ಚಿಕ್ಕಬಳ್ಳಾಪುರ: ದೇಶದ 5 ರಾಜ್ಯಗಳಿಗೆ ನಡೆದ ಚುನಾವಣೆಯ ಫಲಿತಾಂಶದಲ್ಲಿ 3 ರಾಜ್ಯಗಳಲ್ಲಿ ಸಂಪೂರ್ಣ ಬಹುಮತ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿ ಗೆಲುವನ್ನು ಹಾಡಿ ಹೊಗಳಿದರು.
ನಗರದ ವಾಪಸಂದ್ರದ ಜಿಲ್ಲಾ ಕಛೇರಿಯ ಎದುರು ಸೋಮವಾರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಸಂಭ್ರಮಾಚರಣೆಗೂ ಮೊದಲು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ ಭಾರತೀಯ ಜನತಾ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಪಡೆದಿರುವ ಗೆಲುವು ಕೇವಲ ಒಂದು ರಾಜ್ಯದ ಗೆಲುವಲ್ಲ ಬದಲಿಗೆ ದೇಶದ ಗೆಲುವಾಗಿದೆ ಎಂದು ಸೀಕಲ್ ರಾಮಚಂದ್ರಗೌಡ ಈ ವೇಳೆ ಅಭಿಪ್ರಾಯಪಟ್ಟರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಶಾಶ್ವತವಾದ ನೆಲೆ ಕಲ್ಪಿಸುವ ಮೂಲಕ ದೇಶದ ಸುಭದ್ರತೆಗೆ ಗೆಲುವಿನ ಶ್ರೀಕಾರ ಹಾಡಿದ ಸೂತ್ರದಾರರಾದ ಪ್ರಧಾನಿ ಮೋದಿಜಿ, ಅಮಿತ್‌ಶಾಜಿ ಹಾಗೂ ಬಿಜೆಪಿ ರಾಷ್ಟ್ರೀಯ ನಿತಿನ್ ನಬಿನ್ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ದುರಾಡಳಿತವನ್ನು ಕೊನೆಗಾಣಿಸಿ ಬಿಜೆಪಿ ಸಾಧಿಸಿರುವ ಈ ಅಧ್ಬುತ ಯಶಸ್ಸು ಸಾಮಾನ್ಯವಾದ ರಾಜಕೀಯ ಗೆಲುವಲ್ಲ.ನಿರೀಕ್ಷೆ ಮೀರಿದ ಗೆಲುವು ಇದಾಗಿದೆ. ಕಾಶ್ಮೀರದಲ್ಲಿ 371 ವಿಧಿ ಕೊನೆಗಾಣಿಸಿ ಭಾರತದ ಗಡಿಯನ್ನು ತೆರೆದಾಗಲೇ ದೇಶವಾಸಿಗಳಿಗೆ ಬಲಿಷ್ಟ ಭಾರತ ಕಟ್ಟುವ ಸೂಚನೆ ಸಿಕ್ಕಿತ್ತು.ಇದರಂತ ಪಶ್ಚಿಮ ಬಂಗಾಳದಲ್ಲಿಯೂ ಕೂಡ ಎಸ್‌ಐಆರ್ ಜಾರಿಗೊಳಿಸುವ ಮೂಲಕ 90 ಲಕ್ಷಕ್ಕೂ ಅಧಿಕ ಅಕ್ರಮಮತದಾರರನ್ನು ಕೈಬಿಡುವ ಮೂಲಕ ದೇಶವಿರೋಧಿ ಶಕ್ತಿಗಳ ಬೆನ್ನು ಮೂಳೆ ಮುರಿಯುವ ಕೆಲಸವನ್ನು ಪ್ರಧಾನಿಗಳು ಮಾಡಿ ದೇಶರಕ್ಷಣೆ ಮಾಡಿದರು. ಇದೇ ಕಾರಣವಾಗಿ ಅಲ್ಲಿನ ಜನತೆ ಈಗ ಸ್ಪಷ್ಟ ಜನಾದೇಶದ ಮೂಲಕ ಬಿಜೆಪಿ ಪಕ್ಷಕ್ಕೆ ಆಶೀರ್ವಾದ ನೀಡಿದ್ದಾರೆ ಎಂದು ಬಣ್ಣಿಸಿದರು.
ಈ ಗೆಲುವಿನ ಹಿಂದೆ "ಪ್ರಧಾನಮಂತ್ರಿ ನರೇಂದ್ರಮೋದಿ, ಗೃಹಸಚಿವ ಅಮಿತ್-ಷಾ ಅವರ ದೂರ ದೃಷ್ಟಿಯ ನಾಯಕತ್ವ, ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಪಕ್ಷದ ಕಾರ್ಯಕರ್ತರ ನಿರಂತರ ಪರಿಶ್ರಮವೇ ಈ ಸಾಧನೆಗೆ ಕಾರಣವಾಗಿದೆ. ಪಶ್ಚಿಮ ಬಂಗಾಳದ ಜನರು ಭ್ರಷ್ಟಾಚಾರ, ಹಿಂಸಾತ್ಮಕ ರಾಜಕಾರಣ ಮತ್ತು ಅಭಿವೃದ್ಧಿಯ ಕೊರತೆಯಿಂದ ಬೇಸತ್ತಿದ್ದರು. 10 ವರ್ಷಗಳ ಏಕ ಚಕ್ರಾಧಿಪತ್ಯವನ್ನು ಕೊನೆಗಾಣಿಸಿ ಬಿಜೆಪಿಯ ಆಡಳಿತಕ್ಕೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಇಂತಹ ಫಲಿತಾಂಶಕ್ಕೆ ಕಾರಣವಾದ ಪ್ರಬುದ್ಧ ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಈ ಜಯಭೇರಿ ದೇಶದಾದ್ಯಂತ ಬಿಜೆಪಿ ಪರ ವಾತಾವರಣ ಮತ್ತಷ್ಟು ಬಲಗೊಂಡಿರುವುದಕ್ಕೆ ಸಾಕ್ಷಿಯಾಗಿದ್ದು, ಮುಂದಿನ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿಯೂ ಅಭಿವೃದ್ಧಿ ಪರ ರಾಜಕಾರಣಕ್ಕೆ ಜನರು ಹೆಚ್ಚಿನ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಿಂತಾಮಣಿ ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್ , ಬಾಗೇಪಲ್ಲಿಯ ಮುನಿರಾಜು ಮಾತನಾಡಿ ಮತ್ತಿತರರು ಮಾತನಾಡಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮುರಳಿಧರ್, ಮಧುಸೂರ್ಯ ನಾರಾಯಣರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಎನ್.ಅಶೋಕ್, ರಾಷ್ಟ್ರೀಯ ಪರಿಷತ್ ಸದಸ್ಯರಾದ ಲಕ್ಷ್ಮೀನಾರಾಯಣ ಗುಪ್ತ, ರಾಜ್ಯ ಪರಿಷತ್ ಸದಸ್ಯರ ಬೈರೇಗೌಡ, ಜಿಲ್ಲಾ ಮಾಧ್ಯಮ ಸಂಚಾಲಕ ವಿ.ಮಧುಚಂದ್ರ ಮಂಡಲದ ಅಧ್ಯಕ್ಷರಾದ ಪ್ರಭಾಕರ್ ರೆಡ್ಡಿ, ತೇಜೇಂದ್ರ ಪಾಪು, ಆನಂದ್ ಗೌಡ, ಕೋಡಿರ್ಲಪ್ಪ, ವೇಣು ಮಾಧವ್, ನರಸಿಂಹರಾಜು, ಗೋವಿಂದರಾಜು, ದೇವರಾಜ್, ಚಿಕ್ಕಬಳ್ಳಾಪುರ ನಗರ ಉಪಾಧ್ಯಕ್ಷರಾದ ಶಶಿಧರ್, ಮಹಿಳಾ ಮೋರ್ಚ ಉಪಾಧ್ಯಕ್ಷರಾದ ಸುಮಿತ್ರ, ನರಸಪ್ಪ, ಕೊಂಡಪ್ಪ, ಅಜಯ್ ಪಾಲ್ ಸಿಂಗ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಂಡಲದ ಪದಾಧಿಕಾರಿಗಳು ಭಾಗವಹಿಸಿದ್ದರು.