ಬಾಗೇಪಲ್ಲಿ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ(Congress MLA S.N. Subbareddy) ಅವರಿಗೆ ಸುಪ್ರೀಂ ಕೋರ್ಟ್ನಿಂದ(Supreme Court) 'ಬಿಗ್ ರಿಲೀಫ್' ಸಿಕ್ಕಿದ್ದು ಬಾಗೇಪಲ್ಲಿಯಲ್ಲಿ ಕೈ ಕಾರ್ಯಕರ್ತರ ವಿಜಯೋತ್ಸವ ಮುಗಿಲು ಮುಟ್ಟಿತ್ತು.
ಸುಪ್ರೀಂ ಕೋರ್ಟ್ ತಡೆ ನೀಡುತ್ತಿದ್ದಂತೆ ಬಾಗೇಪಲ್ಲಿಯ ಕಾಂಗ್ರೆಸ್ ಪಾಳಯದಲ್ಲಿ ಸಂತಸ ಮೇರೆ ಮೀರಿತು. ಈ ಸಿಹಿ ಸುದ್ದಿ ಹೊರಬೀಳುತ್ತಿದ್ದಂತೆ ತಾಲೂಕು ಕಚೇರಿ ಹಾಗೂ ಎಸ್. ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ಮುಂಭಾಗದ ಮುಖ್ಯರಸ್ತೆಯಲ್ಲಿ ಜಮಾಯಿಸಿದ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಹಿ ಹಂಚಿ, ಪಟಾಕಿ ಸಿಡಿಸಿ, ಅದ್ದೂರಿ ವಿಜಯೋತ್ಸವ ಆಚರಿಸಿದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ಬೂರಗಮಡಗು ಲಕ್ಷ್ಮಿನರಸಿಂಹಪ್ಪ ಮಾತನಾಡಿ ಕೆಲವು ದಿನಗಳ ಹಿಂದೆ ಪರಾಜಿತ ವಿರೋಧ ಪಕ್ಷದ ನಾಯಕರು ರಾಜಕೀಯ ದುರುದ್ದೇಶ ದಿಂದ ಇಲ್ಲಸಲ್ಲದ ಆರೋಪಗಳನ್ನು ಒಡ್ಡಿ ಶಾಸಕರ ಸ್ಥಾನವನ್ನು ಅಸಿಂಧುಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಬೆಳವಣಿಗೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ನೋವಾಗಿತ್ತು. ಆದರೆ, ಇದೀಗ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಸತ್ಯಕ್ಕೆ ಎಂದೆಂದಿಗೂ ಜಯವಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ದೇವರ ಸಂಪೂರ್ಣ ಕೃಪಾದೃಷ್ಟಿ ಶಾಸಕ ಸುಬ್ಬಾರೆಡ್ಡಿ ಅವರ ಮೇಲಿದ್ದು, ಮುಂಬರುವ ದಿನಗಳಲ್ಲಿ ಅವರು ಸಚಿವರಾಗಿ, ಜನತೆಯ ಆಶೀರ್ವಾದದೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿಸುತ್ತಾರೆ ಎಂದು ಹೇಳಿದರು.
ಈ ಅದ್ಧೂರಿ ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ವಿ. ವೆಂಕಟರವಣ, ಎ.ನಾರಾಯಣಸ್ವಾಮಿ, ಅಶ್ವತ್ತಪ್ಪ, ಜಬೀವುಲ್ಲಾ, ಆಂಜನೇಯರೆಡ್ಡಿ, ಕಾನೂನು ಘಟಕ ತಾಲೂಕು ಅಧ್ಯಕ್ಷ ರಮಣ, ವಕೀಲರು ಶ್ರೀನಿವಾಸ್, ಡಿ.ಕೋತ್ತಪಲ್ಲಿ ರಾಜು, ಎನ್. ನರೇಂದ್ರ, ನಾರೆಮದ್ದೇಪಲ್ಲಿ ಎನ್. ಎಚ್. ಮೌಲಾಲಿ, ನಿಜಾಮುದ್ದಿನ್ (ಬಾಬು), ಹೇಮಚಂದ್ರ ಸೇರಿ ದಂತೆ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.