ಚಿಕ್ಕಬಳ್ಳಾಪುರ: ಅಪರಾಧ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಸೈಬರ್ ವಂಚನೆಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸುವುದು, ಅಪರಿಚಿತರ ಬಗ್ಗೆ ಜಾಗರೂಕರಾಗಿರುವುದು, ಕಾನೂನು ಅರಿವನ್ನು ಹೊಂದುವುದರಿಂದ ಹಲವು ಅಪರಾಧಗಳನ್ನು ತಡೆಯಬಹುದಾಗಿದೆ. ಬಹು ಮುಖ್ಯವಾಗಿ ಯುವಕರು ದುಶ್ಚಟಗಳಿಂದ ದೂರ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್‌ಚೌಕ್ಸೆ ಹೇಳಿದರು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಹಳ್ಳಿ ಮಕ್ಕಳ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಅಪರಾಧ ತಡೆ ಹಾಗೂ ಜನಜಾಗೃತಿ ಅಭಿಯಾನ-2026 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇದನ್ನೂ ಓದಿ: Chikkaballapur accident: ಚಿಕ್ಕಬಳ್ಳಾಪುರದಲ್ಲಿ ಭೀಕರ ಸರಣಿ ಅಪಘಾತ; ಲಾರಿಗೆ ಆಟೋ ಡಿಕ್ಕಿಯಾಗಿ 6 ಮಂದಿ ದುರ್ಮರಣ
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾವಳಿ ಹೆಚ್ಚಾಗಿದ್ದು ಇದರಿಂದ ಸಾಕಷ್ಟು ಅಪರಿಚಿತರು ಕಳುಹಿಸುವ ಅನುಮಾನಾಸ್ಪದ ಲಿಂಕ್‌ಗಳಿಂದ ನಿಮ್ಮ ಬ್ಯಾಂಕುಗಳಲ್ಲಿನ ಹಣ ಖಾಲಿ ಯಾಗಲಿದೆ. ಈ ಬಗ್ಗೆ ಎಚ್ಚರ ವಹಿಸುವುದು ಅತಿ ಸೂಕ್ತ ಎಂದ ಅವರು ಕಾನೂನು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯ ಎಂದರು.
ಸಂಚಾರಿ ನಿಯಮಗಳನ್ನು ಪಾಲಿಸುವುದರ ಜೊತೆಗೆ ಅಪರಿಚಿತರ ಬಗ್ಗೆ ತೀವ್ರ ನಿಗಾ ಇರಿಸಿಕೊಂಡು ಅನುಮಾನ ವ್ಯಕ್ತಿಗಳ ಬಗ್ಗೆ ಹತ್ತಿರದ ಪೊಲೀಸರಿಗೆ ಸುಳಿವು ನೀಡಬೇಕು ಈ ಮೂಲಕ ಅಪರಾಧಗಳನ್ನು ತಡೆಯಬಹುದಾಗಿದೆ ಎಂದರು.
ಪೊಲೀಸರೊಂದಿಗೆ ಸಾರ್ವಜನಿಕರಾದ ತಾವು ಹೆಚ್ಚಿನ ಸಹಕಾರ ನೀಡಿದಾಗ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಬಹುದಾಗಿದೆ. ಕರ್ನಾಟಕ ರಾಜ್ಯ ಹಳ್ಳಿ ಮಕ್ಕಳ ಸಂಘ ಏರ್ಪಡಿಸುವಂತಹ ಇಂತಹ ಕಾರ್ಯಕ್ರಮಗಳಲ್ಲಿ ಜನರು ಜಾಗೃತಿ ಮೂಡಿಸಿಕೊಂಡು ಅಪರಾಧ ತಡೆಯಲು ಇತರರಲ್ಲೂ ಜಾಗೃತಿ ಮೂಡಿಸಬೇಕು ಎಂದರು.
ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬಹು ದಾಗಿದೆ ಎಂದೂ ಹೇಳಿದರು.
ಕರ್ನಾಟಕ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪೋಷಕರು ಅವರೊಂದಿಗೆ ಮುಕ್ತವಾಗಿ ಮಾತನಾಡಿ ವಿದ್ಯಾಭಾಸ ಕಲಿಯುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಬೇಡಿ. ಪೋಷಕರು ಹೆಚ್ಚು ಜಾಗರೂಕರಾಗಿ ಮಕ್ಕಳ ಚಲನವಲನಗಳನ್ನು ಗಮನಿಸುತ್ತಿರಬೇಕು. ಬಹು ಮುಖ್ಯವಾಗಿ ಇಂದಿನ ಸಮಾಜದಲ್ಲಿ ಬಾಲ್ಯ ವಿವಾಹಗಳಂತಹ ಅನಿಷ್ಠ ಪದ್ದತಿ ಗಳನ್ನು ದೂರಮಾಡುವುದು ನಾಗರೀಕರ ಜವಾಬ್ದಾರಿ. ಸಾಮಾಜಿಕ ಕಳಕಳಿಯುಳ್ಳ ಇಂತಹ ಸಂಘ ಸಂಸ್ಥೆಗಳ ಮೂಲಕ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಇವುಗಳನ್ನು ತಡೆಯಲು ಸಾಧ್ಯವಾಗಲಿದೆ ಎಂದರು.
ಹರಿಕೃಷ್ಣ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹರೀಶ್.ಕೆ.ರೆಡ್ಡಿ ಮಾತನಾಡಿ, ಸಾರ್ವಜನಿಕರು ಕಾನೂನುಗಳ ಬಗ್ಗೆ ಮೂಲಭೂತ ಜ್ಞಾನವನ್ನು ಹೊಂದಿರುವುದು ಅಪರಾಧಗಳನ್ನು ತಡೆಯಲು ಮತ್ತು ಸ್ವಯಂ ರಕ್ಷಣೆಗೆ ಸಹಕಾರಿಯಾಗಲಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ಅಪರಾಧಗಳು ನಡೆದಾಗ ತಕ್ಷಣ ಸಹಾಯ ಪಡೆಯಲು 112 ಸಹಾಯವಾಣಿಗೆ ಕರೆ ಮಾಡಿ. ಸೈಬರ್ ವಂಚನೆಗಳಿಗೆ ಒಳಗಾಗದಂತೆ ಎಚ್ಚರಿಕೆ ವಹಿಸುವುದು ನಮ್ಮ ಆಧ್ಯ ಕರ್ತವ್ಯ ಎಂದರು.
ಇದೇ ಸಂದರ್ಭದಲ್ಲಿ ಮೌಲಾನ ಆಜಾದ್ ಮಾದರಿ ಶಾಲೆಯ ಮಕ್ಕಳಿಗೆ ಕರ್ನಾಟಕ ರಾಜ್ಯ ಹಳ್ಳಿ ಮಕ್ಕಳ ಸಂಘದ ಉಪಾಧ್ಯಕ್ಷ ವೆಂಕಟರಮಣಪ್ಪ ಶಿಕ್ಷಣ ಪರಿಕರಗಳನ್ನು ಉಚಿತವಾಗಿ 200 ಮಂದಿಗೆ ವಿತರಣೆ ಮಾಡಿದರು.
ಕರ್ನಾಟಕ ರಾಜ್ಯ ಹಳ್ಳಿ ಮಕ್ಕಳ ಸಂಘದ ವತಿಯಿಂದ ಇದೇ ವೇಳೆ ವಿವಿಧ ಸಾಧಕರನ್ನು ರಾಜ್ಯ ಉಪಾಧ್ಯಕ್ಷ ವೆಂಕಟರಮಣಪ್ಪ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನಾ ಸಂಚಾಲಕ ಸುಧಾವೆಂಕಟೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಮ್ಮದ್ ಉಸ್ಮಾನ್, ಕರ್ನಾಟಕ ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ಬಿ.ಎನ್ ಮುನಿಕೃಷ್ಣಪ್ಪ, ಜಿಲ್ಲಾ ಗೌರವಾಧ್ಯಕ್ಷ ಚಿಕ್ಕಲಕ್ಷ್ಮಪ್ಪ, ತಾಲೂಕು ಗೌರವಾಧ್ಯಕ್ಷ ಜಿ.ಎಂ. ವೆಂಕಟೇಶ್ ಸೇರಿದಂತೆ ಇತರರು ಇದ್ದರು.