ಚಿಕ್ಕಬಳ್ಳಾಪುರ: ಸುಳ್ಳು ವೇಗವಾಗಿ ಹರಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯುವಜನರು ಸತ್ಯವನ್ನು ನುಡಿಯುವ ಧೈರ್ಯ ಬೆಳೆಸಿಕೊಳ್ಳಬೇಕು. ಸತ್ಯದ ಹಾದಿಯಲ್ಲಿ ಮುನ್ನಡೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ(B.Y.Vijayendra) ಕರೆ ನೀಡಿದರು.
ಮಡಿಯಾಲ ನಾರಾಯಣ ಭಟ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಆಯೋಜಿಸಿದ್ದ ವಿಶ್ವ ಯುವ ಸಮಾವೇಶದಲ್ಲಿ ಮಾತನಾಡಿದರು.
ಕಳೆದ ಕೆಲವು ವರ್ಷಗಳಿಂದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಂಪರ್ಕದಲ್ಲಿದ್ದು, ಅವರ ಆಧ್ಯಾತ್ಮಿಕ ಚಿಂತನೆಗಳು ಸೇವಾ ಕಾರ್ಯಗಳ ಮೂಲಕ ಸಾಕಾರಗೊಳ್ಳುತ್ತಿರುವುದನ್ನು ಕಂಡಿದ್ದೇನೆ. ಉಚಿತ ಶಿಕ್ಷಣ, ಮಕ್ಕಳಿಗೆ ಸಾಯಿ ಶ್ಯೂರ್ ಪೌಷ್ಟಿಕ ಉಪಾಹಾರ ಹಾಗೂ ಉಚಿತ ವೈದ್ಯಕೀಯ ಸೇವೆಗಳು ಕರುಣೆ ಮತ್ತು ಮಾನವೀಯತೆಯ ಕಾರ್ಯರೂಪದ ಉದಾಹರಣೆಗಳಾಗಿವೆ ಎಂದು ಹೇಳಿದರು.
ಇದನ್ನೂ ಓದಿ: B Y Vijayendra: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಜಿಲ್ಲಾ ಬಿಜೆಪಿ ವತಿಯಿಂದ ಆತ್ಮೀಯ ಸ್ವಾಗತ
ಪಶ್ಚಿಮ ಬಂಗಾಳದ ಸಚಿವ ಅಶೋಕ್ ಕುಮಾರ್ ದಿಂಡಾ ಮಾತನಾಡಿ, ಸತ್ಯ ಸಾಯಿ ಗ್ರಾಮಕ್ಕೆ ಮೂರನೇ ಬಾರಿ ಭೇಟಿ ನೀಡುತ್ತಿದ್ದೇನೆ. ಇಲ್ಲಿನ ಆಸ್ಪತ್ರೆ ಏಳು ನಕ್ಷತ್ರಗಳ ಸೌಲಭ್ಯ ಹೊಂದಿರುವ ಆಸ್ಪತ್ರೆಯಂತಿದೆ. ಇಂತಹ ಅತ್ಯುತ್ತಮ ವ್ಯವಸ್ಥೆಯನ್ನು ಬೇರೆಲ್ಲಿಯೂ ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಹಾಗೂ ಅಶೋಕ್ ಕುಮಾರ್ ದಿಂಡಾ ಅವರನ್ನು ಸನ್ಮಾನಿಸಲಾಯಿತು. ಗುಜರಾತ್ನ ಪೋರ್ಬಂದರ್ನ ಸಾಂದೀಪನಿ ವಿದ್ಯಾನಿಕೇತನದ ಸ್ಥಾಪಕ ಭೈಶ್ರೀ ರಮೇಶ್ಭಾಯಿ ಓಝಾ ವಿಡಿಯೊ ಸಂದೇಶದ ಮೂಲಕ ಶುಭ ಹಾರೈಸಿದರು. ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಆಶೀರ್ವಚನ ನೀಡಿದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಕರ್ನಾಟಕದ ಹಿರಿಮೆಯನ್ನು ಸ್ಮರಿಸಿ, ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದರು. ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಪರಿಕಲ್ಪನೆಯ ಆಶಯವನ್ನು ವಿವರಿಸಿದ ಅವರು, ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣದ ವಿಶ್ವಮಾನವತೆಯ ಸಂದೇಶ, ಬಸವಣ್ಣ ನವರ ‘ಇವ ನಮ್ಮವ’ ಎಂಬ ವಚನ ಹಾಗೂ ರವೀಂದ್ರನಾಥ ಟ್ಯಾಗೋರರ ಶಾಂತಿನಿಕೇತನದ ಆಶಯಗಳನ್ನು ಉಲ್ಲೇಖಿಸಿದರು.
ಬಳಿಕ ನಾದ ಗುರುಕುಲಂನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ‘ತ್ರಿವೇಣಿ’ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಅಪೊಲೊ–ಎಸ್ಎಸ್ಎಸ್ಯುಎಚ್ಇ ನಡುವೆ ಒಡಂಬಡಿಕೆ: ಅಪೊಲೊ ಹಾಸ್ಪಿಟಲ್ಸ್ ಎಜುಕೇಷನಲ್ ಆ್ಯಂಡ್ ರಿಸರ್ಚ್ ಫೌಂಡೇಷನ್ (ಎಎಚ್ಇಆರ್ಎಫ್) ಹಾಗೂ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ (ಎಸ್ಎಸ್ಎಸ್ಯುಎಚ್ಇ) ನಡುವೆ ಒಡಂಬಡಿಕೆ ಏರ್ಪಟ್ಟಿತು. ಅಪೊಲೊ ಪರವಾಗಿ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ.ಎಂ.ವಿ.ಶಶಿಧರ್ ಹಾಗೂ ವಿಶ್ವವಿದ್ಯಾಲಯದ ಪರವಾಗಿ ಆಡಳಿತ ವಿಭಾಗದ ರಿಜಿಸ್ಟ್ರಾರ್ ಡಾ.ಹನುಮಂತ ರಾವ್ ನಾಯ್ಡು ಒಪ್ಪಂದದ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.