ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ನಾದ ಗುರುಕುಲಂನ ಆಶ್ರಯದಲ್ಲಿ ಜು.13ರಿಂದ 15ರವರೆಗೆ ‘ಭಾರತ ಸಂಗೀತ ಸಮ್ಮೇಳನ–2026 (ಕಲಾಸ್ರೋತಃ)’ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.
ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ಕಲಾ ಪರಂಪರೆಯ ಸಂರಕ್ಷಣೆ, ಗುರು-ಶಿಷ್ಯ ಪರಂಪರೆಯ ಮಹತ್ವ ಸಾರುವುದು ಹಾಗೂ ಯುವ ಪೀಳಿಗೆಗೆ ಭಾರತೀಯ ಸಾಂಸ್ಕೃತಿಕ ಪರಂಪರೆ ಯ ಮೌಲ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಮೂರು ದಿನಗಳ ಈ ಸಮ್ಮೇಳನ ನಡೆಯಲಿದೆ.
ಜು.13ರಂದು ನೃತ್ಯ ವಿದೂಷಿ ಡಾ. ಪದ್ಮಾ ಸುಬ್ರಹ್ಮಣ್ಯಂ ಸಮ್ಮೇಳನ ಉದ್ಘಾಟಿಸಲಿದ್ದು, ಸದ್ಗುರು ಶ್ರೀ ಮಧುಸೂದನ ಸಾಯಿ ಆಶೀರ್ವಚನ ನೀಡಲಿದ್ದಾರೆ.
ಇದನ್ನೂ ಓದಿ: Chikkaballapur News: ದೇಶದ ಮೊದಲ ಅಂತಾರಾಷ್ಟ್ರೀಯ ಎಂಡೋಸ್ಕೋಪಿಕ್–ರೋಬೋಟಿಕ್ ಶಸ್ತ್ರಚಿಕಿತ್ಸಾ ಸಮ್ಮೇಳನಕ್ಕೆ ಚಾಲನೆ
ಸಮ್ಮೇಳನದಲ್ಲಿ ಕರ್ನಾಟಕ ಸಂಗೀತದಲ್ಲಿನ ರಾಗ ಮತ್ತು ಭಾವ, ಭಾರತೀಯ ಪ್ರದರ್ಶನ ಕಲೆಗಳ ಸಂರಕ್ಷಣೆ, ಘರಾನಾ ಸಂಪ್ರದಾಯ, ತಾಳದ ಸೂಕ್ಷ್ಮತೆ, ಮನೋಧರ್ಮ ಸಂಗೀತ, ಕುಚಿಪುಡಿ ನೃತ್ಯದ ಪರಂಪರೆ, ಸಾರಂಗಿ ಸಂಗೀತ, ಸಿತಾರ್ ಮೂಲಕ ರಾಗದ ಅಭಿವ್ಯಕ್ತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಖ್ಯಾತ ವಿದ್ವಾಂಸರಿಂದ ಉಪನ್ಯಾಸಗಳು ಹಾಗೂ ವಿಚಾರಗೋಷ್ಠಿಗಳು ನಡೆಯಲಿವೆ.
ಪ್ರತಿದಿನ ಸಂಜೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮೊದಲ ದಿನ ಎನ್. ವಿಜಯ್ ಶಿವಾ ಮತ್ತು ತಂಡದಿಂದ ಕರ್ನಾಟಕ ಗಾಯನ, ಎರಡನೇ ದಿನ ಪಾತ್ರಿ ಸತೀಶ್ ಕುಮಾರ್ ಮತ್ತು ತಂಡದಿಂದ ತಾಳವಾದ್ಯ ಕಚೇರಿ ಹಾಗೂ ಸಮಾರೋಪದಿನ ಡಾ. ಎನ್. ರಾಜಂ ಮತ್ತು ನಂದಿನಿ ಶಂಕರ್ ಅವರಿಂದ ಹಿಂದೂಸ್ತಾನಿ ವಯಲಿನ್ ಸಂಗೀತ ಕಚೇರಿ ನಡೆಯಲಿದೆ.
ಜು.15ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಂಗೀತ ವಿದ್ವಾಂಸರಾದ ಡಾ. ಎನ್.ರಾಜಂ ಹಾಗೂ ಪಂಡಿತ್ ಉಲ್ಲಾಸ್ ಕಶಾಲ್ಕರ್ ಅವರಿಗೆ ‘ಶ್ರೀ ಸತ್ಯಸಾಯಿ ಸಂಗೀತ ಶಿರೋ ಮಣಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.