ಚಿಕ್ಕಬಳ್ಳಾಪುರ: ಕೇಂದ್ರ ಹಣಕಾಸು ಸಚಿವಾಲಯ(Finance Ministry)ದ ಮಾರ್ಗದರ್ಶನದಲ್ಲಿ ಜನಸಾಮಾನ್ಯರಿಗೆ ವಿವಿಧ ಬ್ಯಾಂಕಿಂಗ್ ಸೇವೆ(Banking Service)ಗಳು ಮತ್ತು ಸರ್ಕಾರದ ಹಣಕಾಸು ಯೋಜನೆಗಳ ಪ್ರಯೋಜನ ತಲುಪಿಸುವ ಉದ್ದೇಶದಿಂದ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ (ಎಸ್ಎಲ್ಬಿಸಿ), ಕರ್ನಾಟಕ ವತಿಯಿಂದ ಹಮ್ಮಿಕೊಂಡಿರುವ ಹಣಕಾಸು ಸೇರ್ಪಡೆ ಸ್ಯಾಚುರೇಷನ್ ಅಭಿಯಾನ( Financial Inclusion Saturation Campaign)ಕ್ಕೆ ಚಿಕ್ಕಬಳ್ಳಾಪುರ ದಲ್ಲಿ ಚಾಲನೆ ನೀಡಲಾಯಿತು.
ನಗರದ ಕಚೇರಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್(Canara Bank) ಕಾರ್ಯ ನಿರ್ವಾಹಕ ನಿರ್ದೇಶಕ ಬವೇಂದ್ರಕುಮಾರ್, ಜಿಲ್ಲಾ ಪಂಚಾಯಿತಿ ಸಿಪಿಒ ನಿರ್ಮಲಾ, ನಬಾರ್ಡ್(NABARD)ನ ಡಾ.ಸುರೇಂದ್ರ ಕುಮಾರ್, ಭಾರತೀಯ ರಿಸರ್ವ್ ಬ್ಯಾಂಕ್(RBI)ನ ಜನರಲ್ ಮ್ಯಾನೇಜರ್ ಮೀನಾಕ್ಷಿ ಗುಂಜು ಹಾಗೂ ಎಸ್ಎಲ್ಬಿಸಿ ವಿಭಾಗೀಯ ವ್ಯವಸ್ಥಾಪಕ ಶ್ರೀನಾಥ್ ಜೋಶಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಅ.21ರಿಂದ ಡಿಸೆಂಬರ್ 31ರವರೆಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾ ಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಭಿಯಾನ ನಡೆಯಲಿದ್ದು, ಅರ್ಹ ಫಲಾನುಭವಿ ಗಳಿಗೆ ವಿವಿಧ ಬ್ಯಾಂಕಿಂಗ್ ಸೇವೆಗಳು ಹಾಗೂ ಸರ್ಕಾರಿ ಯೋಜನೆಗಳ ಪ್ರಯೋಜನ ತಲುಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಅಭಿಯಾನದಡಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಮತ್ತು ಅಟಲ್ ಪಿಂಚಣಿ ಯೋಜನೆಗಳಿಗೆ ನೋಂದಣಿ ಮಾಡಲಾಗುತ್ತದೆ. ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆ ತೆರೆಯುವುದು, ನಿಷ್ಕ್ರಿಯ ಖಾತೆಗಳನ್ನು ಪುನಃ ಸಕ್ರಿಯಗೊಳಿಸುವುದು, ಮರು-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹಾಗೂ ನಾಮಿನಿ ವಿವರಗಳನ್ನು ನವೀಕರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮುಂದುವರಿದು, ಹಕ್ಕು ಪಡೆಯದ ಠೇವಣಿ ಮತ್ತು ಹಣಕಾಸು ಆಸ್ತಿಗಳನ್ನು ಪತ್ತೆಹಚ್ಚಲು ನೆರವು ನೀಡಲಾಗುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಲು ಹಾಗೂ ಬೆಳೆ ವಿಮೆ ಯೋಜನೆಗೆ ನೋಂದಾಯಿಸಿಕೊಳ್ಳಲು ಸಹಾಯ ಒದಗಿಸಲಾಗುತ್ತದೆ ಎಂದು ಹೇಳಿದರು
ಇದೇ ವೇಳೆ ಡಿಜಿಟಲ್ ವಂಚನೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವೀಡಿಯೊ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಆಡಿಟೋರಿಯಂ ಮುಂಭಾಗದಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಬ್ಯಾಂಕ್ ಮಿತ್ರರು ವಿವಿಧ ಮಳಿಗೆಗಳನ್ನು ತೆರೆದು, ಅರ್ಹ ಫಲಾನುಭವಿಗಳ ನೋಂದಣಿ ಮತ್ತು ಬ್ಯಾಂಕಿಂಗ್ ಸೇವೆಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೆನರಾ ಬ್ಯಾಂಕ್ ಕೇಂದ್ರ ಕಚೇರಿಯ ಸಬ್ಸಿಡಿ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ಸುನಿಲ್ ಕುಮಾರ್ ಯಾದವ್ ಹಾಗೂ ಚಿಕ್ಕಬಳ್ಳಾಪುರ ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್ ಕುಮಾರ್ ಉಪಸ್ಥಿತರಿದ್ದರು.