಲೆ, ಅಕ್ಷರಮಾಲೆ ಬರೆಯಲು ಮತ್ತು ಮೂಲ ಸಂಕಲನ ಮತ್ತು ವ್ಯವಕಲನವನ್ನು ಬಿಡಿಸಲು ಸಾಧ್ಯವಾಗುತ್ತಿಲ್ಲ ಎಂದು ನಾನು ದಿನನಿತ್ಯದ ಪರಿಶೀಲನೆಯ ಸಮಯದಲ್ಲಿ ಗಮನಿಸಿದೆ. ಇದು ನನಗೆ ಆಘಾತವನ್ನುಂಟು ಮಾಡಿತು ಮತ್ತು ನಾನು ಆಶ್ಚರ್ಯಚಕಿತನಾದೆ.ನಾನು ತಕ್ಷಣ ಕ್ರಮ ಕೈಗೊಂಡು ನನ್ನ ಕ್ಷೇತ್ರದ ೧೮೦ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿದ್ದೇನೆ. ಇದು ಸಮಾಜದ ಕೆಲವು ವರ್ಗಗಳಿಂದ ಹೆಚ್ಚು ಪ್ರೋತ್ಸಾಹಿಸಲ್ಪಟ್ಟ ಹೆಜ್ಜೆಯಾಗಿಲ್ಲದಿರಬಹುದು ಎಂದು ನನಗೆ ಅರ್ಥ ವಾಗಿದೆ, ಆದರೆ ಇದು ಖಂಡಿತವಾಗಿಯೂ ಅಗತ್ಯವಾದ ಹೆಜ್ಜೆಯಾಗಿದೆ!ನನ್ನ ಈ ನಿರ್ಧಾರ ನಮ್ಮ ಮುಂದಿನ ಪೀಳಿಗೆಗಾಗಿ, ಮುಂದಿನ ಚುನಾವಣೆಗಾಗಿ ಅಲ್ಲ!

- ಪ್ರದೀಪ್ ಈಶ್ವರ್ ಅಯ್ಯರ್. ಶಾಸಕರು ಚಿಕ್ಕಬಳ್ಳಾಪುರ.
image

ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಇದ್ದೇ ಇರುತ್ತಾರೆ. ನಮ್ಮ ರಾಜ್ಯದವರಲ್ಲದ ಮಕ್ಕಳೂ ಇರುತ್ತಾರೆ. ಬೇರೆ ಶಾಲೆಯ ಮಕ್ಕಳು ಇರುತ್ತಾರೆ. ಶಿಕ್ಷಕರು ಪಾಠಬೋಧನೆ ಮಾತ್ರವಲ್ಲದೆ ಸರಕಾರ ಕಾಲಕಾಲಕ್ಕೆ ವಹಿಸುವ ಸೆನ್ಸಸ್, ಎಸ್‌ಐಆರ್ ಸೇರಿ ಇನ್ನಿತರೆ ಕೆಲಸವನ್ನು ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ  ಕೂಡ ಶಿಕ್ಷಕರನ್ನು ಒಳಗೆ ಬಿಡದಂತೆ ಸಿಆರ್‌ಪಿ ಬಿಆರ್‌ಪಿಗಳು ಶಾಲೆಗಳಿಗೆ ಬಂದು ಮಕ್ಕಳಿಗೆ ಪರೀಕ್ಷೆ ಮಾಡಿ ಅದರ ಆಧಾರದಲ್ಲಿ ಶಿಕ್ಷಕರಿಗೆ ನೋಟೀಸ್ ನೀಡಲಾಗಿದೆ. ಇದರಿಂದಾಗಿ ನಮ್ಮ ಶಿಕ್ಷಕರು ಸಾಕಷ್ಟು ಗೊಂದಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಸಿಎಸ್‌ಆರ್ ನಿಯಮಗಳಂತೆ ನೋಟೀಸ್‌ಗೆ ಸಮಜಾಯಿಷಿ ಕೊಡುತ್ತೇವೆ.ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಈಗಾಗಲೇ ಪರಿಹಾರ ಬೋಧನೆ ಮಾಡುತ್ತಿದ್ದೇವೆ.ಮುಂದೆಯೂ ಕೂಡ ಮಕ್ಕಳಿಗೆ ವರ್ಣಮಾಲೆ, ಸರಳ ಗಣಿತ ಸಹಿತ ಏನೇನು ಕಲಿಸಲು ಇಲಾಖೆ ತಿಳಿಸಿದೆಯೋ ಅದನ್ನೆಲ್ಲಾ ಕಲಿಸುತ್ತೇವೆ.ವಿಪರ್ಯಾಸವೆಂದರೆ ರಾಜ್ಯ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ, ಪಡೆದ ಉತ್ತಮ ಶಿಕ್ಷಕರಿಗೆ ನೋಟೀಸ್ ನೀಡಿರುವುದು ಬೇಸರ ತರಿಸಿದೆ.

-ಅಪ್ಸರಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ. ಚಿಕ್ಕಬಳ್ಳಾಪುರ