ಗುಡಿಬಂಡೆ: ರಕ್ತದಾನವು ಕೇವಲ ರಕ್ತ ನೀಡುವ ಕಾರ್ಯವಲ್ಲ, ಅಗತ್ಯವಿರುವವರ ಜೀವ ಉಳಿಸುವ ಮಹತ್ವದ ಸೇವೆಯಾಗಿದೆ. ರಕ್ತದಾನದ ಮೂಲಕ ಸಮಾಜದಲ್ಲಿ ಮಾನವೀಯತೆ, ಸಹಕಾರ ಹಾಗೂ ಸೇವಾ ಮನೋಭಾವ ಬೆಳೆಯುತ್ತದೆ ಎಂದು ರಾಜಯೋಗಿನಿ ಪದ್ಮಾ ತಿಳಿಸಿದರು.
ಬ್ರಹ್ಮಕುಮಾರೀಸ್ ಸಂಸ್ಥೆಯ ಪೂರ್ವ ಮುಖ್ಯಸ್ಥೆ ದಾದಿ ಪ್ರಕಾಶಮಣಿಜೀ ಅವರ 19ನೇ ಪುಣ್ಯ ಸ್ಮರಣೆಯ ಅಂಗವಾಗಿ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಬ್ರಹ್ಮಕುಮಾರೀಸ್ ಸಂಸ್ಥೆಯು ಜ್ಞಾನ ದಾನ, ಯೋಗ ದಾನ ಹಾಗೂ ರಕ್ತದಾನದ ಮೂಲಕ ಸಮಾಜ ಸೇವೆಯ ಸಂದೇಶವನ್ನು ಸಾರುತ್ತಿದೆ. ಜ್ಞಾನ ದಾನದಿಂದ ಜೀವನದಲ್ಲಿ ಬೆಳಕು ಮೂಡಿ, ಸರಿಯಾದ ದಿಕ್ಕಿನಲ್ಲಿ ಸಾಗಲು ಸ್ಪಷ್ಟತೆ ದೊರೆಯುತ್ತದೆ. ಯೋಗ ಮತ್ತು ಧ್ಯಾನದಿಂದ ಆತ್ಮಶಕ್ತಿ, ಸಂತೋಷ, ಶಾಂತಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಅದೇ ರೀತಿ ರಕ್ತದಾನದ ಮೂಲಕ ಇತರರ ಜೀವ ಉಳಿಸುವ ಸೇವಾ ಮನೋಭಾವ ಬೆಳೆಸಿಕೊಳ್ಳಬಹುದು. ರಕ್ತದಾನವು ಅಗತ್ಯವಿರುವ ವ್ಯಕ್ತಿಯ ಜೀವನದಲ್ಲಿ ಆಶಾಕಿರಣ ಮೂಡಿಸುವ ಜೀವದಾನ, ಮಹಾದಾನ ಹಾಗೂ ಪುಣ್ಯದಾನ ವಾಗಿದೆ. ಆದ್ದರಿಂದ ರಕ್ತದಾನ ಮಾಡುವ ಸಂದರ್ಭದಲ್ಲಿ ಸದುದ್ದೇಶ ಹಾಗೂ ಉತ್ತಮ ಆಲೋಚನೆ ಗಳೊಂದಿಗೆ, ‘ನನ್ನ ರಕ್ತದಿಂದ ಮತ್ತೊಬ್ಬರ ಜೀವನಕ್ಕೆ ಹೊಸ ಆಶಾಕಿರಣ ದೊರೆಯಲಿ’ ಎಂಬ ಶುಭ ಸಂಕಲ್ಪದಿಂದ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: Chikkaballapur News: ಆಯುಷ್ ಆಸ್ಪತ್ರೆ ಕಾಮಗಾರಿ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚನೆ
ನಂತರ ಬಿಜೆಪಿ ಮುಖಂಡ ನಾಗರಾಜು ಮಾತನಾಡಿ, ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಅದು ಆರೋಗ್ಯವಂತ ದಾನಿಗಳಿಂದಲೇ ಲಭ್ಯವಾಗುತ್ತದೆ. ಆಸ್ಪತ್ರೆಗಳಲ್ಲಿ ರಕ್ತದ ಅವಶ್ಯಕತೆ ನಿರಂತರವಾಗಿರುವುದರಿಂದ ಅರ್ಹರು ನಿಯಮಿತವಾಗಿ ರಕ್ತದಾನ ಮಾಡುವುದು ಅಗತ್ಯವಾಗಿದೆ. ರಕ್ತವನ್ನು ದೀರ್ಘಕಾಲ ಸಂಗ್ರಹಿಸಿಡಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ನಿರಂತರ ರಕ್ತದಾನಕ್ಕೆ ಹೆಚ್ಚಿನ ಮಹತ್ವವಿದೆ. ರಕ್ತದಾನ ಮಾಡುವ ಮೊದಲು ದಾನಿಯ ಆರೋಗ್ಯವನ್ನು ಪರಿಶೀಲಿಸಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಅರ್ಹರಾಗಿರುವವರು ಮಾತ್ರ ರಕ್ತದಾನ ಮಾಡುವುದರಿಂದ, ದಾನಿಯ ಆರೋಗ್ಯಕ್ಕೂ ಅಗತ್ಯವಾದ ಮುನ್ನೆಚ್ಚರಿಕೆ ವಹಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರೀಸ್ ಸಂಸ್ಥೆಯ ಹೇಮಾ ಬಿ.ಕೆ., ಲಕ್ಷ್ಮೀಪತಿ, ಲಕ್ಷ್ಮೀನರಸಮ್ಮ, ಪದ್ಮಜಾ, ಇಂದಿರಾ ಗ್ರಾಮವಿಕಾಸದ ಪ್ರತಿನಿಧಿಗಳು, ಸಂಜೀವಿನಿ ರಕ್ತಕೇಂದ್ರದ ಆಯೋಜಕ ಅರುಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಹಲವಾರು ರಕ್ತದಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು.