ಶಿಡ್ಲಘಟ್ಟ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ(NDA) ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BJP State President B.Y. Vijayendra) ಹೇಳಿದರು.
ನಗರದಲ್ಲಿ ನಡೆದ ಬಿಜೆಪಿ ಸೇವಾ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್(National President Nitin Nabin) ಅವರ ಸೂಚನೆಯಂತೆ ರಾಜ್ಯಾದ್ಯಂತ ಸೇವಾ ಸಂಕಲ್ಪ ಹಾಗೂ ಬೂತ್ ಸಂಕಲ್ಪ ಯಾತ್ರೆ ನಡೆಸಲಾಗುತ್ತಿದೆ. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವುದು ಇದರ ಉದ್ದೇಶವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ ನೇತೃತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಮುನ್ನಡೆಯುತ್ತಿದ್ದು, ವಿಕಸಿತ ಭಾರತ ನಿರ್ಮಾಣ ಅವರ ಗುರಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಹಾಗೂ ಸೌಲಭ್ಯ ತಲುಪಬೇಕು ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: B.Y. Vijayendra: ಬಿಜೆಪಿ ಅಧಿಕಾರಕ್ಕೆ ಬಂದರೆ ಬಾಗೇಪಲ್ಲಿಯ ಅಭಿವೃದ್ಧಿಗೆ ಹೊಸ ದಿಕ್ಕು: ವಿಜಯೇಂದ್ರ
ರಾಜ್ಯ ಸರ್ಕಾರ ರೈತರು, ಹೈನುಗಾರರು ಸೇರಿದಂತೆ ವಿವಿಧ ವರ್ಗಗಳ ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿದ ವಿಜಯೇಂದ್ರ, ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ನೀಡಲಾದ ಹಲವು ಸೌಲಭ್ಯಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಟೀಕಿಸಿದರು. ಬರ ಪರಿಸ್ಥಿತಿಯಲ್ಲೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಕೇಂದ್ರದ ನೆರವಿಗಾಗಿ ಕಾಯದೆ ಮನೆ ನಿರ್ಮಾಣಕ್ಕೆ 5 ಲಕ್ಷ ನೆರವು ನೀಡಿದ್ದರು. ರೈತರೊಂದಿಗೆ ದೀಪಾವಳಿ ಆಚರಿಸಿ ಅವರ ಸಂಕಷ್ಟಕ್ಕೆ ಸ್ಪಂದಿಸಿದ್ದರು ಎಂದು ಸ್ಮರಿಸಿದರು.
ರಾಜ್ಯ ಸರ್ಕಾರದ ಅಬಕಾರಿ ನೀತಿ(Excise Policy) ಯನ್ನು ಟೀಕಿಸಿದ ಅವರು, ಮದ್ಯದ ಲಭ್ಯತೆ ಹೆಚ್ಚಿಸುವ ಮೂಲಕ ಸರ್ಕಾರ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿಲ್ಲ ಎಂದು ಆರೋಪಿಸಿದರು. ಹೈನುಗಾರರಿಗೆ ನೀಡುತ್ತಿದ್ದ ಪ್ರೋತ್ಸಾಹಧನಕ್ಕೂ ಕಡಿವಾಣ ಹಾಕಲಾಗಿದೆ ಎಂದರು.
ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷವಲ್ಲ. ಆದರೆ ದೇಶದ್ರೋಹಿ ಚಟುವಟಿಕೆಗಳು ಹಾಗೂ ಪಾಕಿಸ್ತಾನ ಪರ ಘೋಷಣೆಗಳಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ. ಎಲ್ಲ ವರ್ಗಗಳ ವಿಶ್ವಾಸ ಪಡೆದು ಪಕ್ಷವನ್ನು ಸಂಘಟಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಹೆಣ್ಣು ಮಗು ಶಾಪವಲ್ಲ ಎಂಬ ಸಂದೇಶದೊAದಿಗೆ ಭಾಗ್ಯಲಕ್ಷ್ಮಿ ಯೋಜನೆ, 108 ಆಂಬುಲೆನ್ಸ್ ಸೇವೆ ಸೇರಿದಂತೆ ಹಲವು ಯೋಜನೆಗಳನ್ನು ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು. ಮುಂದಿನ ಜಿಪಂ ಮತ್ತು ತಾಪಂ ಚುನಾವಣೆಗಳಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡುವ ಮೂಲಕ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಬೇಕು ಎಂದರು.
ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್ ಅವರನ್ನು ಗೆಲ್ಲಿಸುವ ಮೂಲಕ ಪಕ್ಷದ ಬಲವರ್ಧನೆಗೆ ಮುನ್ನುಡಿ ಬರೆಯಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಹಣದ ಬಲದಿಂದ ಚುನಾವಣೆ ಗೆಲ್ಲಲು ಮುಂದಾಗುತ್ತಿದೆ ಎಂದು ಆರೋಪಿಸಿದ ಅವರು, ಕಾರ್ಯಕರ್ತರು ಹಣಕ್ಕಿಂತ ಗುಣಕ್ಕೆ ಆದ್ಯತೆ ನೀಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.
ನೀರಾವರಿ ಸಮಸ್ಯೆ ಬಗೆಹರಿಸಲು ಕ್ರಮ: ರಾಮಚಂದ್ರ ಗೌಡ
ಶಿಡ್ಲಘಟ್ಟದ ಬರಡು ನೆಲದಲ್ಲಿ ಬಿಜೆಪಿಯನ್ನು ಬಲಪಡಿಸುವ ಉದ್ದೇಶದಿಂದ ವಿಜಯೇಂದ್ರ ಅವರು ಆಗಮಿಸಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಶಿಡ್ಲಘಟ್ಟ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಕೃಷ್ಣಾ ನದಿ ನೀರನ್ನು ಜಿಲ್ಲೆಗೆ ತರಲು ಕ್ರಮ ಕೈಗೊಳ್ಳಬೇಕು. ನೀರಿನ ಕೊರತೆಯಿಂದ ಫಲವತ್ತಾದ ಭೂಮಿ ಹಾಳಾಗಿ ಬಯಲು ಪ್ರದೇಶವಾಗುತ್ತಿರುವ ಪರಿಸ್ಥಿತಿಯನ್ನು ಅರಿತು ತಾವು ೨೦೨೮ಕ್ಕೆ ಮುಖ್ಯಮಂತ್ರಿ ಹುದ್ದೆಗೇರಿದ ಕೂಡಲೇ ಪರಿಹಾರ ಕಲ್ಪಿಸಬೇಕು ಎಂದು ವಿಜಯೇಂದ್ರ ಅವರನ್ನು ಒತ್ತಾಯಿಸಿದರು.
2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಸಂಘಟನೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಪಯಣದ ಸವಿನೆನಪಿಗಾಗಿ ಸೇವಾ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾಂಗ್ರೆಸ್ ಭ್ರಷ್ಟಾಚಾರದ ಅಸ್ತ್ರ ನೀಡುತ್ತಿದೆ: ಮುನಿಸ್ವಾಮಿ
ಮಾಜಿ ಸಂಸದ ಎಸ್.ಮುನಿಸ್ವಾಮಿ(Ex MP S Muniswamy) ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಸೇವಾ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಪ್ರತಿದಿನವೂ ವಿರೋಧ ಪಕ್ಷಗಳಿಗೆ ಭ್ರಷ್ಟಾಚಾರದ ಆರೋಪಕ್ಕೆ ಹೊಸ ಅಸ್ತ್ರಗಳನ್ನು ನೀಡುತ್ತಾ ತನ್ನ ಹಳ್ಳ ತಾನೇ ತೋಡಿಕೊಳ್ಳುತ್ತಿದೆ ಎಂದು ಟೀಕಿಸಿದರು.
2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ವಿಧಾನಸಭೆಯ 224 ಕ್ಷೇತ್ರಗಳ ಪೈಕಿ 160 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ತಮಗೂ ಶಾಸಕರಾಗುವ ಆಸೆ ಇದೆ ಎಂದು ಹೇಳುವ ಮೂಲಕ ಬಂಗಾರಪೇಟೆ ಕ್ಷೇತ್ರ ದಿಂದ ಬಿಜೆಪಿ ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿದ ನಂತರ ವಂದೇ ಮಾತರಂ ಗೀತೆ (Vande Mataram)ಯನ್ನು ಪೂರ್ಣ ಪ್ರಮಾಣದಲ್ಲಿ ಹಾಡಿದ್ದು ವಿಶೇಷವಾಗಿತ್ತು.ಇದೇ ವೇಳೆ ರೈತರೊಂದಿಗೆ ಸಂವಾದ ನಡೆಸಿ ನೀರಾವರಿ ಸಮಸ್ಯೆ, ಕೃಷಿ ಉತ್ಪನ್ನ ಆಧಾರಿತ ಮಾರುಕಟ್ಟೆ, ಕೋಲ್ಡ್ ಸ್ಟೋರೇಜ್ ಸರಿ ಎಲ್ಲಾ ಸಮಸ್ಯೆ ಸರಿಪಡಿಸಲು ಕ್ರಮವಹಿಸುವ ಭರವಸೆ ನೀಡಿದರು.
ವೇದಿಕೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ(Y A Narayanaswamy), ಮಾಜಿ ಶಾಸಕ ರಾಜಣ್ಣ, ತಮ್ಮೇಶ್ ಗೌಡ, ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ ಗೌಡ, ನಗರ ಮಂಡಲ ಅಧ್ಯಕ್ಷ ದೇವರಾಜ್, ಮಾಜಿ ಜಿಲ್ಲಾ ಉಪಾಧ್ಯಕ್ಷ ಸುರೇಂದ್ರ ಗೌಡ, ಜಿಲ್ಲಾ ಕಾರ್ಯದರ್ಶಿ ಮಧುಸೂದನ್, ಕನಕ ಪ್ರಸಾದ್, ನಂದೀಶ್, ಪ್ರೀತಂ ಗೌಡ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಚಿಂತಾಮಣಿ ವೇಣುಗೋಪಾಲ್, ಬ್ಯಾಟರಂಗೇಗೌಡ, ಸತ್ಯನಾರಾಯಣ ರಾವ್, ಆಂಜನೇಯ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.