ಮತದಾರರೇ ಗಮನಿಸಿ: ಎನ್ಯೂಮರೇಷನ್ ನಮೂನೆ ನೀಡದಿದ್ದರೆ ಕರಡು ಪಟ್ಟಿ ಯಿಂದ ಹೆಸರು ಔಟ್!
ಚಿಂತಾಮಣಿ: ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗಾಗಿ(ಎಸ್.ಐ.ಆರ್)ಮತಗಟ್ಟೆ ಅಧಿಕಾರಿಗಳು ಜೂನ್ 30ರಿಂದ ಜುಲೈ 29 ರವರೆಗೆ ಮನೆ ಮನೆಗೂ ಬೇಟಿ ನೀಡಿ ಮತದಾರರಿಗೆ ಎನ್ಯೂಮರೇಷನ್ ನಮೂನೆಯನ್ನು ನೀಡುತ್ತಾರೆ ಎಂದು ನಗರಸಭೆ ಆಯುಕ್ತ ಜಿ.ಎನ್.ಚಲಪತಿ ತಿಳಿಸಿದರು.
ನಗರಸಭೆಯಲ್ಲಿ ಎಸ್.ಐ.ಆರ್ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಅಂಗವಾಗಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಗರದ ನಾಗರಿಕರು ಕಡ್ಡಾಯವಾಗಿ ಸದರಿ ನಮೂನೆ ಪಡೆದುಕೊಂಡು ಭರ್ತಿ ಮಾಡಿ ಬಿ.ಎಲ್.ಒ ಗೆ ಹಿಂದಿರುಗಿಸಬೇಕು. ಆಗ ಮಾತ್ರ ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಪ್ರಕಟವಾಗುತ್ತದೆ. ನಮೂನೆಯನ್ನು ನೀಡದಿದ್ದರೆ ಮತದಾರರು ಕರುಡು ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬೇಕಾಗುತ್ತದೆ. ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು ಎಂಬುದು ಎಸ್.ಐ.ಆರ್ ಮುಖ್ಯ ಗುರಿಯಾಗಿದೆ ಎಂದರು.
ಇದನ್ನೂ ಓದಿ: Chinthamani News: ಮಿತಿಮೀರಿದ ಅಕ್ರಮ ಕಸಾಯಿ ಖಾನೆಗಳ ದಂಧೆ: ಪವಿತ್ರ ಕ್ಷೇತ್ರಗಳ ಬಳಿಯೇ ಗೋಮಾಂಸ ಮಾರಾಟ
ಮತದಾರರ ವಯಸ್ಸು 40 ವರ್ಷಕ್ಕಿಂತ ಹೆಚ್ಚಾಗಿದ್ದು 2002 ರ ಪಟ್ಟಿಯಲ್ಲಿ ಹೆಸರಿದ್ದರೆ ಯಾವುದೇ ದಾಖಲೆಗಳ ಅವಶ್ಯಕತೆ ಇರುವುದಿಲ್ಲ. ಸದರಿ ಪಟ್ಟಿಯಲ್ಲಿನ ವಿಧಾನಸಭಾ ಕ್ಷೇತ್ರದ ಸಂಖ್ಯೆ,ಭಾಗದ ಸಂಖ್ಯೆ, ಕ್ರಮ ಸಂಖ್ಯೆಯನ್ನು ಮತಗಟ್ಟೆ ಅಧಿಕಾರಿಗೆ ನೀಡಬೇಕು.
ಪ್ರತಿಯೊಂದು ಮತಗಟ್ಟೆಗೂ ಮತಗಟ್ಟೆ ಅಧಿಕಾರಿ ಇರುತ್ತಾರೆ. ಮತಗಟ್ಟೆ ಮೇಲ್ವಿಚಾರಕರು ಇರುತ್ತಾರೆ. ಅವರನ್ನು ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಮತದಾರರ ವಯಸ್ಸು 40 ವರ್ಷಕ್ಕಿಂತ ಕಡಿಮೆ ಇದ್ದು, 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ತಂದೆ/ತಾಯಿ,ತಾತ/ಅಜ್ಜಿ ಅವರು 2002ರ ಮತದಾರರ ಪಟ್ಟಿಯಲ್ಲಿನ ವಿಧಾನಸಭಾ ಕ್ಷೇತ್ರ,ಭಾಗದ ಸಂಖ್ಯೆ,ಕ್ರಮ ಸಂಖ್ಯೆಯನ್ನು ಮತಗಟ್ಟೆ ಅಧಿಕಾರಿಗೆ ನೀಡಬೇಕು. ಕರುಡು ಮತದಾರರ ಪಟ್ಟಿಯನ್ನು 2026ರ ಆಗಸ್ಟ್ 5ರಂದು ಪ್ರಕಟಿಸ ಲಾಗುತ್ತದೆ.
ಪ್ರತಿಯೊಬ್ಬ ಮತದಾರರು ಕರುಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಮತಗಟ್ಟೆ ಅಧಿಕಾರಿ ಅಥವಾ ಬೂತ್ ಮಟ್ಟದ ಏಜೆಂಟರಿಂದ ಖಚಿತಪಡಿಸಿಕೊಳ್ಳಬೇಕು. ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಆಕ್ಷೇಪಣೆಗಳನ್ನು ಅಕ್ಟೋಬರ್ 3ರ ಒಳಗಾಗಿ ವಿಲೇವಾರಿ ಮಾಡಿ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.