ಗುಡಿಬಂಡೆ: ರಕ್ಷಾಬಂಧನ ಹಬ್ಬ(Rakshabandhan)ವು ಕೇವಲ ರಾಖಿ ಕಟ್ಟುವ ಸಂಪ್ರದಾಯಕ್ಕೆ ಸೀಮಿತವಾಗದೆ, ಸಮಾಜದಲ್ಲಿ ಪ್ರೀತಿ, ಸಹೋದರತ್ವ, ಪರಸ್ಪರ ಗೌರವ ಮತ್ತು ರಕ್ಷಣೆಯ ಭಾವನೆಯನ್ನು ಬೆಳೆಸುವ ಹಬ್ಬವಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ(Prajapeeta Brahmakumari) ಈಶ್ವರೀಯ ವಿಶ್ವವಿದ್ಯಾಲಯದ ಗುಡಿಬಂಡೆ ಶಾಖೆಯ ಬಿ.ಕೆ.ಹೇಮಾ ಅಕ್ಕ ಹೇಳಿದರು.
ರಕ್ಷಾಬಂಧನದ ಅಂಗವಾಗಿ ಬಿ.ಕೆ.ಹೇಮಾ ಅಕ್ಕ ಅವರು ಗುಡಿಬಂಡೆ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸವಿತಾ ರುದ್ರಗೌಡ ಚಿಕ್ಕನಗೌಡರ್, ಹೆಚ್ಚುವರಿ ನ್ಯಾಯಾ ಲಯದ ನ್ಯಾಯಾಧೀಶರಾದ ವರುಣ್ ಆರ್., ತಹಶೀಲ್ದಾರ್ ಸಿಗ್ಬತುಲ್ಲ, ಡಿವೈಎಸ್‌ಪಿ ಪ್ರಕಾಶ್, ಸರ್ಕಲ್ ಇನ್‌ಸ್ಪೆಕ್ಟರ್ ಮುನಿಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿಕಾಸ್, ಮುಖ್ಯಾಧಿಕಾರಿ ಆರತಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಹೋದರ, ಸಹೋದರಿಯರಿಗೆ ರಾಖಿ ಕಟ್ಟಿ ಶುಭಾಶಯಗಳನ್ನು ಸಲ್ಲಿಸಿದರು.
ಇದನ್ನೂ ಓದಿ: Rakhi from Brahmakumaris: ಜಿಲ್ಲಾಧಿಕಾರಿ, ತಹಸೀಲ್ದಾರ್‌ಗೆ ಬ್ರಹ್ಮಕುಮಾರಿಯರಿಂದ ರಾಖಿ
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಕೆ. ಹೇಮಾ ಅಕ್ಕ, ರಕ್ಷಾಬಂಧನವು ಸಹೋದರ-ಸಹೋದರಿ ಯರ ನಡುವಿನ ಪ್ರೀತಿ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುವ ವಿಶೇಷ ದಿನವಾಗಿದೆ. ಆದರೆ ಇದರ ಸಂದೇಶ ಕೇವಲ ಕುಟುಂಬದ ಸಂಬಂಧಗಳಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ಮನುಷ್ಯನ ನಡುವೆಯೂ ಪ್ರೀತಿ, ವಾತ್ಸಲ್ಯ, ಜವಾಬ್ದಾರಿ, ಕರ್ತವ್ಯ ಹಾಗೂ ಆತ್ಮೀಯತೆಯ ಸಂಬಂಧ ಬೆಳೆಸುವ ಮಹತ್ವವನ್ನು ಈ ಹಬ್ಬ ಸಾರುತ್ತದೆ ಎಂದು ತಿಳಿಸಿದರು.
ಸನಾತನ ಧರ್ಮದ ಪರಂಪರೆಯಲ್ಲಿ ರಕ್ಷಾಬಂಧನಕ್ಕೆ ವಿಶೇಷ ಮಹತ್ವವಿದ್ದು, ರಾಖಿ ಕಟ್ಟುವ ಮೂಲಕ ಪರಸ್ಪರ ರಕ್ಷಣೆ, ಗೌರವ ಮತ್ತು ಸದ್ಭಾವನೆಯ ಸಂಕಲ್ಪ ಮಾಡಲಾಗುತ್ತದೆ.
ಜೀವನದಲ್ಲಿ ಎದುರಾಗುವ ಕಷ್ಟಗಳು ಮತ್ತು ತೊಂದರೆಗಳನ್ನು ನಿವಾರಿಸಿಕೊಂಡು ಶಾಂತಿ, ನೆಮ್ಮದಿ ಹಾಗೂ ಸಂತೋಷದಿಂದ ಬದುಕಲು ಆಧ್ಯಾತ್ಮಿಕ ಚಿಂತನೆ ಅಗತ್ಯವಾಗಿದೆ. ಸೃಷ್ಟಿಯ ಪ್ರತಿಯೊಬ್ಬರ ರಕ್ಷಣೆಗೆ ಪರಮಾತ್ಮ ಬಂದಿದ್ದು, ಮಾನವ ಜೀವನದ ಸಂಕಷ್ಟಗಳನ್ನು ನಿವಾರಿಸಿ ಕೊಳ್ಳಲು ಆಧ್ಯಾತ್ಮಿಕ ಜ್ಞಾನ ಮತ್ತು ದೈವಿಕ ಶಕ್ತಿಯ ಮಾರ್ಗದರ್ಶನ ಅಗತ್ಯ ಎಂದರು. ಈ ಸಂದರ್ಭದಲ್ಲಿ ಬಿ.ಕೆ. ಇಂದಿರಾ ಅಕ್ಕ ಸೇರಿದಂತೆ ಹಲವರಿದ್ದರು.